2022 ರೌಂಡಪ್: ಮನಗೆದ್ದ 7 ಕನ್ನಡ ಸಿನಿಮಾಗಳು
ವಿಭಿನ್ನ ಕಥೆ ಮೂಲಕ ಕನ್ನಡ ಸಿನಿ ರಸಿಕರ ಗಮನ ಸೆಳೆದ 7 ಕನ್ನಡ ಸಿನಿಮಾಗಳಿದು. ಅಲ್ಲದೆ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ....

ಗಂಧದ ಗುಡಿ: ಗಂಧದ ಗುಡಿ ಅಂಥ ಸಾಕ್ಷ್ಯಚಿತ್ರಗಳಿಗಿಂತ ಭಿನ್ನವಾದದ್ದು. ಇಲ್ಲಿ ಪುನೀತ್ ನಿರೂಪಕರಲ್ಲ, ಪಯಣಿಗರು. ಅವರು ಕಾಡನ್ನು ಅರಿಯುತ್ತಾ ಹೋಗುವುದೇ ಗಂಧದ ಗುಡಿಯ ಜೀವಾಳ. ಪ್ರಶ್ನೋತ್ತರಗಳ ಮೂಲಕ ಪುನೀತ್ ಮತ್ತು ಅಮೋಘವರ್ಷ ತಮಗೆ ಗೊತ್ತಿರುವುದನ್ನೆಲ್ಲ ಹೇಳಿಕೊಳ್ಳುತ್ತಾರೆ. ಗೊತ್ತಿರದೇ ಇರುವುದನ್ನು ತಿಳಿದುಕೊಳ್ಳುತ್ತಾರೆ. ಹಾಗೆ ಮಾಡುವ ಮೂಲಕ ನಮಗೆ ಅನೇಕ ಸಂಗತಿಗಳನ್ನು ಗೊತ್ತು ಮಾಡಿಸುತ್ತಾರೆ.ಇಲ್ಲಿ ಗಾಜನೂರು, ರಾಜ್‌ಕುಮಾರ್ ಧ್ಯಾನಸ್ಥರಾಗುತ್ತಿದ್ದ ಆಲದ ಮರ, ಅಪ್ಪು ಹೇಳುವ ಬಾಲ್ಯದ ಕತೆಗಳು- ಎಲ್ಲವೂ ಇದೆ. ಎಲ್ಲಿ ಬೇಕೋ ಅಲ್ಲಿ ಸೊಗಸಾದ ಹಾಡುಗಳಿವೆ. ನಾವಿದ್ದಲ್ಲೇ ಊರು, ಆಕಾಶಾನೇ ಸೂರು ಅನ್ನುವ ಅರ್ಥಪೂರ್ಣ ಸಾಲುಗಳನ್ನು ಕಿರಣ್ ಕಾವೇರಪ್ಪ ಬರೆದಿದ್ದಾರೆ.
ಗುರು ಶಿಷ್ಯರು: ಈ ಹಿಂದೆ ‘ಜಂಟಲ್‌ಮನ್’ ಚಿತ್ರದ ಮೂಲಕ ಹೊಸದೊಂದು ಕತೆಯನ್ನು ಹೊಸ ರೀತಿಯಲ್ಲೇ ತೆರೆ ಮೇಲೆ ಪ್ರಸ್ತುತಿ ಪಡಿಸಿದ್ದ ಜಡೇಶ್‌ಕುಮಾರ್ ಹಂಪಿ ‘ಗುರು ಶಿಷ್ಯರು’ ಚಿತ್ರದಿಂದ ಸಿನಿಮಾ ಕಟ್ಟುವ ತಮ್ಮ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ. ಒಂದು ಸರಳ ಕತೆಗೆ ಮನರಂಜನೆ ಮೆರುಗು, ನೈಜತೆಯ ತಳಹದಿ, ಹಳ್ಳಿಗಾಡಿನ ಸೊಗಸು, ನೇಟಿವಿಟಿಯ ಅಂದದ ಜತೆಗೆ ಸ್ಫೂರ್ತಿ ಮತ್ತು ಕನಸುಗಳನ್ನು ತುಂಬಿದರೆ ಅದ್ಭುತ ಸಿನಿಮಾ ಆಗುತ್ತದೆ ಎಂಬುದಕ್ಕೆ ‘ಗುರು ಶಿಷ್ಯರು’ ಚಿತ್ರ ಉದಾಹರಣೆ. ಶರಣ್, ದತ್ತಣ್ಣ, ಸುರೇಶ್ ಹೆಬ್ಳಿಕರ್, ನಿಶ್ವಿಕಾ ನಾಯ್ಡು, ಅಪೂರ್ವ ಕಾಸರವಳ್ಳಿ, ಮಹೇಶ್ ಅಭಿನಯಿಸಿದ್ದಾರೆ.
