ಚಂದ್ರನ ಮೇಲೆ ಕಾಲಿಟ್ಟ 12 ಮಂದಿ ಯಾರು ಗೊತ್ತಾ!: ಅತಿ ಹೆಚ್ಚು ಸಮಯ ಇದ್ದವರಾರು?
ಬೆಂಗಳೂರು (ಆ.22): ನಮ್ಮ ದೇಶದ ಚಂದ್ರಯಾನ-3 ಲ್ಯಾಂಡಿಂಗ್ ಬಗ್ಗೆ ಜಾಗತಿಕ ಮಟ್ಟದಲ್ಲಿಯೇ ಭಾರಿ ಕುತೂಹಲ ಎದ್ದಿದೆ. ಆದರೆ, ಭೂಮಿಯಿಂದ 2,39,000 ಮೈಲುಗಳಷ್ಟು ದೂರದಲ್ಲಿರುವ ನೈಸರ್ಗಿಕ ಉಪಗ್ರಹ ಚಂದ್ರನ ಅಂಗಳಕ್ಕೆ ಈವರೆಗೆ 12 ಮಂದಿ ಹೋಗಿ ಬಂದಿದ್ದಾರೆ. ಮೊದಲಿಗ ನೀಲ್ ಆರ್ಮ್ ಸ್ಟ್ರಾಂಗ್ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಉಳಿದ 11 ಜನರು ಯಾರು, ಈ ಪೈಕಿ ಯಾರು ಹೆಚ್ಚು ಹೊತ್ತು ಚಂದ್ರನ ಅಂಗಳದಲ್ಲಿದ್ದರು ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಅಮೇರಿಕಾದ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲ್ಮೈಗೆ ಕಾಲಿಟ್ಟ ಮೊದಲ ವ್ಯಕ್ತಿ (1969ರ ಜುಲೈ 20) ಆಗಿದ್ದಾರೆ. ಅಮೇರಿಕಾದ ಅಪೊಲೊ-11 ಕಾರ್ಯಾಚರಣೆ ವೇಳೆ ಬಜ್ ಆಲ್ಡ್ರಿನ್ ಅವರು ಕೂಡ ನೀಲ್ ಆರ್ಮ್‌ಸ್ಟ್ರಾಂಗ್ ಜೊತೆಗಿದ್ದರು. ಅವರು ಚಂದ್ರನ ಮೇಲೆ ಕಾಲಿಟ್ಟ ವಿಶ್ವದ 2ನೇ ವ್ಯಕ್ತಿಯಾಗಿದ್ದಾರೆ.
ನೀಲ್ ಆರ್ಮ್‌ಸ್ಟ್ರಾಂಗ್ (1930-2012)–ಅಪೊಲೊ 11
ಎಡ್ವಿನ್ ಬಜ್ ಆಲ್ಡ್ರಿನ್ (1930-)–ಅಪೊಲೊ 11
ಇನ್ನು ಅಮೆರಿಕವು ನವೆಂಬರ್ 1969 ರಲ್ಲಿ ಅಪೊಲೊ 12 ಮಿಷನ್ ಅನ್ನು ಕಳುಹಿಸಿತು, ಅದರ ಮೂಲಕ ಪೀಟ್ ಕಾನ್ರಾಡ್ ಚಂದ್ರನ ಮೇಲೆ ಕಾಲಿಟ್ಟ 3ನೇ ವ್ಯಕ್ತಿಯಾಗಿದ್ದಾರೆ. ಇವರು 1999 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಇವರೊಂದಿಗೆ ಅಪೊಲೊ 12 ಮಿಷನ್‌ನ ಚಂದ್ರನ ಮೇಲೆ ಹೋದ 4ನೇ ವ್ಯಕ್ತಿ ಅಲನ್ ಬೀನ್ ಆಗಿದ್ದಾರೆ.
ಚಾರ್ಲ್ಸ್ ಪೀಟ್ ಕಾನ್ರಾಡ್ (1930-1999)–ಅಪೊಲೊ 12
ಅಲನ್ ಬೀನ್ (1932-2018)–ಅಪೊಲೊ 12
ಚಂದ್ರನ ಮೇಲೆ ದೀರ್ಘಾವಧಿ ಕೆಲಸ ಮಾಡಿದ ಎಡ್ಗರ್ ಮಿಚೆಲ್:
14 ಮಿಷನ್ ಅಡಿಯಲ್ಲಿ ಅಮೇರಿಕನ್ ಗಗನಯಾತ್ರಿ ಅಲನ್ ಶೆಪರ್ಡ್ ಚಂದ್ರನ ಮೇಲೆ ಕಾಲಿಟ್ಟ 5ನೇ ವ್ಯಕ್ತಿಯಾಗಿದ್ದಾರೆ. ಇವರೊಂದಿಗೆ ಎಡ್ಗರ್ ಮಿಚೆಲ್ ಅಪೊಲೊ ಚಂದ್ರನ ಮೇಲೆ ಹೆಜ್ಜೆ ಹಾಕಿದ6ನೇ ವ್ಯಕ್ತಿಯಾದರು. ಎಡ್ಗರ್ ಮಿಚೆಲ್ ಚಂದ್ರನ ಮೇಲ್ಮೈನ ಫ್ರಾ ಮೌರೊ ಹೈಲ್ಯಾಂಡ್ಸ್ ಪ್ರದೇಶದಲ್ಲಿ ಬರೋಬ್ಬರಿ 9 ಗಂಟೆಗಳ ಕಾಲ (ಧೀರ್ಘಾವಧಿ) ಕೆಲಸ ಮಾಡಿದವರಾಗಿದ್ದಾರೆ.
