ಹಾರೋಹಳ್ಳಿಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ಹೊಸ ಸ್ಥಳದತ್ತ ಸರ್ಕಾರದ ಚಿಂತನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳವಾಗಿ ಹಾರೋಹಳ್ಳಿಯನ್ನು ಪರಿಗಣಿಸುವಂತೆ CM ಸೂಚಿಸಿದ್ದಾರೆ. ಈಗಾಗಲೇ ಶಾರ್ಟ್‌ಲಿಸ್ಟ್ ಮಾಡಲಾಗಿರುವ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಜೊತೆಗೆ, ಕಡಿಮೆ ಭೂಸ್ವಾಧೀನ ವೆಚ್ಚ ಹಾಗೂ ಗ್ರಾಮಗಳ ಸ್ಥಳಾಂತರ ತಪ್ಪಿಸುವ ಸ್ಥಳಕ್ಕೆ ಸರ್ಕಾರ ಆದ್ಯತೆ ನೀಡಲಿದೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಸ್ಥಳದ ಆಯ್ಕೆಯ ಪಟ್ಟಿಯಲ್ಲಿ ಹಾರೋಹಳ್ಳಿ ಬಗ್ಗೆ ಪರಿಶೀಲಿಸುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಬುಧವಾರ ಈ ಸಂಬಂಧ ನಡೆದ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದು, ಇಡೀ ಗ್ರಾಮಗಳನ್ನು ಸ್ಥಳಾಂತರ ಮಾಡೋದು ಕಷ್ಟಕರ, ಕಡಿಮೆ ಭೂಸ್ವಾಧೀನ ವೆಚ್ಚದ ಯೋಜನೆಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ನಾಲ್ಕನೇ ಸಂಭಾವ್ಯ ಸ್ಥಳ
ಬುಧವಾರದ ಸಭೆಯಲ್ಲಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ಹಾರೋಹಳ್ಳಿಯನ್ನು ನಾಲ್ಕನೇ ಸಂಭಾವ್ಯ ಸ್ಥಳವನ್ನಾಗಿ ಪರಿಗಣಿಸುವಂತೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ (IDD) ಸೂಚನೆ ನೀಡಿದ್ದಾರೆ. ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶಾರ್ಟ್ ಲಿಸ್ಟ್ ಮಾಡಲಾಗಿರುವ ಮೂರು ಸ್ಥಳಗಳ ಮೌಲ್ಯಮಾಪನ ಮಾಡಲಿದೆ.
ಗ್ರಾಮಗಳ ಸ್ಥಳಾಂತರ
ತಾಂತ್ರಿಕ ಕಾರ್ಯಸಾಧ್ಯತೆ, ಭೂಸ್ವಾಧೀನ ವೆಚ್ಚಗಳನ್ನು ಆಧರಿಸಿ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಆಯ್ಕೆ ಮಾಡಲಾಗುವುದು. ಟೆಕ್ನಿಕಲ್ ವ್ಯಾಲೋಷನ್‌ಗಾಗಿ ಸಿಂಗಪುರ ಮೂಲದ ಸಲಹಾ ಸಮಿತಿಯನ್ನು ನೇಮಿಸಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಗ್ರಾಮಗಳನ್ನು ಸ್ಥಳಾಂತರ ಮಾಡದಿರಲು ಪ್ರಯತ್ನಿಸಲಾಗುವುದು. ಸ್ಥಳ ಆಯ್ಕೆಯ ನಂತ್ರ ಕೆಲವು ಮನೆಗಳಿದ್ರೆ ಪರಿಹಾರ ನೀಡಿ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ
ಸದ್ಯ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ಅಥವಾ ಬನ್ನೇರುಘಟ್ಟ ಕಾರಿಡಾರ್‌ನ ಉದ್ದಕ್ಕೂ ಇರುವ ಸೋಮನಹಳ್ಳಿ ಮತ್ತು ಚೂಡಹಳ್ಳಿ, ನಗರದ ಉತ್ತರ ಕಾರಿಡಾರ್‌ನಲ್ಲಿ ಟ್ರಾಫಿಮ್ ಕಡಿಮೆ ಮಾಡಬಹುದಾಗಿದೆ.
9 ಸಾವಿರ ಎಕರೆ
ಸದ್ಯ ಚೂಡಹಳ್ಳಿಯಲ್ಲಿ 4655 ಎಕರೆ, ಸೋಮನಹಳ್ಳಿಯಲ್ಲಿ 4376 ಎಕರೆ ಭೂಮಿಯಿದ್ದು, ಎರಡೂ ಪ್ರದೇಶಗಳನ್ನು ಒಟ್ಟು ಗೂಡಿಸಿದರೆ 9 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಸಿಗಲಿದ್ದು, ಅಲ್ಲಿ ವಿಮಾನನಿಲ್ದಾಣ ನಿರ್ಮಾಣ ಸಾಧ್ಯತೆ. ಜತೆಗೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಅಥವಾ ಕಡಿಮೆ ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಸ್ಥಳವನ್ನು ಅಂತಿಮಗೊಳಿಸುವಂತೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

