Fish brain power secrets: ಆ ಟ್ಯಾಲೆಂಟ್ ಮನುಷ್ಯರಿಗಷ್ಟೇ ಅಲ್ಲ, ಮೀನುಗಳಿಗೂ ಇದೆಯಂತೆ..!
Fish brain power secrets: ಮೀನುಗಳಿಗೆ ನೆನಪಿನ ಶಕ್ತಿ ಇರುವುದಿಲ್ಲ ಎಂಬುದು ಕೇವಲ ಭ್ರಮೆ ಮಾತ್ರ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಸಣ್ಣ ಮೆದುಳನ್ನು ಹೊಂದಿದ್ದರೂ ಸಹ ಮೀನುಗಳು ಮನುಷ್ಯರಂತೆಯೇ ಇತರರನ್ನು ಗಮನಿಸಿ ಕಲಿಯುತ್ತವೆಯಂತೆ!

ಇದೇ ಮೊದಲ ಬಾರಿಗೆ
ಮೀನುಗಳಿಗೆ ನೆನಪಿನ ಶಕ್ತಿ ಇರುವುದಿಲ್ಲ, ಅವುಗಳ ಮೆದುಳು ತುಂಬಾ ಚಿಕ್ಕದು ಎಂದು ನಾವು ಅವುಗಳನ್ನು ಕಡಿಮೆ ಅಂದಾಜು ಮಾಡುತ್ತೇವೆ. ಆದರೆ ಮೀನುಗಳು ನಾವು ಅಂದುಕೊಂಡಿದ್ದಕ್ಕಿಂತ ತುಂಬಾ ಬುದ್ಧಿವಂತವು. ಅವುಗಳ ಕಲಿಕೆಯ ವಿಧಾನವು ಮನುಷ್ಯರ ಆಲೋಚನಾ ಶೈಲಿಗೆ ತುಂಬಾ ಹತ್ತಿರದಲ್ಲಿದೆ ಎಂದು ಕೆಲವು ವರ್ಷಗಳ ಹಿಂದೆ ನಡೆದ ಸಂಶೋಧನೆಯೊಂದರಲ್ಲಿ ತಿಳಿದುಬಂದಿದೆ ಎಂಬುದು ನಿಮಗೆ ಗೊತ್ತೇ?.
ಯುರೋಪ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ 'ನೈನ್-ಸ್ಪೈನ್ಡ್ ಸ್ಟಿಕ್ಲ್‌ಬ್ಯಾಕ್' ಎಂಬ ಒಂದು ವಿಶಿಷ್ಟ ಮೀನಿನ ತಳಿ ಇದೆ. ಇವು ಮನುಷ್ಯರಂತೆಯೇ 'ಸಾಮಾಜಿಕ ಕಲಿಕೆಯ ತಂತ್ರವನ್ನು' (Social learning strategy) ಪ್ರದರ್ಶಿಸುತ್ತವೆ ಎಂದು ಡರ್ಹಾಮ್ ಯೂನಿವರ್ಸಿಟಿಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಪ್ರಾಣಿ ಪ್ರಪಂಚದಲ್ಲಿ ಇಂತಹ ಸಾಮರ್ಥ್ಯ ಇರುವುದನ್ನು ಗುರುತಿಸಿರುವುದು ಇದೇ ಮೊದಲ ಬಾರಿ ಎಂಬುದು ವಿಶೇಷ.
'ಹಿಲ್-ಕ್ಲೈಂಬಿಂಗ್' ತಂತ್ರದ ಬಗ್ಗೆ ಗೊತ್ತೇ?