Kambali Hula ಕಂಬ್ಳಿಹುಳ: ಹುಡುಗಿಯ ಪ್ರೀತಿಗಾಗಿ ಹಂಬಲಿಸುವ ಹುಡುಗ, ಹೆತ್ತ ತಾಯಿಯನ್ನೇ ದ್ವೇಷಿಸುವ ಮಗ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೂ ಬಾಲ್ಯದ ಸ್ನೇಹದ ಅಕೌಟ್‌ನಲ್ಲಿ ಬಹು ದೊಡ್ಡ ಪ್ರೀತಿಯ ಗಂಟು ಕಟ್ಟಿಕೊಂಡಿರುವ ಆಟೋ ಡ್ರೈವರ್, ಒಂದು ಸಂಬಂಧಕ್ಕಾಗಿ ಹಾತೊರೆಯುವ 40ರ ವಯಸ್ಸಿನ ವ್ಯಕ್ತಿ... ಇಂಥ ಪ್ರಬುದ್ಧ ತಿರುವುಗಳನ್ನು ಅಷ್ಟೇ ಆಪ್ತವಾಗಿ ಮತ್ತು ತಿಳಿಯಾಗಿ ‘ಕಂಬ್ಳಿಹುಳ’ ಕಟ್ಟಿಕೊಡುತ್ತ ಹೋಗುತ್ತದೆ. ಅಂಜನ್ ನಾಗೇಂದ್ರ, ಅಶ್ವಿತಾ ಹೆಗಡೆ, ರೋಹಿತ್ ಕುಮಾರ್ ಅಭಿನಯಿಸಿದ್ದಾರೆ.
ವಿಕ್ರಾಂತ್ ರೋಣ: ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ದಾರಿಯಲ್ಲಿ ಹೊಸದೊಂದು ಲೋಕವನ್ನು ಸೃಷ್ಟಿಸಿ, ಆ ಲೋಕದೊಳಗೆ ಪ್ರೇಕ್ಷಕ ಕಳೆದು ಹೋಗುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ ‘ವಿಕ್ರಾಂತ್ ರೋಣ’ ಯಶಸ್ವಿಯಾಗಿದೆ. ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಮಧುಸೂದನ್, ರವಿಶಂಕರ್, ಜಾಕ್ವೇಲಿನ್‌ಫರ್ನಾಡಿಸ್, ಮಿಲನ ನಾಗರಾಜ್ ಮುಂತಾದವರು ಅಭಿನಯಿಸಿದ್ದಾರೆ.
ಗಾಳಿಪಟ 2: ಯೌವನದ ಪ್ರೇಮಕ್ಕೂ ನಡುವಯಸ್ಸಿನ ಪ್ರೇಮಕ್ಕೂ ಇರುವ ವ್ಯತ್ಯಾಸ ಗೊತ್ತಾಗಬೇಕಿದ್ದರೆ ಗಾಳಿಪಟ 2 ಚಿತ್ರ ನೋಡಿ ಎಂದು ಒಂದೇ ಮಾತಲ್ಲಿ ಹೇಳಿಬಿಡಬಹುದು. ಅಷ್ಟೇ ಹೇಳಿದರೆ ಅದು ಆಸಕ್ತ ಪ್ರೇಕ್ಷಕರಿಗೂ ನಿರ್ದೇಶಕರಿಗೂ ಮಾಡುವ ಅನ್ಯಾಯ ಎಂಬ ಕಾರಣಕ್ಕೆ ಕೊಂಚ ವಿವರಿಸಬೇಕು.ಗಾಳಿಪಟ 2 ಕತೆಯ ಕೇಂದ್ರಬಿಂದು ಅನಂತನಾಗ್ ನಟಿಸಿರುವ ಕನ್ನಡ ಮೇಷ್ಟರ ಪಾತ್ರ. ಯಥಾಪ್ರಕಾರ ಭಟ್ಟರು ಆ ಪಾತ್ರವನ್ನು ಕ್ಯಾರಿಕೇಚರ್ ಮಾಡಲು ಯತ್ನಿಸಿದ್ದರೂ ಅನಂತ್‌ನಾಗ್ ತಮ್ಮ ಪ್ರತಿಭೆಯ ಬಲದಿಂದ ಕನ್ನಡ ಮೇಷ್ಟರನ್ನು ಚಿರಾಯುವನ್ನಾಗಿಸುತ್ತಾರೆ. ಅನಂತನಾಗ್, ಗಣೇಶ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಪ್ರಕಾಶ್ ತುಮಿನಾಡು ಅಭಿನಯಿಸಿದ್ದಾರೆ.
