- Home
- Entertainment
- Sandalwood
- ನಟ ಪ್ರಥಮ್ ಮುಖಕ್ಕೆ ಮಸಿ ಬಳಿದ ಹೋರಾಟಗಾರರು; ಪೊಲೀಸರ ಮುಂದೆ ನಡೆದೇ ಹೋಯ್ತು ಹೈಡ್ರಾಮಾ!
ನಟ ಪ್ರಥಮ್ ಮುಖಕ್ಕೆ ಮಸಿ ಬಳಿದ ಹೋರಾಟಗಾರರು; ಪೊಲೀಸರ ಮುಂದೆ ನಡೆದೇ ಹೋಯ್ತು ಹೈಡ್ರಾಮಾ!
ನಟ ಪ್ರಥಮ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನಾಕಾರರು ನಟನ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ಘಟನೆಯು ಪೊಲೀಸ್ ಠಾಣೆಯ ಮುಂದೆಯೇ ನಡೆದಿದ್ದು, ವೈರಲ್ ಆಗಿದೆ. ಪ್ರತಿಭಟನಾಕಾರರು ಪ್ರಥಮ್ ಬಂಧನಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ (ಜು.31): ನಟ ದರ್ಶನ್ ಅಭಿಮಾನಿಗಳು ಹಾಗೂ ಆತನ ಸಹಚರರು ಜೈ ಡಿ ಬಾಸ್ ಎಂದು ಕೂಗುತ್ತಾ ತನಗೆ ಚಾಕು ಚುಚ್ಚಲು ಬಂದಿದ್ದರು ಎಂದು ಆರೋಪಿಸಿ ದೂರು ಕೊಟ್ಟ ಬಗ್ಗೆ ಹೇಳಿಕೆ ದಾಖಲಿಸಲು ಹೋಗಿದ್ದ ನಟ ಪ್ರಥಮ್ ಮುಖಕ್ಕೆ ಹೋರಾಟಗಾರರು ಮಸಿ ಬಳೆಸಿದ್ದಾರೆ. ಪೊಲೀಸ್ ಠಾಣೆ ಮುಂದೆಯೇ, ಹಲವು ಪೊಲೀಸರ ಎದುರಿನಲ್ಲಿಯೇ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಇಂದು ಸಂಜೆ ನಾಟಕೀಯ ಘಟನೆಗಳು ನಡೆದಿವೆ. ಅಂಬೇಡ್ಕರ್ ಸೇನೆ ಸದಸ್ಯರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ಮತ್ತು ನೂಕುನುಗ್ಗಲು ನಡೆಯಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ನಟ ಪ್ರಥಮ್ ನೀಡಿದ ಹೇಳಿಕೆಗೆ ಆಕ್ರೋಶಗೊಂಡ ಅಂಬೇಡ್ಕರ್ ಸೇನೆ ಸದಸ್ಯರು, ಗುರುವಾರ ಸಂಜೆ ಪೊಲೀಸ್ ಠಾಣೆಯ ಮುಂದೆ ಬಂದು ಪ್ರತಿಭಟನೆ ನಡೆಸಿದರು.
