- Home
- Technology
- Science
- ಗುರುತ್ವಾಕರ್ಷಣೆಯಿಂದ ದುರ್ವಾಸನೆ ಬರುತ್ತಿದೆ! ಪೂರ್ಣ ಚೇತರಿಕೆ ಕಂಡ ಗಗನಯಾನಿ ಸುನೀತಾ, ವಿಲ್ಮೋರ್
ಗುರುತ್ವಾಕರ್ಷಣೆಯಿಂದ ದುರ್ವಾಸನೆ ಬರುತ್ತಿದೆ! ಪೂರ್ಣ ಚೇತರಿಕೆ ಕಂಡ ಗಗನಯಾನಿ ಸುನೀತಾ, ವಿಲ್ಮೋರ್
ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ಎಂಟು ದಿನಗಳ ಬಾಹ್ಯಾಕಾಶ ಯಾನವು ತಾಂತ್ರಿಕ ಸಮಸ್ಯೆಗಳಿಂದ ಒಂಬತ್ತು ತಿಂಗಳವರೆಗೆ ವಿಸ್ತರಿಸಿತು. ಭೂಮಿಗೆ ಮರಳಿದ ನಂತರ, ಅವರು ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವಲ್ಲಿ ದೈಹಿಕ ಸವಾಲುಗಳನ್ನು ಎದುರಿಸಿದರು.

ಜೂನ್ 2024ರಲ್ಲಿ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ಹಾರಿದರು. ಕೇವಲ 8 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲು ತೆರಳಿದ್ದರು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಅವರ ಬಾಹ್ಯಾಕಾಶ ವಾಸ್ತವ್ಯ 256 ದಿನಗಳವರೆಗೆ ಮುಂದುವರೆಯಿತು. ಅಂದರೆ ಬರೋಬ್ಬರಿ ಒಂಬತ್ತು ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲೇ ಕಳೆದರು.
ಭೂಮಿಗೆ ಮರಳಿದ ನಂತರದ ಸವಾಲುಗಳು
ಮಾರ್ಚ್ 2025ರಲ್ಲಿ ಭೂಮಿಗೆ ಮರಳಿದ ನಂತರ, ಈ ಇಬ್ಬರೂ ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಮತ್ತೆ ಹೊಂದಿಕೊಳ್ಳುವಲ್ಲಿ ಹಲವಾರು ದೈಹಿಕ ತೊಂದರೆಗಳನ್ನು ಅನುಭವಿಸಿದರು. "ಗುರುತ್ವಾಕರ್ಷಣೆ ಕೆಲವೊಮ್ಮೆ ದುರ್ವಾಸನೆ ಬೀರುತ್ತದೆ" ವಿಲ್ಮೋರ್ ತಮಾಷೆ ಮಾಡಿದರು. ಅಂದರೆ ಭೂಮಿಗೆ ಮರಳಿದ ತಕ್ಷಣ ಅವರ ಶರೀರದಲ್ಲಿ ನೋವುಗಳು ಮತ್ತು ಅಸ್ವಸ್ಥತೆ ಕಾಣಿಸಿಕೊಂಡವು. ಬಾಹ್ಯಾಕಾಶದಲ್ಲಿ ತೇಲುವ ಪರಿಸ್ಥಿತಿಯಲ್ಲಿ ನಿವಾರಣೆಯಾದ ಕುತ್ತಿಗೆ ನೋವು, ಪುನಃ ಭೂಮಿಗೆ ಮರಳಿದ ಮೇಲೆ ಅವರಲ್ಲಿ ಮತ್ತೆ ಕಾಣಿಸಿಕೊಂಡಿತು.
"ನಾವು ಇನ್ನೂ ಸಮುದ್ರದ ಮೇಲೆ ಕ್ಯಾಪ್ಸುಲ್‌ನಲ್ಲಿ ತೇಲುತ್ತಿದ್ದಾಗಲೇ ನನ್ನ ಕುತ್ತಿಗೆ ನೋವು ಆರಂಭವಾಯಿತು". ಇದು ಸ್ವಲ್ಪ ಭಿನ್ನ ಅನುಭವವಾಗಿತ್ತು. ನಮಗೆ ಕೆಲಸ ಮಾಡಿದ ಎಲ್ಲರ ಬಗ್ಗೆ ಜವಾಬ್ದಾರಿಯ ಭಾವನೆಯಿತ್ತು. ಬಾಹ್ಯಾಕಾಶದಿಂದ ಮರಳಿದ ಮೇಲೆ ನನ್ನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿತ್ತು. ಬೆಳಗ್ಗೆ 4 ಗಂಟೆ ಎದ್ದಾಗ ನನಗೆ ಭೂಮಿಗೆ ಹಿಂದಿರುಗಿದ ಅನುಭವವಾಗುತ್ತಿತ್ತು! ಎಂದು ಅವರು ಹೇಳಿದರು.