ಮಾನವ ಸಮಾಜದಲ್ಲಿ ತಂತ್ರಜ್ಞಾನ ಅಥವಾ ಜೀವನಶೈಲಿ ಅಭಿವೃದ್ಧಿ ಹೊಂದಲು ಒಂದು ಪ್ರಮುಖ ಕಾರಣವಿದೆ. ಇತರರು ಮಾಡುವ ಕೆಲಸಗಳನ್ನು ಗಮನಿಸಿ, ಅದರಲ್ಲಿ ಅತ್ಯುತ್ತಮವಾದ ವಿಧಾನವನ್ನು ಆಯ್ದುಕೊಂಡು, ಅದನ್ನು ಮತ್ತಷ್ಟು ಸುಧಾರಿಸುವುದನ್ನು ಮನುಷ್ಯರು ರೂಢಿಸಿಕೊಂಡಿದ್ದಾರೆ. ಇದನ್ನೇ 'ಹಿಲ್-ಕ್ಲೈಂಬಿಂಗ್' (Hill-climbing) ತಂತ್ರ ಎನ್ನಲಾಗುತ್ತದೆ. ಯುರೋಪ್‌ನಲ್ಲಿ ಕಂಡುಬರುವ ಈ ಸ್ಟಿಕ್ಲ್‌ಬ್ಯಾಕ್ ಮೀನುಗಳು ಕೂಡ ಇತರರ ನಡವಳಿಕೆಯನ್ನು ತಮ್ಮ ಸ್ವಂತ ಅನುಭವದೊಂದಿಗೆ ಹೋಲಿಸಿ ನೋಡುತ್ತವೆಯಂತೆ. ತಮ್ಮ ಹಳೆಯ ವಿಧಾನಕ್ಕಿಂತ ಇತರರು ಮಾಡುವ ವಿಧಾನದಿಂದ ಹೆಚ್ಚು ಆಹಾರ ಸಿಗುತ್ತದೆ ಎಂದು ಅರಿತುಕೊಂಡರೆ, ಅವು ತಕ್ಷಣವೇ ತಮ್ಮ ನಿರ್ಧಾರವನ್ನು ಬದಲಾಯಿಸಿ ಆ ಹೊಸ ವಿಧಾನವನ್ನೇ ಅನುಸರಿಸುತ್ತವೆ ಎಂದು ಡರ್ಹಾಮ್ ವಿಜ್ಞಾನಿಗಳ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಸಂಶೋಧನೆ ನಡೆದಿದ್ದು ಹೀಗೆ..
ಸಂಶೋಧನೆಗಾಗಿ 270 ಸ್ಟಿಕ್ಲ್‌ಬ್ಯಾಕ್ ಮೀನುಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಅಕ್ವೇರಿಯಂಗಳಲ್ಲಿ ಇಡಲಾಗಿತ್ತು. ಇವುಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಒಂದು ಆಸಕ್ತಿದಾಯಕ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಯಿತು.
ಮೊದಲ ಹಂತ: ಟ್ಯಾಂಕ್‌ನ ಎರಡೂ ಬದಿಗಳಲ್ಲಿ ಎರಡು ಫೀಡರ್‌ಗಳನ್ನು (ಆಹಾರ ನೀಡುವ ಸಾಧನಗಳು) ಅಳವಡಿಸಲಾಯಿತು. ಒಂದು ಕಡೆ ಹೆಚ್ಚು ಹುಳುಗಳು (ಆಹಾರ) ಮತ್ತು ಇನ್ನೊಂದು ಕಡೆ ಕಡಿಮೆ ಹುಳುಗಳು ಬರುವಂತೆ ಸೆಟ್ ಮಾಡಲಾಗಿತ್ತು. ಮೀನುಗಳು ಸ್ವತಃ ಯಾವ ಕಡೆ ಹೆಚ್ಚು ಆಹಾರ ಸಿಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡವು.