ಓಲ್ಡ್ ಮಾಂಕ್: ಹಾಸ್ಯ ಚಿತ್ರಗಳಿಗೆ ತೀರಾ ಲಾಜಿಕ್ ಬೇಕಿರಲ್ಲ ಎನ್ನುವ ನಂಬಿಕೆ ಹಲವು ಚಿತ್ರಗಳದ್ದು. ಅದೇ ನಂಬಿಕೆಯಲ್ಲಿ ಬಂದಿರುವ ಸಿನಿಮಾ ‘ಓಲ್‌ಡ್ಮಾಂಕ್’. ಹೀಗಾಗಿ ಈ ಚಿತ್ರ ನೋಡುವಾಗ ಲಾಜಿಕ್ ಹುಡುಕದೆ ಹೋದರೆ ಮನರಂಜನೆ ಕೊಡುತ್ತದೆ. ನಗುವಿಗೆ ಕೊರತೆ ಮಾಡಿಲ್ಲ ಎಂಬುದು ಶ್ರೀನಿ ನಿರ್ದೇಶನ ಮತ್ತು ನಟನೆಯ ಹೆಚ್ಚುಗಾರಿಕೆ. ಶ್ರೀನಿ, ಅದಿತಿ ಪ್ರಭುದೇವ, ಎಸ್ ನಾರಾಯಣ್, ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್, ಸುಜಯ್ ಶಾಸ್ತ್ರಿ ಅಭಿನಯಿಸಿದ್ದಾರೆ.
ಲವ್ ಮಾಕ್ಟೇಲ್ 2: ಇಬ್ಬರ ನಡುವೆ ಒಮ್ಮೆ ಪ್ರೀತಿ ಹುಟ್ಟಿತು ಅಂದರೆ ಮುಗೀತು, ಮತ್ತೆ ಅದರಿಂದ ಬಿಡುಗಡೆ ಇಲ್ಲ. ಪ್ರೀತಿಸಿದವರು ಜೊತೆಗಿರುತ್ತಾರಾ, ಇಲ್ಲವಾ ಅನ್ನೋದೆಲ್ಲ ಇಲ್ಲಿ ಮ್ಯಾಟರ್ ಆಗೋದಿಲ್ಲ. ಪ್ರೀತಿಯೊಂದೇ ಶಾಶ್ವತ. ಇಂಥದ್ದೊಂದು ಸಬ್ಜೆಕ್‌ಟ್ ಇಟ್ಟುಕೊಂಡು ರೊಮ್ಯಾಂಟಿಕ್ ಆಗಿ ಲವ್ ಮಾಕ್‌ಟೇಲ್ 2 ಚಿತ್ರ ಹೆಣೆದಿದ್ದಾರೆ ಡಾರ್ಲಿಂಗ್ ಕೃಷ್ಣ. ಅವರು ಕತೆಯನ್ನು ಟ್ರೀಟ್ ಮಾಡುವ ಬಗೆ, ಪ್ರೀತಿಯ ಜರ್ನಿಯನ್ನು ಕೊಂಡೊಯ್ಯುವ ರೀತಿಯಲ್ಲೊಂದು ಜೋಶ್ ಇದೆ, ಭಾವನಾತ್ಮಕತೆ ಇದೆ. ಅದು ಚಿತ್ರವನ್ನು ಆಪ್ತವಾಗಿಸುತ್ತದೆ.