ರಿಹ್ಯಾಬಿಲಿಟೇಶನ್ ಮತ್ತು ವ್ಯಾಯಾಮ
ಇಬ್ಬರೂ ಗಗನಯಾತ್ರಿಗಳು ನಾಸಾದ ವೈದ್ಯಕೀಯ ತಂಡದೊಂದಿಗೆ ದಿನಕ್ಕೆ ಕನಿಷ್ಠ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು. ಅವರ 45 ದಿನಗಳ ರಿಹ್ಯಾಬಿಲಿಟೇಶನ್ ಮತ್ತು ವ್ಯಾಯಾಮ ಸೆಷನ್ ನಲ್ಲಿ ಶರೀರದ ಚಲನೆ (ಮೂವ್ಮೆಂಟ್), ಸ್ನಾಯು ಬಲವರ್ಧನೆ, ಶರೀರದ ಫ್ಲೆಕ್ಸಿಬಿಲಿಟಿ ಮತ್ತು ಶಕ್ತಿ ಹೆಚ್ಚಳಗೊಳಿಸಲು ಬೇಕಾಗುವ ಅಂಶಗಳ ಮೇಲೆ ಹೆಚ್ಚು ಗಮನ ಕೊಡಲಾಯ್ತು. ಬಾಹ್ಯಾಕಾಶದಲ್ಲೂ ದಿನನಿತ್ಯ ವ್ಯಾಯಾಮ ಇದ್ದರೂ, ಭೂಮಿಗೆ ಹಿಂತಿರುಗಿದಾಗ ಅವರು ಸ್ನಾಯು ಬಲ ಕುಗ್ಗಿತ್ತು ಮತ್ತು ಸಮತೋಲನದ ಸಮಸ್ಯೆಗಳನ್ನು ಅನುಭವಿಸಿದರು. ಇದು ದೀರ್ಘಕಾಲದ ಸೂಕ್ಷ್ಮ ಗುರುತ್ವಾಕರ್ಷಣೆಯ ಮಾನವ ದೇಹದ ಮೇಲೆ ಇರುವ ಪರಿಣಾಮವನ್ನು ತೋರಿಸುತ್ತದೆ.
ಮೆದುಳಿನ ಬದಲಾವಣೆಗಳೂ ಸಾಧ್ಯ
ವೈದ್ಯಕೀಯ ಅಧ್ಯಯನಗಳ ಪ್ರಕಾರ, ದೀರ್ಘ ಬಾಹ್ಯಾಕಾಶ ವಾಸ್ತವ್ಯವು ದೈಹಿಕ ತೊಂದರೆಗಷ್ಟೇ ಅಲ್ಲ, ಮೆದುಳಿನಲ್ಲಿಯೂ ಬದಲಾವಣೆಗಳನ್ನು ತರಬಹುದು. ಉದಾಹರಣೆಗೆ ಮೆದುಳು ತಲೆಬುರುಡೆಯ ಮೇಲೆ ಜಾಗ ಬದಲಾಯಿಸಬಹುದು, ಮೆದುಳಿನೊಳಗಿನ ದ್ರವ ತುಂಬಿದ ಜಾಗಗಳು (fluid-filled spaces) ವಿಸ್ತರಿಸಬಹುದು. ಇವುಗಳಲ್ಲಿ ಕೆಲವೊಂದು ಬದಲಾವಣೆಗಳು ಭೂಮಿಗೆ ಮರಳಿದ ಬಳಿಕವೂ ಮುಂದುವರಿಯಬಹುದು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ನಾಸಾದ ಭಾರತೀಯ ಮೂಲದ ಗಗನಯಾತ್ರಿಯಾಗಿರುವ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಇದೀಗ ತಮ್ಮ ದೈನಂದಿನ ಜೀವನಕ್ಕೆ ಹಿಂತಿರುಗುತ್ತಿದ್ದಾರೆ ಹಾಗೂ ಬೋಯಿಂಗ್ ಮತ್ತು ನಾಸಾ ಜೊತೆ ತಮ್ಮ ಕೆಲಸಗಳನ್ನು ಮುಂದುವರಿಸುತ್ತಿದ್ದಾರೆ. ಆದರೆ ಈ ಅನುಭವವು ಕೇವಲ ತಾಂತ್ರಿಕವಲ್ಲ, ದೈಹಿಕ ಹಾಗೂ ಮಾನಸಿಕವಾಗಿ ದೊಡ್ಡ ಸವಾಲುಗಳನ್ನೂ ತಂದಿದೆ. ಅವರ ಧೈರ್ಯ ಮತ್ತು ಶ್ರದ್ಧೆ, ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳ ಹಾದಿಗೆ ಬೆಳಕಾಗುತ್ತವೆ.