ಬಳ್ಳಾರಿ: ಜೀವಸಮಾಧಿ ಸತ್ಪುರುಷ 'ಎರ್ರಿತಾತ ಮಹಿಮೆ' ಸಿನಿಮಾ ಶೂಟಿಂಗ್ ಶುರು
ಬಳ್ಳಾರಿ(ಫೆ.06): ಶಿವಯೋಗ ಸಾಧಕ. ಜೀವಸಮಾಧಿ ಸತ್ಪುರುಷ, ತ್ರಿಕಾಲಜ್ಞಾನಿಯೂ ಆಗಿದ್ದ ಶ್ರೀ ಚೇಳ್ಳಗುರ್ಕಿ ಎರ್ರಿಸ್ವಾಮಿಗಳ ಜೀವನ ಆಧರಿಸಿ ‘ಶ್ರೀ ಗಂಗಾ ಸಿನಿಮಾಸ್’ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ‘ಚೇಳ್ಳಗುರ್ಕಿ ಶ್ರೀ ಎರ್ರಿತಾತ ಮಹಿಮೆ’ ಚಲನಚಿತ್ರದ ಮುಹೂರ್ತ ಹಾಗೂ ಚಿತ್ರೀಕರಣ ಶುಕ್ರವಾರ ತಾಲೂಕಿನ ಚೇಳ್ಳಗುರ್ಕಿಯ ಎರ್ರಿತಾತ ದೇವಸ್ಥಾನದಲ್ಲಿ ಶುರುವಾಗಿದೆ.
ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಎರ್ರಿತಾತನ ಪಾತ್ರವನ್ನು ನಿರ್ವಹಿಸುತ್ತಿದ್ದು, ದೇವಸ್ಥಾನದ ಆವರಣದಲ್ಲಿ ಚಿತ್ರತಂಡ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಿತು. ಮುಹೂರ್ತ ಮುನ್ನ ದೇವಸ್ಥಾನದಲ್ಲಿ ಎರ್ರಿತಾತನವರಿಗೆ ಪೂಜೆ ಸಲ್ಲಿಸಿ, ಸಿನಿಮಾ ಯಶಸ್ವಿಗೆ ಚಿತ್ರತಂಡ ಬೇಡಿಕೊಂಡಿತು.
ಮುಹೂರ್ತ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಿತ್ರ ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರ್, ಪೌರಾಣಿಕ ಹಾಗೂ ಧಾರ್ಮಿಕ ಸೇರಿದಂತೆ ಈವರೆಗೆ 20 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ‘ಚೇಳ್ಳಗುರ್ಕಿ ಶ್ರೀಎರ್ರಿತಾತಯ್ಯ ಮಹಿಮೆ’ 21ನೇ ಸಿನಿಮಾವಾಗಿದೆ. ಧರ್ಮ, ಸಂಸ್ಕೃತಿ ಉಳಿಯಬೇಕು. ಧಾರ್ಮಿಕ ಸ್ಥಳಗಳು ಹಾಗೂ ಸ್ಥಳ ಮಹಿಮೆ ನಾಡಿನ ಜನರಿಗೆ ಪರಿಚಯಿಸಬೇಕು ಎಂಬ ಹಂಬಲದಿಂದ ಪೌರಾಣಿಕ, ಚಾರಿತ್ರಿಕ ಹಾಗೂ ಧಾರ್ಮಿಕ ಹಿನ್ನಲೆಯ ಸಿನಿಮಾಗಳನ್ನು ಮಾಡುತ್ತಾ ಬಂದಿರುವೆ. ಈ ಸಿನಿಮಾದಲ್ಲಿ ಎರ್ರಿತಾತಯ್ಯನವರ ಶಿಷ್ಯರಾದ ತಿಕ್ಕಯ್ಯನ ಪಾತ್ರವನ್ನು ನಾನೇ ನಿರ್ವಹಿಸುತ್ತಿದ್ದೇನೆ. ಗಂಗಾಧರಯ್ಯ ಪಾತ್ರವನ್ನು ಶ್ರೀವಿಷ್ಣು, ಗ್ರಾಮದ ಮುಖಂಡ ಭೀಮನಗೌಡರ ಪಾತ್ರದಲ್ಲಿ ರಮೇಶಗೌಡ ಪಾಟೀಲ್, ನರಹರಿ ಶಾಸ್ತ್ರಿ ಪಾತ್ರದಲ್ಲಿ ರಘುಚಂದ್ರ ಸೇರಿದಂತೆ ಅನೇಕ ಹಿರಿಯ, ಕಿರಿಯ ಕಲಾವಿದರು ಸಿನಿಮಾದಲ್ಲಿದ್ದಾರೆ.