ಎರಡನೇ ಹಂತ: ವಿಜ್ಞಾನಿಗಳು ಫೀಡರ್‌ಗಳ ಜಾಗವನ್ನು ಅದಲು-ಬದಲು ಮಾಡಿದರು. ಅಂದರೆ, ಈ ಹಿಂದೆ ಕಡಿಮೆ ಆಹಾರ ಬರುತ್ತಿದ್ದ ಕಡೆ ಈಗ ಹೆಚ್ಚು ಆಹಾರ ಬರುವಂತೆ ಮಾಡಲಾಯಿತು. ಈ ಬದಲಾವಣೆಯನ್ನು ಮೀನುಗಳು ಕೇವಲ ಹೊರಗಿನಿಂದ ಬೇರೆ ಮೀನುಗಳು ತಿನ್ನುವುದನ್ನು ನೋಡಿ ಗಮನಿಸುವಂತೆ ಮಾಡಲಾಯಿತು.
ಕಾಪಿ ಮಾಡುವ ಬುದ್ಧಿವಂತಿಕೆ ಕೇವಲ ಮನುಷ್ಯನಿಗಲ್ಲ
ಫಲಿತಾಂಶ ಏನೆಂದರೆ.. ಸುಮಾರು 75 ಪ್ರತಿಶತದಷ್ಟು ಮೀನುಗಳು ತಮ್ಮ ಸ್ವಂತ ಹಳೆಯ ಅನುಭವವನ್ನು ಪಕ್ಕಕ್ಕಿಟ್ಟು, ಕೇವಲ ಬೇರೆ ಮೀನುಗಳನ್ನು ಗಮನಿಸುವುದರ ಮೂಲಕ ಯಾವ ಕಡೆ ಹೆಚ್ಚು ಆಹಾರ ಬರುತ್ತದೆಯೋ ಅದನ್ನು ಸರಿಯಾಗಿ ಗುರುತಿಸಿ ಅದೇ ಕಡೆಗೆ ಹೋದವು. ಅಂದರೆ, ಉತ್ತಮ ಫಲಿತಾಂಶಕ್ಕಾಗಿ ಇತರರ ಐಡಿಯಾಗಳನ್ನು ಕಾಪಿ ಮಾಡುವ ಬುದ್ಧಿವಂತಿಕೆ ಕೇವಲ ಮನುಷ್ಯರಿಗಷ್ಟೇ ಅಲ್ಲ, ಮೀನುಗಳಿಗೂ ಇದೆ ಎಂದು ಈ ಸಂಶೋಧನೆಯಿಂದ ಸಾಬೀತಾಗಿದೆ.
ವಿಜ್ಞಾನಿಗಳೂ ಸರ್‌ಪ್ರೈಸ್
"ಸಣ್ಣ ಮೀನುಗಳಿಗೆ ಸಣ್ಣ ಮೆದುಳು ಇರಬಹುದು, ಆದರೆ ಅವುಗಳಿಗೆ ಅದ್ಭುತವಾದ ಅರಿವಿನ ಸಾಮರ್ಥ್ಯಗಳಿವೆ" ಎಂದು ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಜೆರೆಮಿ ಕೆಂಡಾಲ್ ತಿಳಿಸಿದ್ದಾರೆ. ಸಾಮಾಜಿಕವಾಗಿ ವಿಷಯಗಳನ್ನು ಕಲಿಯುವ ವಿಚಾರಕ್ಕೆ ಬಂದರೆ ಮೆದುಳಿನ ಗಾತ್ರವೇ ಮುಖ್ಯವಲ್ಲ ಎಂಬುದನ್ನು ನಮ್ಮ ಸಂಶೋಧನೆ ನಿರೂಪಿಸಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಸ್ವಂತ ಅನುಭವಕ್ಕಿಂತ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ತಿಳಿದಾಗ ಮಾತ್ರ ಇತರರನ್ನು ಕಾಪಿ ಮಾಡುವ ಈ ವಿಶಿಷ್ಟ 'ಮಾನವ ಬುದ್ಧಿಮತ್ತೆ' ಮೀನುಗಳಲ್ಲೂ ಇರುವುದು ವಿಜ್ಞಾನಿಗಳನ್ನು ಸಹ ಆಶ್ಚರ್ಯಚಕಿತಗೊಳಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
