ಸುದೀಪ್, ಪುನೀತ್ ಹೆಜ್ಜೆಯಲ್ಲಿ ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾದ ಭಕ್ತಿಯ ಪಯಣ
ನಟ ಯುವರಾಜ್ ಕುಮಾರ್ ಅವರು 'ಎಕ್ಕ' ಚಿತ್ರದ ಬಿಡುಗಡೆಗೂ ಮುನ್ನ ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಟ ಸುದೀಪ್, ಪುನೀತ್ ಬಳಿಕ ಯುವ ಇಲ್ಲಿಗೆ ಭೇಟಿ ನೀಡಿದ್ದಾರೆ.

ರಾಯಚೂರು (ಜು.06): ನಟ ಯುವ ರಾಜ್ ಕುಮಾರ್ ಅವರು ಹೊಸ ಚಿತ್ರ 'ಎಕ್ಕ' ಬಿಡುಗಡೆಯ ಹಿನ್ನೆಲೆಯಲ್ಲಿ ಟೆಂಪಲ್ ರನ್ ಪ್ರಾರಂಭಿಸಿದ್ದಾರೆ. ಇಂದು ರಾಯಚೂರಿನ ಪ್ರಸಿದ್ಧ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದರು. ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ, ಪ್ರದಕ್ಷಿಣೆ ಹಾಕಿದ ಬಳಿಕ, ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ಧಾರ್ಮಿಕ ಪ್ರವಾಸ – ಮನಸ್ಸಿಗೆ ಧೈರ್ಯ!
ದೇವರ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಯುವ ರಾಜ್ ಕುಮಾರ್, 'ಎಕ್ಕ' ಸಿನಿಮಾ ಆರಂಭಿಸುವ ಮುನ್ನ ಮಂತ್ರಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿಸಿದ್ದೆ. ಹೊಸ ಕೆಲಸ ಶುರು ಮಾಡುವ ಮುನ್ನ ನಾವು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತ್ತೇವೆ. ಅದೇ ನಮಗೆ ದೊಡ್ಡ ಧೈರ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿಯೇ ಅವರು 'ಇಂದು ರಾಯಚೂರಿನ ಆಂಜನೇಯಸ್ವಾಮಿ ದರ್ಶನ ಪಡೆದೆ. ನನ್ನ ಚಿಕ್ಕಪ್ಪ ಪುನೀತ್ ಹಾಗೂ ನಟ ಸುದೀಪ್ ಅವರು ಇಲ್ಲಿಗೆ ಬಂದಿದ್ದನ್ನು ನಾನು ಸ್ಮರಿಸುತ್ತೇನೆ' ಎಂದರು.
'ಎಕ್ಕ' ಸಿನಿಮಾ ಸಂದೇಶ-ಮನುಷ್ಯನಲ್ಲಿ ಒಳ್ಳೆಯತನ ಉಳಿಯಬೇಕು
ನಟ ಯುವ ರಾಜ್ ಕುಮಾರ್ ಮಾತನಾಡುತ್ತಾ, 'ಮನುಷ್ಯನಲ್ಲಿ ಒಳ್ಳೆತನವನ್ನು ಕಾಪಾಡಿಕೊಳ್ಳಬೇಕು ಎಂಬುದು 'ಎಕ್ಕ' ಚಿತ್ರದ ಪ್ರಮುಖ ಸಂದೇಶವಾಗಿದೆ. ನಾನು ಜಾಕಿ ಸಿನಿಮಾದ ಪಾತ್ರದಿಂದ ಪ್ರೇರಣೆ ಪಡೆದು ಈ ಪಾತ್ರ ಮಾಡುತ್ತಿದ್ದೇನೆ' ಎಂದು ಹೇಳಿದರು. 'ಬ್ಯಾಂಗಲ್ ಬಂಗಾರಿ' ಹಾಡು ಯಶಸ್ವಿಯಾಗಿ ಹಿನ್ನೆಲೆಯಲ್ಲೇ 'ಎಕ್ಕ' ಸಿನಿಮಾದ ಮೇಲೆ ಅಪಾರ ನಿರೀಕ್ಷೆ ಇದೆ. ದೇವರ ಆಶೀರ್ವಾದವೇ ನಮ್ಮನ್ನ ಮುಂದಕ್ಕೆ ತರುತ್ತದೆ ಎಂದು ನಟ ಅಭಿಪ್ರಾಯಪಟ್ಟರು.
ದೇವರ ದರ್ಶನದ ವೇಳೆ ಫ್ಯಾನ್ಸ್ ಹೆಜ್ಜೆ!
ದೇವಾಲಯದ ಎದುರು ನಟ ಯುವ ರಾಜ್ ಕುಮಾರ್ ಅನ್ನು ನೋಡಿದ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಸೇರಿದ್ದು ಪೊಲೀಸರು ಅಭಿಮಾನಿಗಳನ್ನು ನಿಯಂತ್ರಣ ಮಾಡುವುದಕ್ಕೆ ಹರಸಾಸಹಪಟ್ಟರು. ಇನ್ನು ನಾಯಕನ ಜೊತೆಗೆ ಫೋಟೋ ತೆಗೆದು ಕೊಂಡರು. ದೇವರಿಗೆ ಭಕ್ತಿ ಸಮರ್ಪಣೆ ಮತ್ತು ಇಲ್ಲಿನ ಅಭಿಮಾನಿಗಳ ಪ್ರೀತಿ ನೋಡಿ ಮತ್ತಷ್ಟು ಒಳ್ಳೆಯ ಸಿನಿಮಾ ಮಾಡುವ ಉತ್ಸಾಹ ಹೆಚ್ಚಾಗಿದೆ ಎಂದು ಹೇಳಿದರು.