ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗ್ಡೆ; ದಂಡುಪಾಳ್ಯ ಗ್ಯಾಂಗ್ ಕೊಲೆ ಮಾಡಿಲ್ಲ?
ಅಗ್ನಿ ಶ್ರೀಧರ್ ಕತೆ, ಸಂಭಾಷಣೆ ಬರೆದಿರುವ, ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ‘ಕ್ರೀಂ’ ಚಿತ್ರದಲ್ಲಿ ಕ್ರೈಮ್ ಜಗತ್ತಿನ ಮತ್ತೊಂದು ಮುಖದ ಅನಾವರಣ ಆಗಲಿದೆಯಂತೆ.

‘ದಂಡುಪಾಳ್ಯದವರು ಕಳ್ಳರು. ಹಣ, ಒಡವೆ ಲೂಟಿ ಮಾಡುತ್ತಿದ್ದವರು. ಅವರು ಯಾವುದೇ ಕೊಲೆಗಳನ್ನು ಮಾಡಿಲ್ಲ. ಆದರೆ ದಂಡುಪಾಳ್ಯದ ಹೆಸರಿನಲ್ಲಿ ಸರಣಿ ಕೊಲೆಗಳನ್ನು ಮಾಡಿದ್ದು ಯಾರು, ಅದರಲ್ಲೂ ಒಂಟಿ ಹೆಂಗಸರನ್ನೇ ಗುರಿ ಮಾಡಿ ಕೊಂದಿರುವುದರ ಹಿಂದಿನ ಕತೆ ಏನು?’ ಎಂದು ಕೇಳಿದರು ಅಗ್ನಿ ಶ್ರೀಧರ್.
ಈ ಪ್ರಶ್ನೆಗಳಿಗೆ ಉತ್ತರ ಎಂಬಂತೆ ‘ಕ್ರೀಂ’ ಚಿತ್ರವನ್ನು ರೂಪಿಸಲಾಗಿದೆ ಎಂದು ವಾಕ್ಯ ಕೊನೆಗೊಳಿಸಿದರು. ಅಗ್ನಿ ಶ್ರೀಧರ್ ಕತೆ, ಸಂಭಾಷಣೆ ಬರೆದಿರುವ, ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ‘ಕ್ರೀಂ’ ಚಿತ್ರದಲ್ಲಿ ಕ್ರೈಮ್ ಜಗತ್ತಿನ ಮತ್ತೊಂದು ಮುಖದ ಅನಾವರಣ ಆಗಲಿದೆಯಂತೆ.
ದಂಡುಪಾಳ್ಯ ಗ್ಯಾಂಗ್ ಹೆಸರಿನಲ್ಲಿ ನಡೆದ ಸರಣಿ ಕೊಲೆಗಳ ಹಿಂದಿನ ಕೈಗಳ ಚರಿತ್ರೆಯನ್ನು ಈ ಚಿತ್ರದ ಮೂಲಕ ತೆರೆದಿಡಲಿದ್ದಾರಂತೆ. ‘ನಾನು ತುಂಬಾ ಹಿಂದೆ ದಂಡುಪಾಳ್ಯದ ಗ್ಯಾಂಗ್‌ನ ಹಿಂದಿನ ಕತೆ ಸಿನಿಮಾ ಮಾಡಬೇಕೆಂದುಕೊಂಡಿದ್ದೆ'
'ಆಗ ದೊಡ್ಡ ಅಧಿಕಾರಿಗಳು ಸಿನಿಮಾ ಮಾಡದಂತೆ ನನ್ನ ತಡೆದರು. ಈ ನಡುವೆ ದಂಡುಪಾಳ್ಯದ ಹೆಸರಿನಲ್ಲೇ ಸಿನಿಮಾ ಬಂತು. ಕಪೋಲಕಲ್ಪಿತ ಕತೆಗಳ ಮೂಲಕ ಕಳ್ಳರ ಸಮುದಾಯವನ್ನು ಹೇಗೆ ಕೊಲೆಗಡುಗರನ್ನಾಗಿಸಿದ್ದಾರೆ ಎನ್ನುವ ಸಿಟ್ಟು ಬಂತು.'
ಹೀಗಾಗಿ ‘ಕ್ರೀಂ’ ಹೆಸರಿನಲ್ಲಿ ಆ ಕತೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರದಲ್ಲಿ ಸಂಯುಕ್ತಾ ಬೀದಿ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಾರೆ. ಯಾವ ನಟಿಯೂ ಮಾಡದ ಸಾಹಸವನ್ನು ಸಂಯುಕ್ತಾ ಈ ಚಿತ್ರದ ಮೂಲಕ ಮಾಡಿದ್ದಾರೆ.
ಈ ಚಿತ್ರದ ನಂತರ ಸಾಕಷ್ಟುವಿವಾದಗಳು ಹುಟ್ಟಿಕೊಳ್ಳುತ್ತವೆ. ಆ ಎಲ್ಲವನ್ನೂ ಎದುರಿಸಕ್ಕೆ ನಾನು ರೆಡಿ ಇದ್ದೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಅಗ್ನಿ ಶ್ರೀಧರ್ ಹೇಳಿದರು.
ದೇವೇಂದ್ರ ಡಿ ಕೆ ಚಿತ್ರದ ನಿರ್ಮಾಪಕ. ಅಭಿಷೇಕ್ ಬಸಂತ್ ನಿರ್ದೇಶಕ. ರೋಷನ್ ಶ್ರೀಧರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದುವರೆಗೂ ಯಾರೂ ಹೇಳದ ವಿಚಾರಗಳನ್ನು ಈ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಅಭಿಷೇಕ್ ಬಸಂತ್ ಹೇಳಿದರು.
‘ಶೂಟಿಂಗ್ ಸಮಯದಲ್ಲಿ ಕಾಲು, ತಲೆಗೆ ಪೆಟ್ಟು ಮಾಡಿಕೊಂಡು ಹಾಸಿಗೆ ಹಿಡಿದೆ. ಆದರೂ ಈ ಚಿತ್ರದಲ್ಲಿ ತುಂಬಾ ಉತ್ಸಾಹದಿಂದ ನಟಿಸುವುದಕ್ಕೆ ಕಾರಣ ಈ ಚಿತ್ರತಂಡ ನನ್ನ ಮನೆಮಗಳಂತೆ ನೋಡಿಕೊಂಡ ರೀತಿ’ ಎಂಬುದು ಸಂಯುಕ್ತಾ ಮಾತು. ದೇವೇಂದ್ರ ಡಿ ಕೆ, ‘ಅಗ್ನಿ ಶ್ರೀಧರ್ ಜತೆಗೆ ಇದ್ದರೆ ಎಂಥ ಸಿನಿಮಾ ಮಾಡಕ್ಕೂ ಧೈರ್ಯ ಬರುತ್ತದೆ’ ಎಂದರು.