ಅವಮಾನಕಾರಿ ಹೇಳಿಕೆ ನೀಡಿದ ಆರೋಪ;
ಅಂಬೇಡ್ಕರ್ ಸಂಘದ ಸದಸ್ಯರ ಪ್ರಕಾರ, ನಟ ಪ್ರಥಮ್ ಸಂವಿಧಾನ ಹಾಗೂ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. 'ಆತನಿಗೆ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಏನು ಹಕ್ಕಿದೆ ' ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪೋಲಿಸರು ಆತನ ರಕ್ಷಣೆ ಮಾಡುತ್ತಾರೆಂಬ ಧೈರ್ಯದಿಂದಲೇ ಅವಹೇಳಕಾರಿ ಹೇಳಿಕೆ ಕೊಡುತ್ತಿದ್ದಾನೆ. ತನ್ನ ಹೇಳಿಕೆ ಬಗ್ಗೆ ಆತ ಎಲ್ಲಿವರೆಗೂ ಕ್ಷಮೆ ಕೇಳಲ್ಲವೋ, ಅಲ್ಲಿವರೆಗೂ ನಾವು ಹೋರಾಟ ಕೈ ಬಿಡಲ್ಲ ಎಂದು ಅಂಬೇಡ್ಕರ್ ಸಂಘಟನೆ ಸದಸ್ಯರು ಆಗ್ರಹಿಸಿದರು. ಯಾವಾಗ ಆತ ಏನೇ ಮಾತನಾಡಿದರೂ, ಪೋಲಿಸರು ರಕ್ಷಣೆ ಮಾಡಿ ಆತನನ್ನು ಕಳಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಠಾಣೆ ಎದುರು ಪ್ರತಿಭಟನೆ, ಮುಖಕ್ಕೆ ಮಸಿ ಬಳಿದು ಆಕ್ರೋಶ:
ನಟ ಪ್ರಥಮ್ ಗ್ರಾಮಾಂತರ ಠಾಣೆಗೆ ಬರುವ ವೇಳೆ, ಪ್ರತಿಭಟನಾಕಾರರು ಅವರ ಕಾರು ತಡೆದು ನೇರವಾಗಿ ಹಸ್ತಕ್ಷೇಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಿತಿ ಉಲ್ಬಣಗೊಂಡಿದ್ದು, ಕೆಲವು ಸದಸ್ಯರು ಮಸಿ ಬಳಿಯಲು ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸನ್ನಿವೇಶ ಗಂಭೀರ ರೂಪ ತೆಗೆದುಕೊಳ್ಳುತ್ತಿದ್ದಂತೆ ಪೊಲೀಸ್ ಇಲಾಖೆ ತಕ್ಷಣ ಮಧ್ಯಸ್ಥಿಕೆ ಮಾಡಿದ್ದು, ಪ್ರಥಮ್ ಅವರನ್ನು ರಕ್ಷಿಸಿ ಸ್ಥಳದಿಂದ ಭದ್ರವಾಗಿ ಕಳಿಸಿದ್ದಾರೆ. ಈ ವೇಳೆ ಪೊಲೀಸರಿಗೂ ಪ್ರತಿಭಟನಾಕಾರರಿಗೂ ನೂಕಾಟ ನಡೆದಿದ್ದು, ಕೆಲ ಕ್ಷಣ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿತ್ತು.
ನಟ ಪ್ರಥಮ್ ಬಂಧನದ ಬೇಡಿಕೆ:
ಅಂಬೇಡ್ಕರ್ ಸೇನೆ ಹಾಗೂ ಕರ್ನಾಟಕ ಭೀಮ ಸೇನೆ ಸಂಘಟನೆ ಸದಸ್ಯರು, ಪ್ರಥಮ್ ವಿರುದ್ಧ ಪ್ರಕರಣ ದಾಖಲಾಗಬೇಕು ಹಾಗೂ ಬಂಧನ ಮಾಡಬೇಕು. ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಘೋಷಣೆ ಕೂಗಿದರು. ಅಂಬೇಡ್ಕರ್ ಸಂಘಟನೆಯ ದೊಡ್ಡಬಳ್ಳಾಪುರ ಅಧ್ಯಕ್ಷ ಮಂಜುನಾಥ್, 'ಇದು ಸಾಮಾನ್ಯ ಘಟನೆ ಅಲ್ಲ. ಇದು ನಮ್ಮ ಹಕ್ಕುಗಳ ಮೇಲಿನ ಅಪಮಾನ. ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ' ಎಂದು ಮಾಧ್ಯಮದೊಂದಿಗೆ ಮಾತನಾಡಿದರು.
ತನಿಖೆ ಮುಂದುವರೆಸುವ ಸಾಧ್ಯತೆ:
ನಟ ಪ್ರಥಮ್ ಮುಖಕ್ಕೆ ಮಸಿ ಬಳಿದ ಘಟನೆ ನಡೆದ ಬಳಿಕ ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ. ಈ ಮೂಲಕ ಗಲಾಟೆ ನಡೆದ ಸ್ಥಳದಲ್ಲಿ ಶಾಂತಿ ಕಾಪಾಡಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸತೊಡಗಿದೆ.