- Home
- Entertainment
- Sandalwood
- ಅಪ್ಪು ಬೆಳ್ಳಗಾಗ್ಲಿ ಎಂದು ಇದ್ದಬಿದ್ದ ಕ್ರೀಮ್ ಎಲ್ಲಾ ಹಚ್ಚುತ್ತಿದ್ಲು ಅವಳು: ಪುನೀತ್ ರಾಜ್ರ ಆ ದಿನಗಳ ಮೆಲುಕು
ಅಪ್ಪು ಬೆಳ್ಳಗಾಗ್ಲಿ ಎಂದು ಇದ್ದಬಿದ್ದ ಕ್ರೀಮ್ ಎಲ್ಲಾ ಹಚ್ಚುತ್ತಿದ್ಲು ಅವಳು: ಪುನೀತ್ ರಾಜ್ರ ಆ ದಿನಗಳ ಮೆಲುಕು
ಪುನೀತ್ ರಾಜ್‌ಕುಮಾರ್ ಅವರ ಕಪ್ಪು ಬಣ್ಣದ ಕಾರಣಕ್ಕೆ ಮನೆಯಲ್ಲಿ ಬೇಸರಗೊಂಡಿದ್ದ ಘಟನೆಯನ್ನು ಪಾರ್ವತಮ್ಮ ರಾಜ್‌ಕುಮಾರ್ ಹಳೆಯ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಕ್ಕ ಪೂರ್ಣಿಮಾ ಕ್ರೀಮ್ ಹಚ್ಚುತ್ತಿದ್ದ ಬಗ್ಗೆ ಹಾಗೂ ಡಾ. ರಾಜ್‌ಕುಮಾರ್ 'ಕಪ್ಪು ಕಸ್ತೂರಿ' ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

ನಾಲ್ಕು ವರ್ಷದ ಅಗಲಿಕೆ
ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ಎಲ್ಲರನ್ನೂ ಅಗಲಿ ನಾಲ್ಕು ವರ್ಷಗಳೇ ಗತಿಸಿದ್ದರೂ, ಇಂದಿಗೂ ಅವರ ನೆನಪು ಸದಾ ಹಸಿರು. ಅವರ ಬಣ್ಣ ಕಪ್ಪು ಎನ್ನುವ ಕಾರಣಕ್ಕೆ ಅವರು ಹುಟ್ಟಿದಾಗಲೇ ಮನೆಯಲ್ಲಿ ಎಲ್ಲರೂ ಬೇಸರಿಸಿಕೊಂಡಿದ್ದ ಬಗ್ಗೆ ಹಾಗೂ ಅಪ್ಪು ಬೆಳ್ಳಗಾಗಿ ಕಾಣಲಿ ಎಂದು ಹಿರಿಯ ಅಕ್ಕ ಪೂರ್ಣಿಮಾ ಇರೋ ಬರೋ ಕ್ರೀಮ್ ಎಲ್ಲಾ ತಂದು ಹಚ್ತಿದ್ದ ಬಗ್ಗೆ ಪಾರ್ವತಮ್ಮ ರಾಜ್‌ಕುಮಾರ್ (Parvatamma Rajkumar) ಹೇಳಿರೋ ಹಳೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಪಾರ್ವತಮ್ಮನವರ ಹಳೆಯ ವಿಡಿಯೋ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಪಾರ್ವತಮ್ಮ ಮಾತನಾಡಿದ್ದರು. ಅವನು ಹುಟ್ಟಿದ ತಕ್ಷಣ, ಅವನ ಬಣ್ಣ ನೋಡಿ ದೊಡ್ಡ ಮಗಳು ಪೂರ್ಣಿಮಾ ನೀನು ಕಪ್ಪು ತಮ್ಮನನ್ನು ಹುಟ್ಟಿಸಿಬಿಟ್ಟೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದಳು. ಅವನು ತುಂಬಾ ಕಪ್ಪು ಎಂದು ನನ್ನನ್ನೇ ಬೈಯುತ್ತಿದ್ದಳು ಎಂದು ಪಾರ್ವತಮ್ಮ ಹೇಳಿದ್ದಾರೆ.
ಇರೋ ಬರೋ ಕ್ರೀಮ್
ಆದರೆ ರಾಜ್‌ಕುಮಾರ್ ಮಾತ್ರ, ಆಕೆಯನ್ನು ಸಮಾಧಾನ ಮಾಡುತ್ತಿದ್ದರು. ನೋಡು ‘ರಾಮ ಕೃಷ್ಣ ಎಲ್ಲ ಕಪ್ಪು. ಅದಕ್ಕೆ ಅಪ್ಪುನೂ ಕಪ್ಪು, ಇವು ದೇವರ ಸ್ವರೂಪ ಎಂದು ಅವಳಿ ಸಮಾಧಾನ ಮಾಡುತ್ತಿದ್ದರು. ಆತ ದೇವರ ರೂಪ. ಅದಕ್ಕಾಗಿಯೇ ಆತನಿಗೆ ದೇವರ ಬಣ್ಣ ಬಂದಿದೆ ಎಂದು ಹೇಳಿದಾಗ ಪೂರ್ಣಿಮಾ ಸ್ವಲ್ಪ ಸಮಾಧಾನಗೊಳ್ಳುತ್ತಿದ್ದಳು ಎಂದಿದ್ದಾರೆ. ಆದರೂ ಅಪ್ಪು ಬಿಳಿಯಾಗಿ ಕಾಣಲಿ ಎಂದು ಇರೋಬರೋ ಕ್ರೀಮ್ ತಂದು ಹಚ್ಚುತ್ತಿದ್ದಳು. ಇದರಿಂದ ಅಕ್ಕನನ್ನು ಕಂಡರೆ ಭಯಬಿದ್ದು ಓಡಿ ಹೋಗ್ತಿದ್ದ ಎಂದು ಆ ದಿನಗಳನ್ನು ಪಾರ್ವತಮ್ಮ ನೆನಪಿಸಿಕೊಂಡಿದ್ದಾರೆ.
ದೇವರ ಬಣ್ಣ
ಇದೇ ವೇಳೆ ಡಾ.ರಾಜ್‌ಕುಮಾರ್ ಅವರು, ಅಪ್ಪುವಿನ ಬಣ್ಣದ ಬಗ್ಗೆ ಮಾತನಾಡುವವರಿಗೆ ತಮಾಷೆಯಾಗಿಯೇ ತಿರುಗೇಟು ಕೊಡುತ್ತಿದ್ದ ಬಗೆಯನ್ನೂ ಈ ವಿಡಿಯೋದಲ್ಲಿ ಪಾರ್ವತಮ್ಮ ಹೇಳಿದ್ದಾರೆ. ‘ಕಪ್ಪು ಕಸ್ತೂರಿ ಕಣ್ರೋ, ಕೆಂಪು ಕಿಸ್ಬಾಯಿ. ನನಗಂತೂ ನನ್ನ ಮಗನ ಬಣ್ಣ ತುಂಬಾ ಇಷ್ಟ ಆಯ್ತು’ ಎಂದು ಅವರಪ್ಪ ಹೇಳುತ್ತಿದ್ದರು ಎಂದು ಪಾರ್ವತಮ್ಮ ನೆನಪಿಸಿಕೊಂಡಿದ್ದಾರೆ.
ಹೆಸರು ಬದಲು
ಅಂದಹಾಗೆ, ಅಪ್ಪು ಅಂತ ಮೊದಲು ಹೆಸರಿಟ್ಟಿದ್ದು ಡಾ.ರಾಜ್ ಕುಮಾರ್ ಅವರ ತಾಯಿ. ಆರಂಭದಲ್ಲಿ ಲೋಹಿತ್ ಎಂದು ನಾಮಕರಣ ಮಾಡಲಾಗಿತ್ತು. ಆದರೆ, ಲೋಹಿತ್ ಎಂದರೆ ಅಲ್ಪಾಯು ಎನ್ನುವ ಅರ್ಥ ಕೊಡುತ್ತದೆ ಎನ್ನುವ ಕಾರಣಕ್ಕೆ, ಪುನೀತ್ ಎಂದು ಬದಲಾಯಿಸಲಾಗಿತ್ತು. ಆದರೂ ಪುನೀತ್ ಅವರು ಅಲ್ಪಾಯುವಿನಲ್ಲಿಯೇ ತೀರಿಕೊಂಡದ್ದು ಮಾತ್ರ ಬಹುದೊಡ್ಡ ದುರಂತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

