ಮಾತೃಭಾಷೆ ತೆಲುಗು ಆದರೂ ಇವರು ಕನ್ನಡದ ಡೈಲಾಗ್ ಕಿಂಗ್!
ಇವರ ಮಾತೃಭಾಷೆ ತೆಲುಗು ಆದರೂ ಹೆಚ್ಚು ಜನಪ್ರಿಯರಾಗಿದ್ದು ಮಾತ್ರ ಕನ್ನಡ ಸಿನಿಮಾಗಳಿಂದ ಮತ್ತು ಕನ್ನಡಿಗರಿಂದ. ಖಡಕ್ ಪೊಲೀಸ್ ಅಧಿಕಾರಿಯಾಗಿ ,ಪೋಷಕ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಅದ್ಭುತ ನಟನೆಯ ಮೂಲಕ ಸಹಸ್ರಾರು ಮಂದಿ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಸಾಯಿಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಸಾಯಿ ಕುಮಾರ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟ. ಪೂರ್ಣ ಹೆಸರು ಸಾಯಿಕುಮಾರ್ ಶರ್ಮ ಪುಡಿಪೆಡ್ಡಿ.
ಕಂಠದಾನ ಕ್ಷೇತ್ರಕ್ಕೆ ಇವರ ಕುಟುಂಬದ ಕೊಡುಗೆ ಅಪಾರವಾಗಿದ್ದು ಸಾಯಿ ಕುಮಾರ್ ಅವರು ಸೇರಿದಂತೆ ತಂದೆ ಪಿ.ಜೆ.ಶರ್ಮಾ ,ತಮ್ಮ ರವಿಶಂಕರ್ ಕೂಡ ಸಾವಿರಾರು ಸಿನಿಮಾಗಳಿಗೆ ಕಂಠ ದಾನ ಮಾಡಿದ್ದಾರೆ. ಸಹೋದರ ರವಿಶಂಕರ್ ಮತ್ತು ಅಯ್ಯಪ್ಪ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ಸಾಯಿಕುಮಾರ್ ಅವರ ಪೋಷಕರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ತಾಯಿ ಕೃಷ್ಣ ಜ್ಯೋತಿ ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಬಾಲ್ಯದಲ್ಲಿ ಕಂಠದಾನ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ಸಾಯಿಕುಮಾರ್ ಸುಮನ್ ,ರಾಜಶೇಖರ್ ಮುಂತಾದ ಕಲಾವಿದರಿಗೆ ಕಂಠದಾನ ನೀಡುತ್ತಿದ್ದರು. ಇವರ ಡೈಲಾಗ್ ಡೆಲಿವರಿ ಸ್ಟೈಲ್ ತುಂಬಾ ಪ್ರಸಿದ್ಧಿಯಾಯಿತು.
1996 ರಲ್ಲಿ ತೆರೆಕಂಡ ಕನ್ನಡದ `ಪೋಲಿಸ್ ಸ್ಟೋರಿ' ಚಿತ್ರದಿಂದ ನಾಯಕನಾಗಿ ಬೆಳಕಿಗೆ ಬಂದರು. ಈ ಚಿತ್ರ ಬೇರೆ ಭಾಷೆಗಳಲ್ಲಿ ಕೂಡ ಡಬ್ ಆಗಿ ಯಶಸ್ಸು ಪಡೆಯಿತು.
ಅಗ್ನಿ ಐಪಿಎಸ್, ಕುಂಕಮ ಭಾಗ್ಯ, ಪೋಲಿಸ್ ಸ್ಟೋರಿ 2,ಲಾಕಪ್ ಡೆತ್ , ಸರ್ಕಲ್ ಇನ್ಸ್‌ಪೆಕ್ಟರ್ ಮುಂತಾದ ಚಿತ್ರಗಳು ಸಾಯಿ ಕುಮಾರ್ ಗೆ ಒಳ್ಳೆ ಇಮೇಜ್ ತಂದು ಕೊಟ್ಟವು. ಅದರಲ್ಲೂ ಪೋಲಿಸ್ ಪಾತ್ರಗಳು ತುಂಬಾ ಪರಿಣಾಮಕಾರಿಯಾಗಿ ಬಂದವು.
2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಸುರೇಖಾ ಎನ್ನುವವರನ್ನು ವಿವಾಹವಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಪುತ್ರ ಆದಿ ತೆಲಗು ಚಿತ್ರರಂಗದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.
ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರಿಗೆ ಐಫಾ, ನಂದಿ , ಫಿಲಂ ಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಕೇವಲ ನಟನೆ , ಕಂಠದಾನದಲ್ಲಷ್ಟೇ ಅಲ್ಲ ನಿರೂಪಕರಾಗಿಯೂ ಕಿರುತೆರೆಯಲ್ಲಿ ಯಶಸ್ವಿಯಾಗಿದ್ದಾರೆ.