- Home
- News
- State
- ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ, ವಿಜಯಪುರ ಜನರಿಗೆ ಈ ರೈಲಿನ ಟಿಕೆಟ್ ದರ ಇಳಿಕೆ!
ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ, ವಿಜಯಪುರ ಜನರಿಗೆ ಈ ರೈಲಿನ ಟಿಕೆಟ್ ದರ ಇಳಿಕೆ!
ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ಹುಬ್ಬಳ್ಳಿ-ವಿಜಯಪುರ ಮೆಮು ಮತ್ತು ಹುಬ್ಬಳ್ಳಿ-ಹೃಷಿಕೇಶ ಸೇರಿದಂತೆ ಹಲವು ವಿಶೇಷ ರೈಲುಗಳನ್ನು ನಿಯಮಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಬದಲಾವಣೆಯಿಂದ ಟಿಕೆಟ್ ದರದಲ್ಲಿ ಶೇ. 30% ರಷ್ಟು ಕಡಿತವಾಗಲಿದೆ.

ಉತ್ತರ ಕರ್ನಾಟಕ ಜನರಿಗೆ ಸಿಹಿಸುದ್ದಿ
ಹುಬ್ಬಳ್ಳಿ/ಧಾರವಾಡ: ಉತ್ತರ ಕರ್ನಾಟಕದ ಜಿಲ್ಲೆಗಳ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಈವರೆಗೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಪ್ರಮುಖ ರೈಲುಗಳನ್ನು ಇಂದಿನಿಂದ 'ನಿಯಮಿತ ಸೇವೆ'ಗಳನ್ನಾಗಿ (Regular Train Services) ಪರಿವರ್ತಿಸಲಾಗುತ್ತಿದೆ. ಈ ಮಹತ್ವದ ನಿರ್ಧಾರವು ಉತ್ತರ ಕರ್ನಾಟಕದ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ಹೊಸ ವೇಗ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿ - ವಿಜಯಪುರ ನಡುವೆ ಮೆಮು ರೈಲು ಸಂಚಾರ
ಹುಬ್ಬಳ್ಳಿ ಮತ್ತು ವಿಜಯಪುರ ನಡುವೆ ಸಂಚರಿಸುವ ರೈಲು ಸಂಖ್ಯೆ 56919/20 ಹಾಗೂ 66501/02 ರೈಲುಗಳು ಇನ್ನು ಮುಂದೆ ನಿಯಮಿತವಾಗಿ ಸಂಚರಿಸಲಿವೆ. ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿ - ವಿಜಯಪುರ ನೂತನ ನಿಯಮಿತ ಮೆಮು (MEMU- Mainline Electric Multiple Unit) ರೈಲಿಗೆ (ರೈಲು ಸಂಖ್ಯೆ: 66501) ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಇದರಿಂದ ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಿತ್ಯ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮೆಮು ರೈಲು ಸಂಚಾರದಿಂದ ವೇಗದ ಮತ್ತು ಪರಿಸರ ಸ್ನೇಹಿ ಪ್ರಯಾಣ ಸಾಧ್ಯವಾಗಲಿದೆ.
ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ: ಹೃಷಿಕೇಶಕ್ಕೆ ನೇರ ರೈಲು
ಉತ್ತರ ಭಾರತಕ್ಕೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 17363/64 ಹುಬ್ಬಳ್ಳಿ - ಯೋಗ ನಗರಿ ಹೃಷಿಕೇಶ ವಾರಕ್ಕೊಮ್ಮೆ ಸಂಚರಿಸುವ ರೈಲನ್ನು ಈಗ ನಿಯಮಿತ ಸೇವೆಯನ್ನಾಗಿ ಮಾಡಲಾಗಿದೆ. ಇದರಿಂದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ವರ್ಷಪೂರ್ತಿ ಸುಲಭ ಪ್ರಯಾಣ ಒದಗಿಸಿದಂತಾಗುತ್ತದೆ.
ಟಿಕೆಟ್ ದರದಲ್ಲಿ 30% ಕಡಿತ: ಆರ್ಥಿಕವಾಗಿ ದೊಡ್ಡ ಲಾಭ!
ಈ ರೈಲುಗಳ ಸೇವೆಯು ನಿಯಮಿತವಾಗಿ ಬದಲಾದ ಕಾರಣ ಪ್ರಯಾಣಿಕರಿಗೆ ಆರ್ಥಿಕವಾಗಿ ದೊಡ್ಡ ಲಾಭ ಸಿಗಲಿದೆ.
ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಇನ್ನು ಮುಂದೆ ಸೂಪರ್‌ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ.
ಮೀಸಲು ದರ್ಜೆಯ (Reserved Class) ಟಿಕೆಟ್ ದರದಲ್ಲಿ ಸುಮಾರು 30% ರಷ್ಟು ಕಡಿತವಾಗಲಿದ್ದು, ಪ್ರಯಾಣವು ಅತ್ಯಂತ ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಸಿಗಲಿದೆ.
ಮೋದಿ ದೂರದೃಷ್ಟಿ ನಾಯಕತ್ವದ ಫಲ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ವೇಗ ತುಂಬುತ್ತಿದೆ. ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಸಚಿವರು ಶ್ಲಾಘಿಸಿದರು.
ಈ ಕಾರ್ಯಕ್ರಮದ ವೇಳೆ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ (SWR) ಜನರಲ್ ಮ್ಯಾನೇಜರ್ ಪಿ. ಅನಂತು ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಬದಲಾವಣೆಯು ಉತ್ತರ ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ವಲಯಕ್ಕೆ ಹೊಸ ಶಕ್ತಿ ತುಂಬಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

