ಯಶ್ ಟಾಕ್ಸಿಕ್ ನಿಂದ ಕರೀನಾ ಹೊರ ಬರಲು ಡೇಟ್ಸ್ ಸಮಸ್ಯೆ ಕಾರಣವಲ್ಲ! ಐಶ್ವರ್ಯಾ ರೈ ಜತೆಗೂ ಮಾತನಾಡಿದ್ದ ಚಿತ್ರತಂಡ
ನಟ ಯಶ್ ಟಾಕ್ಸಿಕ್ ಸಿನೆಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಟಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಕರೀನಾ ಈ ಚಿತ್ರದಲ್ಲಿ ನಟಿಸಲು ಡೇಟ್ಸ್ ಸಮಸ್ಯೆಯಿಂದ ಹೊರನಡೆದಿರುವುದಲ್ಲ ಎಂಬುದು ಸದ್ಯದ ಮಾಹಿತಿ ಅದಕ್ಕೆ ಕಾರಣವೂ ಬಹಿರಂಗವಾಗಿದೆ. ಇದೆಲ್ಲದರ ನಡುವೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರನ್ನು ಚಿತ್ರಕ್ಕೆ ಕರೆತರಲು ಸಿದ್ದತೆ ನಡೆದಿತ್ತು ಎಂಬ ಅಂಶ ಕೂಡ ಸಿನಿ ರಂಗದಿಂದ ಕೇಳಿಬರುತ್ತಿದೆ.
ಕೆಜಿಎಫ್ ಭರ್ಜರಿ ಯಶಸ್ಸಿನ ಬಳಿಕ ಯಶ್ ಅಭಿಮಾನಿಗಳು ಬಹಳಷ್ಟು ವರ್ಷಗಳಿಂದ ಕಾದು ಕುಳಿತ್ತಿರುವುದು ನಟ ಯಶ್ ಅವರ ಟಾಕ್ಸಿಸ್ ಚಿತ್ರಕ್ಕೆ. ಇದೀಗ ಈ ಚಿತ್ರದ ಬಗ್ಗೆ ದಿನಕ್ಕೊಂದು ಅಪ್ಡೇಟ್ ಸಿಗುತ್ತಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಚಿತ್ರದಲ್ಲಿ ಯಶ್ ಸಹೋದರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಈ ಚಿತ್ರದಲ್ಲಿ ಕರೀನಾ ನಟಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಸೆಟ್ ಹಾಕಿ ಚಿತ್ರದ ಚಿತ್ರೀಕರಣ ಶುರು ಮಾಡಿದ್ದಾರೆ ಎಂಬುದು ಇನ್ನೊಂದು ಭಾಗದ ಸುದ್ದಿ, ಬೆಂಗಳೂರು ಮಾತ್ರವಲ್ಲದೆ, ಗೋವಾ, ಶ್ರೀಲಂಕಾ, ಲಂಡನ್ ಮತ್ತು ದೆಹಲಿಯಲ್ಲಿ ಕೂಡ ಚಿತ್ರೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕಟ್ಟರಿ ಆವರಣದಲ್ಲಿ ಸೆಟ್ ಹಾಕಲಾಗಿದೆ. ಮುಂದಿನ ವರ್ಷ ಎಪ್ರಿಲ್ 10 ಕ್ಕೆ ಚಿತ್ರ ಬಿಡುಗಡೆಗೆ ದಿನಾಂಕ ಕೂಡ ಫಿಕ್ಸ್ ಮಾಡಲಾಗಿದೆ.
ಆದರೆ ಕರೀನಾ ಕಪೂರ್ ಖಾನ್ ಡೇಟ್ಸ್ ಸಮಸ್ಯೆಯಿಂದ ಯಶ್ ಅವರ ಟಾಕ್ಸಿಕ್ ಚಿತ್ರದಿಂದ ಹೊರಬಂದಿಲ್ಲವಂತೆ. ಬದಲಾಗಿ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ, ಹೀಗಾಗಿ ಯಶ್ ಸಹೋದರಿ ಪಾತ್ರಕ್ಕೆ ಅಷ್ಟು ಮಹತ್ವ ಇಲ್ಲ ಎಂಬ ಉದ್ದೇಶದಿಂದ ಬಾಲಿವುಡ್ ಬೆಡಗಿ ಕರೀನಾ ಚಿತ್ರದಿಂದ ಹೊರ ನಡೆದಿದ್ದಾರೆಂದು ಊಹಾಪೋಹಗಳು ಎದ್ದಿದೆ.
