ಒಂದು ಕಾಲದಲ್ಲಿ ಕನ್ನಡಿಗರ ಫೇವರಿಟ್ ನಟಿ ಗೀತಾಗೆ ಕನ್ನಡದಲ್ಲೇ ಅವಕಾಶ ಸಿಕ್ತಿಲ್ವಾ?
ಚಂದನವನದಲ್ಲಿ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರಂತಹ ದಿಗ್ಗಜರ ಜೊತೆ ನಟಿಸಿದ್ದ ನಟಿ ಗೀತಾಗೆ ಈವಾಗ ಕನ್ನಡದಲ್ಲಿ ಅವಕಾಶಗಳೇ ಸಿಗ್ತಿಲ್ವಾ?

80-90ರ ದಶಕದ ಸ್ಟಾರ್ ನಟಿ ಗೀತಾ (Actress Geetha) ನಿಮಗೆ ನೆನಪಿರಬೇಕು ಅಲ್ವಾ? ಆ ಕಾಲದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಲಂ, ಹಿಂದಿ ಭಾಷೆಯಲ್ಲಿ ಮಿಂಚಿದ ನಟಿ ಗೀತಾ. ಕನ್ನಡದವರು ಅಲ್ಲದೇ ಇದ್ದರೂ ಕನ್ನಡ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಮೋಡಿ ಮಾಡಿದ ಸುಂದರಿ ಇವರು.
ಕನ್ನಡದಲ್ಲಿ ಡಾ. ರಾಜ್ ಕುಮಾರ್ (Dr Rajkumar), ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ನಟಿಸಿ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದವರು ಗೀತಾ. ಎರಡು ರೇಖೆಗಳು, ಆರಾಧನೆ, ಮಮತೆಯ ಮಡಿಲು, ಗಿರಿ ಬಾಲೆ, ಧ್ರುವ ತಾರೆ ಮೊದಲಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ಒಂದು ಕಾಲದಲ್ಲಿ ಕನ್ನಡಿಗರಿಗೆ ಮೋಡಿ ಮಾಡಿದ ನಟಿ ಗೀತಾ ಈವಾಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಯಾಕೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿಲ್ಲ? ಇವರು ಮತ್ತೆ ಕನ್ನಡಕ್ಕೆ ಬರೋದು ಯಾವಾಗ ಎನ್ನುವ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕೆಲ್ಲಾ ಉತ್ತರ ಇಲ್ಲಿದೆ.
1962ರಲ್ಲಿ ಚೆನ್ನೈನಲ್ಲಿ ಜನಿಸಿದ ಗೀತಾ, 1978ರಲ್ಲಿ ತಮಿಳು ಸಿನಿಮಾ ಭೈರವಿ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು, ಈ ಸಿನಿಮಾದಲ್ಲಿ ಗೀತಾ ರಜನಿಕಾಂತ್ (Rajanikanth) ತಂಗಿಯ ಪಾತ್ರದಲ್ಲಿ ನಟಿಸಿದ್ದರು. ಅಂದಿನಿಂದ ಗೀತ ಎಂದಿಗೂ ಸಿನಿಮಾರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ.
ತಮ್ಮ ಮನಮುಟ್ಟುವ ಅಭಿನಯ, ಸ್ಥಿಗ್ಧ ಸೌಂದರ್ಯದಿಂದಾಗಿ ಜನರ ಮನಸ್ಸು ಗೆದ್ದ ನಟಿ ಗೀತಾ, ಇಲ್ಲಿವರೆಗೆ ತಮಿಳು, ತೆಲುಗು, ಕನ್ನಡ, ಮಲಯಾಲಂ, ಹಿಂದಿ ಸೇರಿ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಗೀತಾ ಸಿನಿಮಾ ರಂಗದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿರುವ ಸಮಯದಲ್ಲೇ ಅವರು ಚಾರ್ಟೆಡ್ ಅಕೌಂಟೆಂಟ್ ವಾಸನ್ ಎನ್ನುವವರನ್ನು ಪ್ರೀತಿಸಿ, ಮದುವೆಯಾದರು. ಬಳಿಕ ಅಮೇರಿಕಾದಲ್ಲಿ ನೆಲೆಸಿದ್ದರು. ಅಲ್ಲಿ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು.
ಆದರೆ ತಾಯ್ನಾಡಿನ ಕಡೆಗಿನ ಸೆಳೆತ ಹಾಗೂ ನಟನೆಯ ಹಂಬಲ ಎಲ್ಲವೂ ಅವರನ್ನು ಅಮೇರಿಕಾ ಬಿಟ್ಟು ಮತ್ತೆ ಭಾರತಕ್ಕೆ ಹಿಂದಿರುಗುವಂತೆ ಮಾಡಿತು. ಸದ್ಯ ತಮ್ಮ ಫ್ಯಾಮಿಲಿ ಜೊತೆ ಗೀತಾ ಚೆನ್ನೈನಲ್ಲಿ ಮನೆ ಖರೀದಿಸಿ ಅಲ್ಲಿ ವಾಸ ಮಾಡುತ್ತಿದ್ದಾರೆ. ತಮಿಳು, ತೆಲುಗು ಸಿನಿಮಾ, ಸೀರಿಯಲ್ ಗಳಲ್ಲಿ ಸದ್ಯ ನಟಿ ಬ್ಯುಸಿಯಾಗಿದ್ದಾರೆ.
ಅಷ್ಟೇ ಅಲ್ಲ ಭಾರತಕ್ಕೆ ಬಂದ ನಂತರ ಒಂದೊಂದೆ ಸಿನಿಮಾಗಳಲ್ಲಿ, ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಆರಂಭಿಸಿದರು. ಈ ನಟಿಗೆ ಕನ್ನಡ ಸಿನಿಮಾಗಳಲ್ಲೂ (Kannada films) ನಟಿಸೋಕೆ ಆಸೆ ಇದೆಯಂತೆ, ಆದರೆ ಕನ್ನಡದಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗೀತಾ ಕೊನೆಯದಾಗಿ 2019ರಲ್ಲಿ ಕನ್ನಡದಲ್ಲಿ 10ನೇ ತರಗತಿ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕನ್ನಡಿಗರು ಮತ್ತೆ ಗೀತಾರನ್ನು ಕನ್ನಡ ಸಿನಿಪರದೆ ಮೇಲೆ ನೋಡಲು ಕಾತುರರಾಗಿದ್ದಾರೆ.