ಬೆಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಯುವಕರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೂ ಹಲ್ಲೆ ನಡೆಸಿ, ಅವರ ಜಾಕೆಟ್ ಹರಿದು ಪುಂಡಾಟ ಮೆರೆದಿದ್ದರು.

ಬೆಂಗಳೂರು (ಜ.3): ಹೊಸ ವರ್ಷದ ಪಾರ್ಟಿ ಮುಗಿದ ಬಳಿಕ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಇಬ್ಬರು ಯುವಕರನ್ನು ಬೆಂಗಳೂರಿನ ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ನ್ಯೂ ಇಯರ್‌ ಪಾರ್ಟಿ ಮುಗಿಸಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರ ಜೊತೆ ಯುವಕರು ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರ ಜೊತೆ ಕಿರಿಕ್‌ ಮಾಡಿದ್ದರು.

ಪೊಲೀಸರನ್ನು ತಳ್ಳಾಡಿದ್ದಲ್ಲದೆ, ಅವರು ಧರಿಸಿದ್ದ ರಿಫ್ಲೆಕ್ಟರ್‌ ಜಾಕೆಟ್‌ ಹರಿದು ಪುಂಡಾಟ ಮಾಡಿದ್ದರು. ಜನವರಿ 1 ರಂದು ಮುಂಜಾನೆ 1.40ರ ಸುಮಾರಿಗೆ ಈ ಘಟನೆ ನಡೆದಿತ್ತು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳಾದ ಅನ್ಶ್ ಮೆಹ್ತಾ,ಪರ್ವ್ ರಾತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದ ಕಾನ್ಸ್ ಟೇಬಲ್ ರವಿ ಎನ್ನುವವರ ಮೇಲೆ ದಾಳಿ ಮಾಡಿದ್ದರು. ರಾತ್ರಿ ಗಸ್ತಿನಲ್ಲಿರಬೇಕಾದರೆ ರಸ್ತೆ ಪಕ್ಕ ಕ್ಯಾಬ್ ಗಾಗಿ ಯುವತಿಯರು ಕಾಯುತ್ತಿದ್ದರು. ಈ ಹಂತದಲ್ಲಿ ಯುವತಿಯರ ಜೊತೆಗೆ ಬಂದು ಅನ್ಶ್‌ ಮೆಹ್ತಾ ಹಾಗೂ ಪರ್ವ್‌ ರಾತಿ ಅನುಚಿತ ವರ್ತನೆ ತೋರಿದ್ದರು.

ಇದನ್ನು ಅಲ್ಲಿಯೇ ಇದ್ದ ಪೊಲೀಸರಿಗೆ ಯುವತಿಯರು ತಿಳಿಸಿದ್ದರು. ಯುವಕರನ್ನು ಪ್ರಶ್ನೆ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪುಂಡಾಟ ಮಾಡಿದ್ದರು. ತಕ್ಷಣವೇ ಇಬ್ಬರನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಪೊಲೀಸರು ಕರೆದೊಯ್ದಿದ್ದರು. ಈಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಘಟನೆ ನಡೆದಿದ್ದು ಎಲ್ಲಿ

ಡಾ.ಬಿಆರ್‌ ಅಂಬೇಡ್ಕರ್‌ ವೀಧಿಯಲ್ಲಿರುವ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಿಲ್ಡಿಂಗ್‌ನ ಸೂಜಿ ಕ್ಯೂ ಬಾರ್‌ ಆಂಡ್‌ ರೆಸ್ಟೋರೆಂಟ್‌ನ ಮುಂಭಾಗದಲ್ಲಿ ಈ ಘಟನೆ ನಡೆದಿತ್ತು.