Employees Rights: ಅನಧಿಕೃತವಾಗಿ ರಜೆ ಹಾಕುವುದು ಉದ್ಯೋಗಿಯ ಹಕ್ಕಲ್ಲ: ಹೈಕೋರ್ಟ್
ಪೂರ್ವಾನುಮತಿ ಇಲ್ಲದೆ ಅನಧಿಕೃತವಾಗಿ ಗೈರಾದ ಬಿಎಂಟಿಸಿ ತರಬೇತಿ ಚಾಲಕನನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಅನಧಿಕೃತ ಗೈರುಹಾಜರಿ ದುರ್ನಡತೆಯಾಗಿದ್ದು, ಶ್ರದ್ಧೆಯಿಂದ ಕೆಲಸ ಮಾಡದ ನೌಕರನಿಗೆ ಸಹಾನುಭೂತಿ ತೋರುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪೂರ್ವಾನುಮತಿ ಇಲ್ಲದೆ ನೌಕರಿಗೆ ಗೈರಾಗುವುದು
ಬೆಂಗಳೂರು: ಪೂರ್ವಾನುಮತಿ ಇಲ್ಲದೆ ನೌಕರಿಗೆ ಗೈರಾಗುವುದು ದುರ್ನತಡೆ. ಶ್ರದ್ಧೆಯಿಂದ ಕೆಲಸ ಮಾಡದ ಉದ್ಯೋಗಿಗೆ ಸಹಾನುಭೂತಿ ತೋರುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಟ್ರೈನಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟರಾಮಯ್ಯ ಎಂಬುವರನ್ನು ಸೇವೆಯಿಂದ ತೆಗೆದುಹಾಕಿದ್ದ ಆದೇಶ ರದ್ದುಪಡಿಸಿದ್ದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ನ್ಯಾಯಮೂರ್ತಿ ಎಂ.ಜ್ಯೋತಿ ಅವರ ಪೀಠ
ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ಜ್ಯೋತಿ ಅವರ ಪೀಠ, ಪೂರ್ವಾನುಮತಿ ಮತ್ತು ರಜೆ ಪಡೆಯದೆ ವೆಂಕಟೇಶಯ್ಯ 2016ರ ಡಿ.1ರ ನಂತರ ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾಗಿದ್ದಾರೆ. ಈ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಶಿಸ್ತು ಪ್ರಾಧಿಕಾರದ ಸೇವೆಯಿಂದ ಅವರನ್ನು ವಜಾಗೊಳಿಸಿದೆ. ಉದ್ಯೋಗ ನಿರ್ವಹಣೆ ಸಮಯದಲ್ಲಿ ಸಕಾರಣವಿಲ್ಲದೆ ಉದ್ಯೋಗಕ್ಕೆ ನೌಕರ ಅನಧಿಕೃತವಾಗಿ ಗೈರಾಗಬಾರದು. ರಜೆಯಿಲ್ಲದೆ ಉದ್ಯೋಗಕ್ಕೆ ಗೈರಾಗುವುದು ದುರ್ನಡತೆ ಆಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಗೈರು ಹಾಜರಿ
ಯಾವುದೇ ಉದ್ಯೋಗಿ ಗೈರು ಹಾಜರಿಯನ್ನು ಒಂದು ಹಕ್ಕು ಆಗಿ ಕ್ಲೇಮು ಮಾಡಲಾಗದು. ರಜೆ ಇಲ್ಲದೆ ಉದ್ಯೋಗಕ್ಕೆ ಗೈರಾಗುವುದು ಶಿಸ್ತಿನ ಉಲ್ಲಂಘನೆ. ಪ್ರಕರಣದಲ್ಲಿ ಉದ್ಯೋಗಿ ಅನಧಿಕೃತವಾಗಿ ನೌಕರಿಗೆ ಗೈರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಲಾಗಿದೆ. ಆದರೆ, ನೌಕರ ದೀರ್ಘಾವಧಿ ಸೇವೆ ಸಲ್ಲಿಸಿದ್ದಾನೆ ಎಂಬ ಆಧಾರದಲ್ಲಿ ಕಾರ್ಮಿಕ ನ್ಯಾಯಾಲಯ ಶಿಕ್ಷೆಯನ್ನು ರದ್ದುಪಡಿಸಿದೆ. ದೀಘಾರ್ವಧಿ ಸೇವೆ ದುರ್ನಡತೆ ಕ್ಷಮಿಸುವ ಮಾನದಂಡವಲ್ಲ ಎಂದು ಪೀಠ ಹೇಳಿದೆ.
ಇದನ್ನೂ ಓದಿ: Ballari: ನನ್ನಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಶಾಸಕ ನಾರಾ ಭರತ್ ರೆಡ್ಡಿ
ಆದೇಶ
ವೆಂಕಟೇಶಯ್ಯ ಶ್ರದ್ದೆಯಿಂದ ಕೆಲಸ ಮಾಡುವಂಥ ಆಸಕ್ತಿ ಹೊಂದಿರಲಿಲ್ಲ. ಶ್ರದ್ದೆಯಿಂದ ಕೆಲಸ ಮಾಡದ ಉದ್ಯೋಗಿಗೆ ಯಾವುದೇ ಸಹಾನುಭೂತಿ ತೋರುವ ಅಗತ್ಯವಿಲ್ಲ. ಸಹಾನೂಭೂತಿ ತೋರುವುದು ತಪ್ಪಾಗುತ್ತದೆ. ಹಾಗಾಗಿ, ವೆಂಕಟೇಶಯ್ಯರನ್ನು ಸೇವೆಯಿಂದ ವಜಾಗೊಳಿಸಿ ಬಿಎಂಟಿಸಿ 2018ರಂದು 29ರಂದು ಹೊರಡಿಸಿದ ಆದೇಶ ಪುರಸ್ಕರಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಬಳಿಕ ಕುಡಿದ ಮತ್ತಲ್ಲಿ ಯುವತಿಯರ ಜೊತೆ ಅನುಚಿತ ವರ್ತನೆ, ಇಬ್ಬರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

