ಶಿವಣ್ಣ ಜೊತೆ ಸಿನಿಮಾ ಮಾಡುತ್ತೇನೆ: ಉಪೇಂದ್ರ
ಕಬ್ಜ ಆಡಿಯೋ ಬಿಡುಗಡೆ ಸಂಭ್ರಮ. ಶಿವಣ್ಣ, ಸುದೀಪ್ ಮತ್ತು ಆರ್ ಚಂದ್ರು ಕಾಂಬಿನೇಶನ್ ಸಿನಿಮಾ ಇದು...

ಉಪೇಂದ್ರ, ಸುದೀಪ್ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ‘ಕಬ್ಜ’ ಚಿತ್ರದ ಆಡಿಯೋ ಬಿಡುಗಡೆ ಸಂಭ್ರಮಕ್ಕೆ ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮೈದಾನ ಸಾಕ್ಷಿ ಆಯಿತು.
ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್, ಶಾಸಕ ಮುನಿಯಪ್ಪ, ಸಮಾಜ ಸೇವಕ ರಾಮಚಂದ್ರ ಗೌಡ, ಹೆಚ್ ಎಂ ರೇವಣ್ಣ, ವಿತರಕ ಆನಂದ್ ಪಂಡಿತ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಲರ್‌ಫುಲ್ ವೇದಿಕೆ ಮೇಲೆ ಉಪೇಂದ್ರ ಹಾಗೂ ತಾನ್ಯಾ ಹೋಪ್ ಜೋಡಿಯಲ್ಲಿ ಮೂಡಿ ಬಂದಿರುವ, ಪ್ರಮೋದ್ ಮರವಂತೆ ಬರೆದಿರುವ ‘ಚುಮ… ಚುಮ… ಚಳಿ ಚಳಿ’ ಹಾಡನ್ನು ಬಿಡುಗಡೆ ಮಾಡಲಾಯಿತು.
ಆರಾ ಉಡುಪಿ, ಮನೀಶ್ ದಿನಕರ್, ಸಂತೋಷ್ ವೆಂಕಿ ಹಾಡಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಹಾಡನ್ನು ನೋಡಬಹುದಾಗಿದೆ.
ಹಾಡು ಬಿಡುಗಡೆ ಮಾಡಿದ ಶಿವರಾಜಕುಮಾರ್, ‘ನಾನು ಉಪೇಂದ್ರ ಅಭಿಮಾನಿ. ‘ಓಂ’ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜತೆಗೆ ಕೆಲಸ ಮಾಡುವುದು ಖುಷಿ ವಿಚಾರ.
ಆರ್ ಚಂದ್ರು ಅದ್ಭುತ ಚಿತ್ರಗಳನ್ನು ನೀಡುತ್ತಿದ್ದಾರೆ. ‘ಕಬ್ಜ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿ’ ಎಂದು ಶುಭ ಕೋರಿದರು.
‘ಈ ಚಿತ್ರದ ಆಡಿಯೋ ಬಿಡುಗಡೆ ನಮ್ಮ ಚಿಕ್ಕಬಳ್ಳಾಪುರದಲ್ಲಿ ಮಾಡುವಂತೆ ಆರ್ ಚಂದ್ರು ಅವರಿಗೆ ಹೇಳಿದ್ದೆ. ಆದರೆ, ಅವರು ತಮ್ಮ ತವರೂರಿನಲ್ಲಿ ಮಾಡಿದ್ದಾರೆ. ನಾನು ಈ ಹಿಂದೆ ‘ಆರ್‌ಆರ್‌ಆರ್’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದೆ.
ಅದು ಹಿಟ್ ಆಯಿತು. ಈಗ ‘ಕಬ್ಜ’ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದೇನೆ. ‘ಆರ್‌ಆರ್‌ಆರ್’ ಸಿನಿಮಾದಂತೆ ‘ಕಬ್ಜ’ ಕೂಡ ಹಿಟ್ ಆಗಲಿ’ ಎಂದು ಸಚಿವ ಡಾ.ಕೆ ಸುಧಾಕರ್ ಹೇಳಿದರು.
ಉಪೇಂದ್ರ ಮಾತನಾಡಿ, ‘ಪುನೀತ್ ರಾಜ್‌ಕುಮಾರ್ ಅವರಿಗೆ ಸಿನಿಮಾ ನಿರ್ದೇಶಿಸುವ ಅವಕಾಶ ಇತ್ತು. ಅದು ಸಾಧ್ಯವಾಗಲಿಲ್ಲ. ಶಿವಣ್ಣ ಜತೆಗೆ ಮತ್ತೆ ಸಿನಿಮಾ ಮಾಡುತ್ತೇನೆ. ‘ಕಬ್ಜ’ ಚಿತ್ರಕ್ಕೆ ಕತೆಯೇ ಹೈಲೈಟ್.
ಎಲ್ಲೂ ನಾವು ಕತೆ ಬಿಟ್ಟುಕೊಟ್ಟಿಲ್ಲ. ತೆರೆ ಮೇಲೆಯೇ ನೋಡಬೇಕು’ ಎಂದರು. ನಿರ್ದೇಶಕ ಆರ್ ಚಂದ್ರು, ‘ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಮೂರನೇ ಹಾಡು ಶಿಡ್ಲಘಟ್ಟದಲ್ಲಿ ಬಿಡುಗಡೆ ಆಗುತ್ತಿದೆ.
ಹಿಂದಿಯಲ್ಲಿ 1800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ‘ಕಬ್ಜ’ ತೆರೆ ಕಾಣಲಿದೆ’ ಎಂದರು. ಶ್ರೇಯಾ ಶರಣ್ ಸೇರಿದಂತೆ ಹಲವರು ಚಿತ್ರದ ಬಗ್ಗೆ ಮಾತನಾಡಿದರು. ಮಾಚ್‌ರ್ 17ಕ್ಕೆ ‘ಕಬ್ಜ’ ತೆರೆ ಕಾಣುತ್ತಿದೆ.