- Home
- News
- State
- ಕರ್ನಾಟಕದಲ್ಲಿ ಮಳೆಯಿಲ್ಲದಿದ್ರೂ ಕಾವೇರಿ ನೀರಿಗಾಗಿ ಕ್ಯಾತೆ; ಸಿಎಂ ಬದಲಾದ್ರೂ ಹಳೆ ಚಾಳಿ ಬಿಡದ ತಮಿಳುನಾಡು!
ಕರ್ನಾಟಕದಲ್ಲಿ ಮಳೆಯಿಲ್ಲದಿದ್ರೂ ಕಾವೇರಿ ನೀರಿಗಾಗಿ ಕ್ಯಾತೆ; ಸಿಎಂ ಬದಲಾದ್ರೂ ಹಳೆ ಚಾಳಿ ಬಿಡದ ತಮಿಳುನಾಡು!
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ, ಜೂನ್ ತಿಂಗಳ ನೀರಿನ ಕೊರತೆ ಭರಿಸಲು ಮತ್ತು ಜುಲೈ ತಿಂಗಳ ಕೋಟಾ ಬಿಡುಗಡೆ ಮಾಡಲು ತಮಿಳುನಾಡು ಕರ್ನಾಟಕದ ಮೇಲೆ ತೀವ್ರ ಒತ್ತಡ ಹೇರಿದೆ. ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ಕಡಿಮೆ ನೀರಿನ ಮಟ್ಟದಿಂದಾಗಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.

ನವದೆಹಲಿ (ಜೂ.23): ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ನೆರೆರಾಜ್ಯ ತಮಿಳುನಾಡು ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಇತ್ತೀಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಅಧಿಕಾರಿಗಳು, ಕರ್ನಾಟಕದಿಂದ ತಮಗೆ ಬರಬೇಕಾದ ನೀರಿನ ಕೋಟಾವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತೀವ್ರ ಒತ್ತಡ ಹೇರಿದ್ದಾರೆ.
ಜೂನ್ ತಿಂಗಳ ನೀರಿನಲ್ಲಿ ಭಾರಿ ಕೊರತೆ:
ಸಭೆಯಲ್ಲಿ ತನ್ನ ವಾದ ಮಂಡಿಸಿದ ತಮಿಳುನಾಡು ಸರ್ಕಾರ, 'ಜೂನ್ ತಿಂಗಳಿನಲ್ಲಿ ನಿಗದಿತ ವೇಳಾಪಟ್ಟಿಯಂತೆ ಕರ್ನಾಟಕವು 9.19 ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 2.6 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಂದರೆ ಸರಿಸುಮಾರು 6.5 ಟಿಎಂಸಿ ನೀರಿನ ಕೊರತೆಯಾಗಿದೆ' ಎಂದು ದೂರು ನೀಡಿದೆ. ಈ ಕೊರತೆಯನ್ನು ತಕ್ಷಣವೇ ಭರಿಸಬೇಕು ಎಂದು ಪ್ರಾಧಿಕಾರದ ಮುಂದೆ ಪಟ್ಟು ಹಿಡಿದಿದೆ.
ಕರ್ನಾಟಕದ ವಾದ ತಳ್ಳಿಹಾಕಿದ ತಮಿಳುನಾಡು:
ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂಬ ಕರ್ನಾಟಕದ ವಾದವನ್ನು ತಮಿಳುನಾಡು ಸಾರಾಸಗಟಾಗಿ ತಳ್ಳಿಹಾಕಿದೆ. 'ಫೆಬ್ರವರಿಯಿಂದ ಮೇ ತಿಂಗಳವರೆಗೆ ಕರ್ನಾಟಕವು ತನ್ನ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಳಸಿಕೊಂಡಿದೆ. ಇದರಿಂದಾಗಿಯೇ ಈಗ ನೀರಿನ ಮಟ್ಟ ಕುಸಿದಿದೆ. ನಿಮ್ಮ ತಪ್ಪುಗಳಿಗೆ ನಾವು ಬೆಲೆ ತೆರಲು ಸಾಧ್ಯವಿಲ್ಲ' ಎಂದು ತಮಿಳುನಾಡು ಅಧಿಕಾರಿಗಳು ಆರೋಪಿಸಿದ್ದಾರೆ. ಜೂನ್ ತಿಂಗಳ ಬಾಕಿ ಉಳಿದಿರುವ ನೀರಿನ ಜೊತೆಗೆ, ಜುಲೈ ತಿಂಗಳ ಕೋಟಾ ಆದ 31.24 ಟಿಎಂಸಿ ನೀರನ್ನು ಹರಿಸಲು ಕರ್ನಾಟಕಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಪ್ರಾಧಿಕಾರವನ್ನು ಒತ್ತಾಯಿಸಿದೆ.
ಸಂಕಷ್ಟದಲ್ಲಿ ಕರ್ನಾಟಕ:
ಇನ್ನೊಂದೆಡೆ, ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಸಂಗ್ರಹದ ಮಟ್ಟ ಆಶಾದಾಯಕವಾಗಿಲ್ಲ. ಕುಡಿಯುವ ನೀರಿಗೇ ಆದ್ಯತೆ ನೀಡಬೇಕಾದ ಅನಿವಾರ್ಯತೆಯಲ್ಲಿ ಕರ್ನಾಟಕ ಸರ್ಕಾರವಿದೆ. ಹೀಗಿರುವಾಗ ತಮಿಳುನಾಡು ಒಟ್ಟು 31 ಟಿಎಂಸಿಗೂ ಅಧಿಕ ನೀರಿಗಾಗಿ ಪಟ್ಟು ಹಿಡಿದಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಾಧಿಕಾರವು ಮಳೆಯ ಪ್ರಮಾಣ ಮತ್ತು ಜಲಾಶಯಗಳ ಸ್ಥಿತಿಗತಿಯನ್ನು ಅವಲಂಬಿಸಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

