ಸಕ್ಕರೆ ಎಲ್ಲಿದೆ ಅಂತ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ, ಇರುವೆಗಳು ಗುಂಪಾಗಿ ಬರೋದನ್ನು ನೋಡಿ ಅಚ್ಚರಿಯಾಗುತ್ತೆ. ಮನುಷ್ಯರ ಗೂಗಲ್ ಮ್ಯಾಪ್ಸ್‌ನಂತೆ, ಇರುವೆಗಳು ಆಹಾರ ಹುಡುಕಲು ಬಳಸುವ 'ಫೆರೋಮೋನ್' ಗೈಡ್‌ನ ಸೀಕ್ರೆಟ್ ಇಲ್ಲಿದೆ!
ಮನೆಯ ಮೂಲೆಯಲ್ಲಿ ಸ್ವಲ್ಪ ಸಕ್ಕರೆ ಚೆಲ್ಲಿದರೂ, ಕೆಲವೇ ಗಂಟೆಗಳಲ್ಲಿ ಇರುವೆಗಳ ದಂಡೇ ಅಲ್ಲಿ ಸೇರುತ್ತೆ. ಆದ್ರೆ ಆ ಜಾಗವನ್ನು ಅವು ಹೇಗೆ ಪತ್ತೆಹಚ್ಚುತ್ತವೆ? ಯಾರಾದ್ರೂ ಮಾಹಿತಿ ಕೊಡ್ತಾರಾ? ಅಥವಾ ಅವುಗಳ ಬಳಿ ಏನಾದ್ರೂ ವಿಶೇಷ ಗೈಡ್ ಇದೆಯಾ? ಮನುಷ್ಯರಿಗೆ ದಾರಿ ತೋರಿಸಲು ಗೂಗಲ್ ಮ್ಯಾಪ್ಸ್, ಜಿಪಿಎಸ್ ಬೇಕು. ಆದರೆ ಇರುವೆಗಳಿಗೆ ಪ್ರಕೃತಿಯೇ ಒಂದು ಅದ್ಭುತ 'ಮ್ಯಾಪ್ ಸಿಸ್ಟಮ್' ಕೊಟ್ಟಿದೆ. ಕಣ್ಣಿಗೆ ಕಾಣದ ಮಾಹಿತಿ ಸಂವಹನ ಬಳಸಿ, ಅವು ಆಹಾರವನ್ನು ನಿಖರವಾಗಿ ಪತ್ತೆ ಮಾಡುತ್ತವೆ.
ಒಂದು ಇರುವೆಗಳ ಗುಂಪಿನಲ್ಲಿ ಎಲ್ಲಾ ಇರುವೆಗಳು ಒಂದೇ ಕೆಲಸ ಮಾಡಲ್ಲ. ಕೆಲವು ಇರುವೆಗಳು ಆಹಾರ ಹುಡುಕುವ ಕೆಲಸದಲ್ಲಿ ತೊಡಗಿರುತ್ತವೆ. ಇವುಗಳನ್ನು 'ಸ್ಕೌಟ್ ಆ್ಯಂಟ್ಸ್' (Scout Ants) ಎಂದು ಕರೆಯುತ್ತಾರೆ. ಈ ಇರುವೆಗಳು ತಮ್ಮ ಗೂಡಿನಿಂದ ಹೊರಬಂದು, ಸುತ್ತಮುತ್ತ ಆಹಾರಕ್ಕಾಗಿ ಹುಡುಕಾಡುತ್ತವೆ. ಆರಂಭದಲ್ಲಿ ಅವು ಯಾವುದೇ ನಿರ್ದಿಷ್ಟ ದಾರಿಯಲ್ಲಿ ಹೋಗದೆ, ಬೇರೆ ಬೇರೆ ದಿಕ್ಕುಗಳಲ್ಲಿ ಅಲೆಯುತ್ತವೆ. ಆಗ ಯಾವುದಾದರೂ ಒಂದು ಇರುವೆಗೆ ಸಕ್ಕರೆ ಅಥವಾ ಆಹಾರ ಸಿಕ್ಕರೆ, ಮುಂದಿನ ಹಂತ ಶುರುವಾಗುತ್ತೆ.
