ಅಪ್ರತಿಮ ಪ್ರತಿಭೆ, ಹಿರಿಯ ಕಲಾವಿದೆ ಗಿರಿಜಾ ಲೋಕೇಶ್‌ರಿಗೆ ಗೌರವ ಡಾಕ್ಟರೇಟ್!
ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರಿಗೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ.

ರಂಗಭೂಮಿ, ಸಿನಿಮಾ, ನೃತ್ಯ, ಕಿರುತೆರೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಪ್ರತಿಮ ಪ್ರತಿಭೆ, ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರಿಗೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ.
ಜ.18ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ವಿವಿ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಗಿರಿಜಾ ಲೋಕೇಶ್ ಕಳೆದ ಐದು ದಶಕಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.
ನಾಯಕ ನಟಿಯಿಂದ ಹಿಡಿದು ಪೋಷಕ ನಟಿಯವರೆಗೆ ವಿವಿಧ ರೀತಿಯ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಖ್ಯಾತಿ ಗಳಿಸಿದ್ದು ಮಾತ್ರವಲ್ಲದೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ನಟನೆಯ ಜೊತೆಗೆ ಮೌನವಾಗಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವುದು ಇವರ ಹೆಚ್ಚುಗಾರಿಕೆ. ಚಿತ್ರರಂಗಕ್ಕೆ, ರಂಗಭೂಮಿಗೆ ದುಡಿದ ಹಿರಿಯ ಕಲಾವಿದರನ್ನು, ತಂತ್ರಜ್ಞರನ್ನು ತಮ್ಮ ದುಡಿಮೆಯ ದುಡ್ಡಿನಲ್ಲಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.
ಬಹಳಷ್ಟು ಅಸಹಾಯಕ ಹಿರಿಯರಿಗೆ ಆರ್ಥಿಕ ನೆರವು ಒದಗಿಸಿ, ಮನಃಶಾಂತಿ ಒದಗಿಸಿ ಅದೆಷ್ಟೋ ಮನೆಯ ಬೆಳಕಾಗಿದ್ದಾರೆ. ಮಾದರಿಯಾಗಿದ್ದಾರೆ. ಇಂಥಾ ಗಿರಿಜಾ ಲೋಕೇಶ್ ಅವರಿಗೆ ಇದೀಗ ಗೌರವ ಡಾಕ್ಟರೇಟ್ ಗೌರವ ಸಂದಿದೆ.