ಸಿಂಪಲ್ ಸೀರೆಯುಟ್ಟು ಹೂನಗೆ ಚೆಲ್ಲಿದ ನಿರಾಭರಣ ಸುಂದರಿ ಶ್ರುತಿ ಹರಿಹರನ್
ಮೀಟೂ ಮೂಲಕ ಭಾರಿ ಸದ್ದು ಮಾಡಿ, ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದ ಶ್ರುತಿ ಹರಿಹರನ್ ಇದೀಗ ಮತ್ತೆ ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ಆಗೋಮ್ಮೆ ಈಗೊಮ್ಮೆ ಕಾಣಿಸುತ್ತಿದ್ದಾರೆ. ಇವರ ಹೊಸ ಇನ್ಸ್ಟಾಗ್ರಾಂ ಪೋಸ್ಟ್ ಸದ್ಯ ಸದ್ದು ಮಾಡುತ್ತಿದೆ.
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮತ್ತು ಮೀಟೂ ಮೂಲಕ ಭಾರಿ ಸುದ್ದಿಯಾಗಿದ್ದ ನಟಿ ಶ್ರುತಿ ಹರಿಹರನ್ (Sruthi Hariharan) ಮತ್ತೆ ಕನ್ನಡ ಕಿರುತೆರೆಯಲ್ಲಿ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ.
ಇತ್ತೀಚೆಗಷ್ಟೇ ನಟಿ ಕೆಂಪು ಬಣ್ಣದ ಸೀರೆಯುಟ್ಟು, ಹೂನಗೆ ಚೆಲ್ಲಿದ ಫೋಟೋವೊಂದನ್ನು ಶೇರ್ ಮಾಡಿದ್ದು, ಸರಳ ಸುಂದರಿಯ ಈ ಫೋಟೋಗೆ ಅಭಿಮಾನಿಗಳು ಪ್ರೀತಿಯನ್ನು ಹರಿಸಿದ್ದಾರೆ. ಕೆಂಪು ಸೀರೆ ಜೊತೆ ಕೆಂಪು ಬ್ಲೌಸ್ ತೊಟ್ಟು, ನಿರಾಭರಣ ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಟೆಕ್ಸಾಸ್ ನ ಆಸ್ಟಿನ್ ನಲ್ಲಿರುವ ನಟಿ ಅಲ್ಲಿಂದಲೇ ಫೋಟೋ ಶೇರ್ ಮಾಡಿದ್ದಾರೆ. ಇವರು ಹೆಚ್ಚಾಗಿ ಸೀರೆ ಜೊತೆ ಹೆವಿ ಮೇಕಪ್ ನಲ್ಲಿ ಕಾಣಿಸುತ್ತಿದ್ದು, ಈ ಬಾರಿ ಮಾತ್ರ, ಬಿಂದಿ, ಕಿವಿಯೋಲೆ, ಬಳೆ, ಸರ ಯಾವುದೇ ಹಾಕದೇ ನಿರಾಭರಣ ಸುಂದರಿಯಾಗಿ ಕಾಣಿಸಿಕೊಂಡಿದ್ದು, ತಮ್ಮ ನಗುವಿನ ಮೂಲಕ ಫೋಟೋಗೆ ಆಕರ್ಷಣೆ ನೀಡಿದ್ದಾರೆ.
ಮೀಟೂ ಆರೋಪದ ಬಳಿಕ ಹೆಚ್ಚಾಗಿ ಕಾಣಿಸಿಕೊಳ್ಳದ ಶೃತಿ ಹರಿಹರನ್ ಓಣಂ ಸಮಯದಲ್ಲಿ ಬೊಂಬಾಟ್ ಭೋಜನ (Bombat Bhojana) ಕಾರ್ಯಕ್ರಮದಲ್ಲಿ ಮಿಂಚಿದ್ದರು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾ ಕಾರ್ಯಕ್ರಮಗಳಲ್ಲೂ ನಟಿ ಕಾಣಿಸಿಕೊಂಡಿದ್ದಾರೆ.
ಕೊನೆಯದಾಗಿ ಹೆಡ್ ಬುಶ್ (Headbush) ಚಿತ್ರದಲ್ಲಿ ನಟಿಸಿದ್ದ ಶ್ರುತಿ ಹರಿಹರನ್ ಇದೀಗ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಾರಾಂಶಾ, ಸ್ಟ್ರಾಬೆರ್ರಿ ಎರಡೂ ಸಿನಿಮಾಗಳ ಶೂಟಿಂಗ್ ಸಹ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕೇರಳದಲ್ಲಿ ಹುಟ್ಟಿದ ಶ್ರುತಿ ಹರಿಹರನ್, ಬೆಳೆದದ್ದೂ ವಿದ್ಯಾಭ್ಯಾಸ ಪಡೆದಿದ್ದು ಮಾತ್ರ ಕರ್ನಾಟಕದಲ್ಲಿ. ಮಲಯಾಳಂ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ, ಮಿಂಚಿದ್ದು ಕನ್ನಡ ಸಿನಿಮಾಗಳಲ್ಲಿ. ಲೂಸಿಯಾ (Lucia) ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ನಟಿ ಹಲವಾರು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ.
ಅದ್ಭುತ ನಟನೆಯಿಂದಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ಫಿಲಂ ಫೇರ್ ಅವಾರ್ಡ್ ಸೌತ್ ಪ್ರಶಸ್ತಿ, ಸೈಮಾ ಪ್ರಶಸ್ತಿ ಮತ್ತು ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಕೂಡ ಪಡೆದಿದ್ದಾರೆ.