ಆಹಾರ ಸಿಕ್ಕ ತಕ್ಷಣ ಆ ಇರುವೆ ತನ್ನ ಗೂಡಿಗೆ ವಾಪಸ್ ಬರುತ್ತೆ. ಬರುವಾಗ 'ಫೆರೋಮೋನ್' (Pheromone) ಎಂಬ ರಾಸಾಯನಿಕವನ್ನು ದಾರಿಯುದ್ದಕ್ಕೂ ಬಿಡುತ್ತಾ ಬರುತ್ತೆ. ಈ ರಾಸಾಯನಿಕವು ಬೇರೆ ಇರುವೆಗಳಿಗೆ ಒಂದು ಸಿಗ್ನಲ್ ರೀತಿ ಕೆಲಸ ಮಾಡುತ್ತೆ. 'ಈ ದಾರಿಯಲ್ಲಿ ಬನ್ನಿ, ಆಹಾರ ಸಿಗುತ್ತೆ' ಎಂಬ ಮಾಹಿತಿಯನ್ನು ವಾಸನೆ ಮೂಲಕ ತಿಳಿಸುತ್ತೆ. ಇದಕ್ಕಾಗಿಯೇ, ಕೆಲವೇ ನಿಮಿಷಗಳಲ್ಲಿ ಒಂದೇ ಇರುವೆ ಇದ್ದ ಜಾಗದಲ್ಲಿ ನೂರಾರು ಇರುವೆಗಳು ಸಾಲಾಗಿ ಬರುತ್ತವೆ.
ಇರುವೆಗಳು ಸುಮ್ಮನೆ ಯಾವುದೇ ದಾರಿಯನ್ನು ಆಯ್ಕೆ ಮಾಡಲ್ಲ. ಅವು ಅತ್ಯುತ್ತಮ ದಾರಿಯನ್ನೇ ಆರಿಸಿಕೊಳ್ಳುತ್ತವೆ. ಉದಾಹರಣೆಗೆ, ಆಹಾರಕ್ಕೆ ಹೋಗಲು ಎರಡು ದಾರಿಗಳಿದ್ದರೆ, ಕಡಿಮೆ ದೂರದ ದಾರಿಯಲ್ಲಿ ಹೋದ ಇರುವೆಗಳು ಬೇಗ ವಾಪಸ್ ಬಂದು ಹೆಚ್ಚು ಫೆರೋಮೋನ್ ಸೇರಿಸುತ್ತವೆ. ಹೀಗಾಗಿ, ಬೇರೆ ಇರುವೆಗಳು ಹೆಚ್ಚು ವಾಸನೆ ಇರುವ ದಾರಿಯನ್ನೇ ಆಯ್ಕೆ ಮಾಡಿ, ಶಾರ್ಟ್‌ಕಟ್ ಹಿಡಿಯುತ್ತವೆ. ಇದೇ ಇರುವೆಗಳ ನ್ಯಾಚುರಲ್ 'ನ್ಯಾವಿಗೇಷನ್ ಸಿಸ್ಟಮ್'.
ಇರುವೆಗಳಿಗೆ ಮನುಷ್ಯರ ಹಾಗೆ ಚುರುಕು ಕಣ್ಣುಗಳಿಲ್ಲದಿದ್ದರೂ, ಅವುಗಳ ಸಂವೇದನಾ ಸಾಮರ್ಥ್ಯ ತುಂಬಾ ಪ್ರಬಲವಾಗಿದೆ. ಅವು ಬಳಸುವ ಪ್ರಮುಖ ಸಾಧನಗಳೆಂದರೆ: ಆಂಟೆನಾ (Antennae) ಮೂಲಕ ವಾಸನೆ ಗ್ರಹಿಸುವುದು, ಫೆರೋಮೋನ್ ದಾರಿಯನ್ನು ಅನುಸರಿಸುವುದು, ಸುತ್ತಮುತ್ತಲಿನ ಗುರುತುಗಳನ್ನು ನೆನಪಿಟ್ಟುಕೊಳ್ಳುವುದು, ಸೂರ್ಯನ ಸ್ಥಾನ ನೋಡಿ ದಿಕ್ಕು ತಿಳಿಯುವುದು, ಮತ್ತು ಕೆಲವು ಇರುವೆಗಳು ಭೂಮಿಯ ಕಾಂತಕ್ಷೇತ್ರವನ್ನೂ ಬಳಸುತ್ತವೆ.
