ಭಟ್ಕಳದ ನದಿ ದುರಂತದಲ್ಲಿ 11 ಮಂದಿಯನ್ನು ಕಳೆದುಕೊಂಡ ಕುಟುಂಬಕ್ಕೆ ಶಾಸಕ ಮಂಕಾಳ ವೈದ್ಯ ಆಸರೆಯಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದು, ಆ ಕುಟುಂಬದ ಸದಸ್ಯರೊಬ್ಬರಿಗೆ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದರ ಜೊತೆಗೆ, ಮೃತರ ನೆನಪಿಗಾಗಿ ಸಸಿಗಳನ್ನು ನೆಟ್ಟು ಮಾನವೀಯತೆ ಮೆರೆದಿದ್ದಾರೆ.

ಭಟ್ಕಳ (ಜೂ.6): ಕಳೆದ ತಿಂಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಇತಿಹಾಸದಲ್ಲಿ ಹಿಂದೆಂದೂ ಆಗದಂಥ ದುರ್ಘಟನೆ ನಡೆದಿತ್ತು. ಕಳಿನಡ ಹೆಕ್ಕಲು ಹೋಗಿ ಹೊಳೆಗೆ ಇಳಿದಿದ್ದ ಒಂದೇ ಕುಟುಂಬದ 11 ಮಂದಿ ವೆಂಕಟಾಪುರ ನದಿಯ ಆಳ ಅಂದಾಜಿಸಲು ಆಗದೆ ಸಾವು ಕಂಡಿದ್ದರು. ತಟ್ಟಿಹಕ್ಕಲ ಪ್ರದೇಶದಲ್ಲಿ ನಡೆದಿದ್ದ ಘಟನೆಗೆ ಪ್ರಧಾನಿ, ರಾಷ್ಟ್ರಪತಿ ಆದಿಯಾಗಿ ಎಲ್ಲರೂ ಮರುಕ ವ್ಯಕ್ತಪಡಿಸಿದ್ದರು. ಆ ಹಂತದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಸರ್ಕಾರದ ವತಿಯಿಂದ ಹಾಗೂ ಮೀನುಗಾರಿಕಾ ಇಲಾಖೆ ವತಿಯಿಂದ ದೊಡ್ಡ ಮಟ್ಟದ ಸಹಾಯ ಹಸ್ತ ಚಾಚಿದ್ದರು. ಒಂದೊಂದು ಕುಟುಂಬಕ್ಕೆ ಅಂದಾಜು 16 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮವಹಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಮಂಕಾಳ ವೈದ್ಯ, ಜೂನ್‌.5 ರಂದು ತಮ್ಮ ಹುಟ್ಟುಹಬ್ಬದ ದಿನ ದುರಂತದಲ್ಲಿ ಸಾವು ಕಂಡ ಕುಟುಂಬದ ಸದಸ್ಯರೊಬ್ಬನಿಗೆ ಭಟ್ಕಳದ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ದೊರಕಿಸಿಕೊಡುವ ಮೂಲಕ ಸಹಾಯಹಸ್ತ ಚಾಚಿದ್ದಾರೆ.

ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದು, 'ನನ್ನ ಹುಟ್ಟು ಹಬ್ಬದ ದಿನದಂದು 11 ಜನ ಮೃತಪಟ್ಟ ಆ ಕುಟುಂಬದ ಒಬ್ಬನಿಗೆ ನಮ್ಮದೇ ಹಿತೈಷಿ ಬ್ಯಾಂಕ್ ಆದ ಗುರುಕೃಪಾ ಸಹಕಾರಿ ಭಟ್ಕಳ ಬ್ಯಾಂಕ್ ನವರು ಅವರ ಸಂಸ್ಥೆಯಲ್ಲಿ ಒಂದು ಕೆಲಸವನ್ನ ಇಂದು ನನ್ನ ಕೈಯಿಂದ ಹಸ್ತಾಂತರಿಸಿದರು. ಇದು ನನಗೆ ಅತ್ಯಂತ ಸಂತೋಷವಾದ ಕ್ಷಣವಾಗಿದ್ದು, ಈ ಗುರುಕೃಪ ಸಹಕಾರಿ ಬ್ಯಾಂಕಿಗೆ ಅನಂತ ಅನಂತ ಧನ್ಯವಾದಗಳು ತಿಳಿಸುತ್ತಿದ್ದೇನೆ. ಇಂತಹ ಪುಣ್ಯದ ಕಾರ್ಯಕ್ಕೆ ಮನಸ್ಸು ಮಾಡಿ ಅವರಿಗೆ ಕೆಲಸ ಕೊಡಿಸಲು ಮುಂದಾದ ಎಲ್ಲಾ ನಿರ್ದೇಶಕ ಅಧ್ಯಕ್ಷರು,ಪದಾಧಿಕಾರಿಗಳಿಗೆ ಅದೆಷ್ಟು ನಮನಗಳನ್ನು ಸಲ್ಲಿಸಿದರು ಕಡಿಮೆ.

ಹೀಗೆ ತಾಲೂಕಿನಲ್ಲಿರುವಂತಹ ಬ್ಯಾಂಕುಗಳಲ್ಲಿ ಉಳಿದವರಿಗೂ ಕೆಲಸ ಕೊಡಿಸಬೇಕೆನ್ನುವ ನನ್ನ ಕನಸಿಗೆ ನಾವೆಲ್ಲರೂ ಜೊತೆಯಾಗಿ ಒಮ್ಮತದಿಂದ ಪಕ್ಷ ಭೇದ ಮರೆತು ಒಗ್ಗಟ್ಟಾಗಬೇಕಿದೆ. ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ತಮಗಾದ ಸಹಾಯವನ್ನು ಆ ಕುಟುಂಬಕ್ಕೆ ಮಾಡಿ ಎನ್ನುವ ಮಾತನ್ನು ನಿಜವಾಗಲೂ ಅರ್ಥಪೂರ್ಣವಾಗಿ ಮಾಡಿದ ನಿಮಗೆ ನನ್ನ ಹೃದಯ ಅಂತರಾಳದಿಂದ ಅಭಿನಂದಿಸುತ್ತಿದ್ದೇನೆ .ನಿಮ್ಮ ಬ್ಯಾಂಕಿಗೆ ಮತ್ತಷ್ಟು ಶಕ್ತಿ ಸಿಗಲಿ ಇನ್ನಷ್ಟು ಶ್ರೇಯೋಭಿವೃದ್ಧಿ ಆಗಲಿ ' ಎಂದು ಬರೆದುಕೊಂಡಿದ್ದಾರೆ.

ಮೃತರ ನೆನಪಿಗೆ ಅವರ ಹೆಸರಲ್ಲೇ ಸಸಿ ನೆಟ್ಟ ಮಂಕಾಳ ವೈದ್ಯ

ದುರಂತದ ಕಾರಣಕ್ಕಾಗಿ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋದಿಲ್ಲ ಎಂದಿದ್ದ ಸಚಿವ ಮಂಕಾಳ ವೈದ್ಯ, ಜನ್ಮದಿನದಂದು ಶಿರಾಲಿಯ ಜನತಾ ವಿದ್ಯಾಲಯ ಕ್ಯಾಂಪಸ್‌ನಲ್ಲಿ11 ಜನರ ಮೃತರ ಹೆಸರಿನಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿಸಿಕೊಂಡರು.

View post on Instagram