- Home
- Entertainment
- Sandalwood
- ನಟಿ ತಾರಾ ಪುತ್ರನಿಗೆ 13ರ ಸಂಭ್ರಮ: ಬಾಲನಟನಾಗಿ ಸಿನಿಮಾಕ್ಕೆ ಎಂಟ್ರಿ- ಹುಟ್ಟುಹಬ್ಬದ ವಿಡಿಯೋ ವೈರಲ್
ನಟಿ ತಾರಾ ಪುತ್ರನಿಗೆ 13ರ ಸಂಭ್ರಮ: ಬಾಲನಟನಾಗಿ ಸಿನಿಮಾಕ್ಕೆ ಎಂಟ್ರಿ- ಹುಟ್ಟುಹಬ್ಬದ ವಿಡಿಯೋ ವೈರಲ್
ಹಿರಿಯ ನಟಿ ತಾರಾ ಅನುರಾಧಾ ಅವರು ಮೂರು ಬಾರಿ ಗರ್ಭಪಾತದ ನೋವು ಅನುಭವಿಸಿದ ನಂತರ ಕೃತಕ ಗರ್ಭಧಾರಣೆ (IVF) ಮೂಲಕ ಮಗ ಕೃಷ್ಣನಿಗೆ ಜನ್ಮ ನೀಡಿದರು. ಇತ್ತೀಚೆಗೆ 13ನೇ ವಸಂತಕ್ಕೆ ಕಾಲಿಟ್ಟಿರುವ ಕೃಷ್ಣ, 'ಶಿವಾರ್ಜುನ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾನೆ.

ಬೇಡಿಕೆಯ ನಟಿ
ಸ್ಯಾಂಡಲ್‌ವುಡ್ ನಟಿ ತಾರಾ ಅನುರಾಧಾ ಅವರ ಕುರಿತು ಹೇಳುವ ಅಗತ್ಯವೇ ಇಲ್ಲ ಬಿಡಿ. 52 ವರ್ಷ ವಯಸ್ಸಿನ ತಾರಾ ಅವರು ಇಂದಿಗೂ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತುಳಸಿದಳ ಚಿತ್ರದ ಮೂಲಕ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡವರು ಇವರು. ಆನಂದ್ , ಗುರಿ , ಮನೆಯೇ ಮಂತ್ರಾಲಯ , ರಣರಂಗ , ಡಾಕ್ಟರ್ ಕೃಷ್ಣ , ಉಂಡು ಹೋದ ಕೊಂಡು ಹೋದ , ಬೆಳ್ಳಿ ಕಾಲುಂಗುರ , ಮುಂಜಾನೆಯ ಮಂಜು , ಮುದ್ದಿನ ಮಾವ , ಸಿಪಾಯಿ , ಕಾನೂರು ಹೆಗ್ಗಡತಿ , ಹಸೀನಾ , ಸೈನೈಡ್ , ಈ ಬಂಧನ , ಶ್ರಾವಣಿ ಸುಬ್ರಮಣ್ಯ , ಹೆಬ್ಬೆಟ್ ರಾಮಕ್ಕ , ಬಡವ ರಾಸ್ಕಲ್ ಮುಂತಾದ ಸಿನಿಮಾಗಳಲ್ಲಿ ತಾರಾ ಅನುರಾಧಾ ಅಭಿನಯಿಸಿದ್ದಾರೆ. ತಮ್ಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ತಾರಾ ಅನುರಾಧಾ ಮುಡಿಗೇರಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ ವಿಡಿಯೋ ವೈರಲ್
ನಿನ್ನೆ ಅಂದರೆ ಫೆಬ್ರುವರಿ 1 ನಟಿ ತಾರಾ ಅವರ ಮಗನಿಗೆ 13ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿರುವ ತಾರಾ ದಂಪತಿಯ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ನೋವಿನ ಕಥೆ
ಅಷ್ಟಕ್ಕೂ ತಾರಾ ಅವರಿಗೆ ಈ ಮಗು ಹುಟ್ಟಿದ್ದರ ಹಿಂದೆ ತುಂಬಾ ನೋವಿನ ಕಥೆಯೂ ಇದೆ. ತಾರಾ ಅವರಿಗೆ ಮೂರು ಬಾರಿ ಮಿಸ್ಕ್ಯಾರೇಜ್ ಅಂದ್ರೆ ಗರ್ಭಪಾತವಾಗಿತ್ತು. ಆ ಬಳಿಕ ಹುಟ್ಟಿದ ಮಗ ಈತ. ತಾರಾ ಮತ್ತು ಛಾಯಾಗ್ರಾಹಕ ಎಚ್ ಸಿ ವೇಣು ದಂಪತಿಯ ಪುತ್ರ ಕೃಷ್ಣ. ಅಂದಹಾಗೆ ಕೃತಕ ಗರ್ಭಧಾರಣೆ ಮೂಲಕ ತಾರಾ ಮಗನನ್ನು ಪಡೆದುಕೊಂಡಿದ್ದಾರೆ. ಇವರು ಮಗನಿಗೆ ಜನ್ಮ ನೀಡಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಈ ಬಗ್ಗೆ ಮಾಧ್ಯಮಗಳಿಗೆ ವಿಷಯ ತಿಳಿಸಿದ್ದರು.