ಸಕ್ಕರೆ ಸುಲಭವಾಗಿ ಸಿಗುವ ಶಕ್ತಿ ಮೂಲ. ಇದರಲ್ಲಿರುವ ಕಾರ್ಬೋಹೈಡ್ರೇಟ್ ಇರುವೆಗಳಿಗೆ ತಕ್ಷಣ ಶಕ್ತಿ ಕೊಡುತ್ತೆ. ಗೂಡಿನಲ್ಲಿರುವ ರಾಣಿ ಇರುವೆ, ಮರಿ ಇರುವೆಗಳು ಮತ್ತು ಕೆಲಸಗಾರ ಇರುವೆಗಳಿಗಾಗಿ ಇವು ಆಹಾರ ಸಂಗ್ರಹಿಸುತ್ತವೆ. ಹೀಗಾಗಿ ಸಿಹಿ ಪದಾರ್ಥಗಳು ಇರುವೆಗಳಿಗೆ ಬಹಳ ಮುಖ್ಯ. ಇರುವೆಗಳ ಈ ದಾರಿ ಹುಡುಕುವ ವಿಧಾನವನ್ನು ನೋಡಿ ವಿಜ್ಞಾನಿಗಳು ಹಲವು ಹೊಸ ತಂತ್ರಜ್ಞಾನಗಳನ್ನು ರೂಪಿಸಿದ್ದಾರೆ. ಅದರಲ್ಲಿ ಮುಖ್ಯವಾದುದು 'ಆ್ಯಂಟ್ ಕಾಲೋನಿ ಆಪ್ಟಿಮೈಸೇಶನ್' (Ant Colony Optimization - ACO) ಎಂಬ ಕಂಪ್ಯೂಟರ್ ವಿಧಾನ.
ಇದನ್ನು ಸದ್ಯಕ್ಕೆ ಟ್ರಾಫಿಕ್ ಮಾರ್ಗಗಳನ್ನು ಯೋಜಿಸಲು, ಸರಕು ವಿತರಣಾ ದಾರಿಗಳನ್ನು ಆಯ್ಕೆ ಮಾಡಲು, ಇಂಟರ್ನೆಟ್ ಡೇಟಾ ಸಂವಹನ ಸುಧಾರಿಸಲು ಮತ್ತು ಕೃತಕ ಬುದ್ಧಿಮತ್ತೆ (AI) ಸಂಶೋಧನೆಗಳಲ್ಲಿ ಬಳಸಲಾಗುತ್ತಿದೆ. ಅಂದರೆ, ಒಂದು ಸಣ್ಣ ಇರುವೆ ಕೂಡ ಆಧುನಿಕ ವಿಜ್ಞಾನಕ್ಕೆ ದಾರಿ ತೋರಿಸಿದೆ. ಫೆರೋಮೋನ್ ದಾರಿ ಶಾಶ್ವತವೇ? ಇಲ್ಲ. ಫೆರೋಮೋನ್ ವಾಸನೆ ಸಮಯ ಕಳೆದಂತೆ ಕಡಿಮೆಯಾಗಿ ಮಾಯವಾಗುತ್ತೆ. ಆಹಾರ ಖಾಲಿಯಾದರೆ, ಹೊಸ ಇರುವೆಗಳು ಆ ದಾರಿಯಲ್ಲಿ ಬರುವುದಿಲ್ಲ. ಇದರಿಂದ ಹಳೆಯ ದಾರಿ ನಿಧಾನವಾಗಿ ಅಳಿಸಿಹೋಗಿ, ಅವು ಮತ್ತೆ ಹೊಸ ಆಹಾರಕ್ಕಾಗಿ ಹುಡುಕಾಟ ಆರಂಭಿಸುತ್ತವೆ.
ಚಿಕ್ಕ ಜೀವ... ದೊಡ್ಡ ಜ್ಞಾನ!
ಸಣ್ಣ ದೇಹದ ಇರುವೆಗಳು ಮನುಷ್ಯರಂತೆ ತಂತ್ರಜ್ಞಾನ ಬಳಸುವುದಿಲ್ಲ. ಆದರೆ ಅವುಗಳ ಸಾಮೂಹಿಕ ಬುದ್ಧಿವಂತಿಕೆ, ಮಾಹಿತಿ ಸಂವಹನ ಮತ್ತು ದಾರಿ ಹುಡುಕುವ ಸಾಮರ್ಥ್ಯ ನಿಜಕ್ಕೂ ಬೆರಗು ಮೂಡಿಸುತ್ತೆ. ಒಂದು ಸಕ್ಕರೆ ಅಗಳನ್ನು ಸಹ ನಿಖರವಾಗಿ ಪತ್ತೆಹಚ್ಚುವ ಇರುವೆಗಳ ಈ ಗುಣ, ಪ್ರಕೃತಿ ನಿರ್ಮಿಸಿದ ಅದ್ಭುತ 'ಗೂಗಲ್ ಮ್ಯಾಪ್' ಎನ್ನಬಹುದು.


