ಸಿನಿಮಾಗಿಂತ ನಾವ್ಯಾರೂ ದೊಡ್ಡವರಾಗಬಾರದು: ರಕ್ಷಿತ್ ಶೆಟ್ಟಿ
ಅದ್ಧೂರಿಯಾಗಿ ನಡೆಯಿತ್ತು ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ಲಾಂಚ್. ಕಾರ್ಯಕ್ರಮದಲ್ಲಿ ರಕ್ಷಿತ್ ಕೊಟ್ಟ ಹೇಳಿಕೆ ವೈರಲ್....

ರಕ್ಷಿತ್ ಶೆಟ್ಟಿ ನಟನೆ, ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಸೈಡ್ ಎ ಭಾಗದ ಟ್ರೇಲರ್ ಬಿಡುಗಡೆ ಆಗಿದೆ.
ಈಗಾಗಲೇ ಇದರ ವ್ಯೂಸ್ 20 ಲಕ್ಷ ದಾಟಿದೆ. ಗಾಢವಾದ ಪ್ರೇಮ ಕತೆಯನ್ನು ಹೇಳುವ ಮನು ಮತ್ತು ಪ್ರಿಯಾ ಪಾತ್ರಗಳ ಸುತ್ತ ಇಡೀ ಟ್ರೇಲರ್ ಮೂಡಿ ಬಂದಿದೆ. ಸೈಡ್ ಎ ಸೆ.1ರಂದು ಬಿಡುಗಡೆಯಾಗುತ್ತಿದೆ.
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ, ‘ನನಗೆ ಈ ಸಿನಿಮಾ ತುಂಬಾ ವಿಶೇಷ. ಯಾಕೆಂದರೆ ಒಂದು ಟೈಮ್‌ನಲ್ಲಿ ಚಿತ್ರರಂಗಕ್ಕೆ ಬಂದಾಗ ಏನೂ ಇರಲಿಲ್ಲ.
ಕೆಲ ವರ್ಷಗಳ ನಂತರ ಶುರು ಮಾಡಿದ ಪರಂವಃ ಸ್ಟುಡಿಯೋ ಮೂಲಕ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಿರ್ಮಿಸಿದ್ದೇವೆ. ಇದು ನನಗೆ ಖುಷಿ ಕೊಟ್ಟ ಗಳಿಗೆ.
ಮನು ಮತ್ತು ಪ್ರಿಯಾ ಪಾತ್ರಗಳು ಪ್ರತಿಯೊಬ್ಬರನ್ನು ಕಾಡುತ್ತವೆ. ನನಗೂ ಕಾಡಿದ ಕತೆ ಇದು. ನಾವು ಯಾರೂ ಸಿನಿಮಾಗಿಂತ ದೊಡ್ಡವರಲ್ಲ. ಸಿನಿಮಾಗಿಂತ ದೊಡ್ಡವರಾದರೆ ನಾವು ಇದ್ದಲ್ಲೇ ಇರುತ್ತೇವೆ.
ಸಿನಿಮಾನೇ ದೊಡ್ಡದು ಅಂದುಕೊಂಡರೆ ನಮ್ಮನ್ನ ಸಿನಿಮಾ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುತ್ತದೆ. ಈ ಚಿತ್ರಕ್ಕೆ ಅಂಥ ಶಕ್ತಿ ಇದೆ. ಇಲ್ಲಿಂದ ನಟನೆ ಸ್ವಲ್ಪ ಕಡಿಮೆ ಮಾಡುತ್ತೇನೆ. ನಿರ್ದೇಶನಕ್ಕೆ ಮತ್ತೆ ವಾಪಸ್ಸು ಹೋಗುತ್ತೇನೆ.
ಆದರೆ, ಹೇಮಂತ್ ಕರೆದು ಒಂದು ಪಾತ್ರ ಇದೆ ಮಾಡು ಅಂದರೆ ಬಂದು ಮಾಡುತ್ತೇನೆ. ಹೇಮಂತ್ ರಾವ್ ಜತೆಗೆ 100 ಸಿನಿಮಾ ಮಾಡಕ್ಕೂ ರೆಡಿ’ ಎಂದರು.
ನಿರ್ದೇಶಕ ಹೇಮಂತ್ ರಾವ್, ‘ನಾನು ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಎಂಜಿ ರಸ್ತೆ, ಶಂಕರ್‌ನಾಗ್ ಚಿತ್ರಮಂದಿರದ ಸುತ್ತ ಓಡಾಡಿಕೊಂಡು ಬರೆದುಕೊಂಡಿದ್ದ ಕತೆ ಇದು. ಈಗ ಸಿನಿಮಾ ಆಗಿದೆ. ಪ್ರೀತಿಯ ಆಳವನ್ನು ಹೇಳಕ್ಕೆ ಆಗಲ್ಲ.
ಅದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಎನ್ನುವ ಟೈಟಲ್ ಇಟ್ಟಿದ್ದೇನೆ’ ಎಂದರು. ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಚಿತ್ರದ ಟೈಟಲ್ ಫೋಸ್ಟರ್ ನೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಮೆಸೇಜ್ ಮಾಡಿ ಚಿತ್ರದ ಆಡಿಷನ್‌ಗೆ ಹಾಜರಾಗಿ ನಾಯಕಿ ಪಾತ್ರಕ್ಕೆ ಆಯ್ಕೆ ಆಗಿದ್ದನ್ನು ಹೇಳಿಕೊಂಡರು
ಚೈತ್ರಾ ಜೆ ಆಚಾರ್ ಅವರ ಪಾತ್ರ ಸೈಡ್ ಬಿ ಭಾಗದಲ್ಲಿ ಬರುತ್ತದೆ. ಚಿತ್ರವನ್ನು ವಿತರಣೆ ಮಾಡುತ್ತಿರುವ ಕೆವಿಎನ್ ಸಂಸ್ಥೆಯ ಸುಪ್ರಿತ್, ಸಂಗೀತ ನಿರ್ದೇಶಕ ಚರಣ್ ರಾಜ್, ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.