IVF ಮೂಲಕ ಮಗು
ಸುಮಾರು ಬಾರಿ ಕೌನ್ಸಿಲಿಂಗ್ ಮಾಡಿದ ಮೇಲೆ IVF ವಿಧಾನದ ಮೂಲಕ ಮಗು ಪಡೆಯಲು ತಾರಾ ಅವರು ಒಪ್ಪಿಗೆ ಸೂಚಿಸಿದ್ದರು ಎಂದು ವೈದ್ಯ ಗುರುಮೂರ್ತಿ ಹೇಳಿದ್ದರು. ಪತಿಯ ವೀರ್ಯಾಣುವನ್ನು ಸಂಗ್ರಹಿಸಿ ಕೃತಕವಾಗಿ ಗರ್ಭ ಬೆಳವಣಿಗೆ ಸಾಧಿಸಿ ಮಗುವನ್ನು ಪಡೆಯುವ ವಿಧಾನವಿದು. ವಿಭಿನ್ನ ಕಾರಣಗಳಿಂದ ನೈಸರ್ಗಿಕವಾಗಿ ಮಕ್ಕಳಾಗಲು ಸಾಧ್ಯವಾಗದ ಸಂದರ್ಭದಲ್ಲಿ ಎಷ್ಟೋ ತಾಯಂದಿರು ಐವಿಎಫ್ ಮೂಲಕ ಮಗುವನ್ನು ಪಡೆದುಕೊಂಡಿದ್ದಾರೆ, ಪಡೆದುಕೊಳ್ಳುತ್ತಿದ್ದಾರೆ. ಇದೇ ಮಾದರಿಯಲ್ಲಿ ತಾರಾ ಕೂಡ ಮಗನನ್ನು ಪಡೆದುಕೊಂಡಿದ್ದಾರೆ.
ಶಿವಾರ್ಜುನ ಚಿತ್ರದಲ್ಲಿ ನಟನೆ
ತಾರಾ ಅವರ ಮಗ 6ನೇ ವಯಸ್ಸಿನಲ್ಲಿಯೇ ಅಮ್ಮನ ಬಗ್ಗೆ ಮಾತನಾಡಿದ್ದ. 'ಅಮ್ಮನೇ ನನಗೆ ಸ್ಫೂರ್ತಿ, ನಾನು ಅಮ್ಮನ ದೊಡ್ಡ ಫ್ಯಾನ್, ದೊಡ್ಡವನಾಗಿ ನಾನು ಅಮ್ಮನಂತೆ ಸ್ಟಾರ್ ಆಗ್ತಿನಿ ಎಂದು ಹೇಳೀದ್ದ. 'ಶಿವಾರ್ಜುನ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆದಿರುವ ಕೃಷ್ಣ, ತಾಯಿ ಜೊತೆ ತೆರೆಹಂಚಿಕೊಂಡಿದ್ದ. ಶಿವನಂದಿ ಪಾತ್ರಕ್ಕೆ ಬಣ್ಣಹಚ್ಚಿರುವ ಕೃಷ್ಣ, ಡಬ್ಬಿಂಗ್ ಕೂಡ ಮಾಡಿ ಸೈ ಅನಿಸಿಕೊಂಡಿದ್ದಾನೆ. ಆ ಸಂದರ್ಭದಲ್ಲಿ ಅಮ್ಮನಂತೆಯೇ ಸ್ಟಾರ್ ಆಗುವ ಆಸೆ ವ್ಯಕ್ತಪಡಿಸಿದ್ದ.
ಅಮ್ಮನೇ ನೆಚ್ಚಿನ ನಟಿ
ನಾನು ಅಮ್ಮನ ಚಿತ್ರಗಳನ್ನು ನೋಡುತ್ತಲೇ ಬರುತ್ತಿದ್ದೇನೆ. ಅವರ ಜೊತೆ ಚಿತ್ರೀಕರಣಕ್ಕೆ ಆಗಾಗ ಹೋಗುತ್ತಿರುತ್ತೇನೆ.ಅಮ್ಮನಂತೆ ನಾನು ನಟಿಸಬೇಕು ಎಂದು ಆಸೆಯಾಗುತ್ತಿತ್ತು. ಅಮ್ಮನೇ ನನ್ನ ಮೆಚ್ಚಿನ ನಟಿ, ನೆಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿರುವ ಕೃಷ್ಣ , ನಾನು ಹೀರೋ ಆಗಬೇಕು. ಧ್ರುವ ಸರ್ಜಾ ರೀತಿ ಫೈಟ್ ಮಾಡಬೇಕು ಎಂದಿದ್ದ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