ಆದರೆ ಟಾಕ್ಸಿಕ್ ಚಿತ್ರದಲ್ಲಿ ನಾಯಕನ ಸಹೋದರಿ ಪಾತ್ರಕ್ಕೂ ತುಂಬಾ ಮಹತ್ವ ಇದೆಯಂತೆ. ಹೀಗಾಗಿ ಕರೀನಾ ಕಪೂರ್ ಯಾವಾಗ ನಾನು ನಟಿಸಲ್ಲ ಎಂದು ಹೇಳಿದರೋ ಚಿತ್ರತಂಡ ಸೌತ್ ಸಿನಿ ಸ್ಟಾರ್ ನಯನತಾರಾ ಅವರನ್ನು ಮಾತನಾಡಿಸಿದೆಯಂತೆ. ನಯನತಾರಾ ಕೂಡ ಟಾಕ್ಸಿಕ್ ಚಿತ್ರದ ಕಥೆಯನ್ನು ಮೆಚ್ಚಿಕೊಂಡಿದ್ದು, ಯಶ್ ಸಹೋದರಿಯ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಇನ್ನು ಇದೆಲ್ಲದರ ನಡುವೆ ಟಾಕ್ಸಿಕ್ ಸಿನೆಮಾದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರನ್ನು ಮಾತನಾಡಿಸಿರುವ ವಿಚಾರ ಬಹಿರಂಗವಾಗಿದೆ. ಕರಾವಳಿ ಬೆಡಗಿ ಐಶ್ವರ್ಯಾ ರೈ ಕನ್ನಡದವರಾಗಿದ್ದರೂ ಕೂಡ ಈವರೆಗೆ ಯಾವುದೇ ಕನ್ನಡ ಸಿನೆಮಾದಲ್ಲಿ ನಟಿಸಿಲ್ಲ. ಕನ್ನಡ ಚಿತ್ರರಂಗಕ್ಕೆ ಐಶ್ವರ್ಯಾ ರೈ ಬಚ್ಚನ್ ರನ್ನು ಕರೆದುಕೊಂಡು ಬರಲು ಪ್ರಯತ್ನಗಳು ನಡೆದಿತ್ತು ಆದರೆ ಯಾಔ ಪ್ರಯತ್ನವೂ ಫಲ ನೀಡಿರಲಿಲ್ಲ. ಈ ಹಿಂದೆ ಉಪೇಂದ್ರ H2O, ಸೂಪರ್ ಚಿತ್ರಗಳಿಗೂ ಅವರನ್ನು ಕರೆತರುವ ಪ್ರಯತ್ನ ನಡೆದಿತ್ತು. ಆದರೆ ಯಾವುದು ಕೂಡ ಈ ವರೆಗೆ ನಿಜವಾಗಿಲ್ಲ.
ಟಾಕ್ಸಿಕ್ ಚಿತ್ರದಿಂದಲಾದರೂ ಐಶ್ವರ್ಯಾ ಅವರನ್ನು ಕನ್ನಡದ ತೆರೆ ಮೇಲೆ ನೋಡುವ ಆಸೆ ನಿಜವಾಗುತ್ತಾ ಎಂದರೆ ಅದೂ ಕೂಡ ಈಗ ಡೌಟ್, ಯಾಕೆಂದರೆ ಟಾಕ್ಸಿಕ್ ಚಿತ್ರತಂಡ ಈ ಮೊದಲು ಐಶ್ವರ್ಯಾ ಅವರನ್ನು ಮಾತನಾಡಿಸಿತ್ತಂತೆ. ಆದರೆ ಕರಾವಳಿ ಬೆಡಗಿ ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಬಳಿಕ ಸುಮ್ಮನಾಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಐಶ್ವರ್ಯಾ ರೈ ಬಚ್ಚನ್ ಕನ್ನಡಕ್ಕೆ ಬರೋದು ಡೌಟ್ ಎನ್ನಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ನಟಿಸುತ್ತಿರುವ ಈ ಚಿತ್ರವನ್ನು ಪ್ರಸಿದ್ಧ ಮಹಿಳಾ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಷನ್ ಮಾಡುತ್ತಿದ್ದಾರೆ. ಹಾಲಿವುಡ್ ರೇಂಜ್ ನಲ್ಲಿ ಈ ಚಿತ್ರ ಮೂಡಿಬರಲಿದೆ. ಹೀಗಾಗಿ ಸಹಜವಾಗಿಯೇ ತಾರಾಗಣದ ಬಗ್ಗೆ ಕುತೂಹಲ ಹೆಚ್ಚಿದೆ. ಪ್ಯಾನ್ ಇಂಡಿಯಾ ಸಿನೆಮಾದ ಬಗ್ಗೆ ಸಿನಿ ಪ್ರೇಕ್ಷಕರ ಕಾತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.