ಅಲನ್ ಬಿ. ಶೆಪರ್ಡ್ ಜೂನಿಯರ್ (1923-1998)–ಅಪೊಲೊ 14
ಎಡ್ಗರ್ ಡಿ. ಮಿಚೆಲ್ (1930-2016)–ಅಪೊಲೊ 14
ಅಪೊಲೊ-15 ಮಿಷನ್ ಮೂಲಕ ಡೇವಿಡ್ ಸ್ಕಾಟ್ ಅವರು ಚಂದ್ರನ ಮೇಲೆ ಕಾಲಿಟ್ಟ 7ನೇ ವ್ಯಕ್ತಿಯಾಗಿದ್ದಾರೆ. ಜೇಮ್ಸ್ ಇರ್ವಿನ್ ಚಂದ್ರನ ಮೇಲೆ ಕಾಲಿಟ್ಟ 8ನೇ ವ್ಯಕ್ತಿಯಾಗಿದ್ದಾರೆ. ಇರ್ವಿನ್ ಅಪೊಲೊ ಲೂನಾರ್ ಮಾಡ್ಯೂಲ್‌ನ ಪೈಲಟ್ ಕೂಡ ಆಗಿದ್ದರು.
ಡೇವಿಡ್ ಆರ್. ಸ್ಕಾಟ್ (1932-)–ಅಪೊಲೊ 15
ಜೇಮ್ಸ್ ಬಿ. ಇರ್ವಿನ್ (1930-1991)–ಅಪೊಲೊ 15
ನಾಸಾದ ಅಪೊಲೊ-16 ಮಿಷನ್ ಅಡಿಯಲ್ಲಿ ಜಾನ್ ಯಂಗ್ ಚಂದ್ರನ ಮೇಲೆ ಕಾಲಿಟ್ಟ 9ನೇ ವ್ಯಕ್ತಿಯಾಗಿದ್ದಾರೆ. ಇವರೊಂದಿಗೆ ಚಾರ್ಲ್ಸ್ ಡ್ಯೂಕ್ ಕೂಡ ಅಪೊಲೊ 16 ಮಿಷನ್ ಮೂಲಕ ಜಾನ್ ಯಂಗ್ ಜೊತೆ ಚಂದ್ರನನ್ನು ತಲುಪಿದರು. ಈ ಮೂಲಕ ಚಾರ್ಲ್ಸ್ ಡ್ಯೂಕ್ (36 ವರ್ಷ) ಚಂದ್ರನ ಮೇಲೆ ಕಾಲಿಟ್ಟ 10ನೇ ವ್ಯಕ್ತಿ ಹಾಗೂ ಅತ್ಯಂತ ಕಿರಿಯ ವ್ಯಕ್ತಿಯೂ ಆಗಿದಾರೆ.
ಜಾನ್ ಡಬ್ಲ್ಯೂ. ಯಂಗ್ (1930-2018)–ಅಪೊಲೊ 10 (ಕಕ್ಷೆ), ಅಪೊಲೊ 16 (ಲ್ಯಾಂಡಿಂಗ್)
ಚಾರ್ಲ್ಸ್ ಎಂ. ಡ್ಯೂಕ್ (1935-)–ಅಪೊಲೊ 16
ಅಮೇರಿಕಾದ ಅಪೊಲೊ 17 ಮಿಷನ್ ಅಡಿಯಲ್ಲಿ ಯುಜೀನ್ ಸೆರ್ನಾನ್ 11ನೇ ವ್ಯಕ್ತಿಯಾಗಿ ಚಂದ್ರನ ಅಂಗಳದ ಮೇಲೆ ಕಾಲಿಟ್ಟಿದ್ದಾರೆ. ಜೊತೆಗೆ, ಚಂದ್ರನ ಮೇಲೆ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದ ಕೊನೆಯ ವ್ಯಕ್ತಿಯೂ ಆಗಿದ್ದಾರೆ. ಇಬವರೊಂದಿಗೆ ಹ್ಯಾರಿಸನ್ ಸ್ಮಿತ್ ಚಂದ್ರನ ಅಂಗಳಕ್ಕೆ ಹೋಗಿ ಕಾಲಿಟ್ಟ 12ನೇ ವ್ಯಕ್ತಿಯಾಗಿದ್ದಾರೆ.
ಯುಜೀನ್ ಸೆರ್ನಾನ್ (1934-2017)–ಅಪೊಲೊ 10 (ಕಕ್ಷೆ), ಅಪೊಲೊ 17 (ಲ್ಯಾಂಡಿಂಗ್)
ಹ್ಯಾರಿಸನ್ ಎಚ್. ಸ್ಮಿತ್ (1935-)–ಅಪೊಲೊ 17