30 ದಿನಗಳ ಕಾಲ ಚೇಳ್ಳಗುರ್ಕಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬಳಿಕ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ರಾಜ್‌ಭಾಸ್ಕರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಶ್ರೀವಿಷ್ಣು, ಉಷಾರಾಣಿ, ಗೀತಾ, ರಾಜ್‌ಭಾಸ್ಕರ್, ರೋಹಿತ್ ಅವರು ನಿರ್ಮಾಪಕರಾಗಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಹಿರಿಯ ನಟ ಶ್ರೀನಿವಾಸ ಮೂರ್ತಿ ಮಾತನಾಡಿ, ಈವರೆಗೆ 360 ಚಿತ್ರಗಳಲ್ಲಿ ನಟಿಸಿರುವೆ. ನಟನೆ ಎಂಬುದು ನಿರಂತರ ಕಲಿಕೆ. ಇಂದಿಗೂ ನಾನು ಕಲಿಯುತ್ತಿರುವೆ. ಕೊಟ್ಟಪಾತ್ರಕ್ಕೆ ಜೀವ ತುಂಬಲು ಪ್ರಮಾಣಿಕ ಪ್ರಯತ್ನ ಮಾಡುವೆ. ಏಳೆಂಟು ವರ್ಷಗಳ ಹಿಂದೆ ರಾಮು ಎಂಟರ್‌ಪ್ರೈಸಸ್‌ರವರ ಸಿನಿಮಾ ಶೂಟಿಂಗ್‌ಗೆ ಬಂದಿದ್ದೆ. ಆಗ ಜೋಳದರಾಶಿ ದೊಡ್ಡನಗೌಡರ ಮನೆಗೆ ಭೇಟಿ ನೀಡಬೇಕು ಎಂದು ಆಗಮಿಸಿದ್ದ ವೇಳೆ ಎರ್ರಿತಾತ ಮಠಕ್ಕೆ ತೆರಳಿ ದರ್ಶನ ಪಡೆಯುವಂತೆ ಅನೇಕರು ಹೇಳಿದರು. ಇಲ್ಲಿಗೆ ಬಂದಾಗ ಶ್ರೀಎರ್ರಿತಾತನವರ ದೊಡ್ಡ ಶಕ್ತಿಯೇ ಇದೆ ಎಂದೆನಿಸಿತು. ಆಗ ನಿರ್ದೇಶಕರಿಗೆ ತಿಳಿಸಿ, ಸಿನಿಮಾ ಮಾಡಲು ಹೇಳಿದೆ. ದೇವರ ಇಚ್ಛೆಯಿಂದ ನೆರವೇರುತ್ತಿದೆ. ಎರ್ರಿತಾತನ ಪಾತ್ರ ಮಾಡುತ್ತಿರುವ ಬಗ್ಗೆ ಖುಷಿ ಇದೆ. ಅನೇಕ ಸಿನಿಮಾಗಳು ಮಾಡಿರಬಹುದು. ಆದರೆ, ತಾತಯ್ಯನ ಪಾತ್ರ ನಿರ್ವಹಿಸುತ್ತಿರುವುದು ಬೇರೆಯದ್ದೇ ಅನುಭೂತಿ ಇದೆ ಎಂದು ಹೇಳಿದರು.
ಎರ್ರಿತಾತ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಬಾಳನಗೌಡ, ಟ್ರಸ್ಟಿಗಳಾದ ವಿರೂಪಾಕ್ಷಗೌಡ, ಕರಿಬಸವನಗೌಡ, ಕಲ್ಲುಕಂಬ ಮಲ್ಲಿಕಾರ್ಜುನಗೌಡ, ಜಂಬುನಾಥ, ಗ್ರಾಮದ ವೈ.ಎಸ್. ಎರ್ರೆಣ್ಣ, ಅಂಗಡಿ ಎರ್ರಿಸ್ವಾಮಿ, ಕೆ. ದೊಡ್ಡಬಸವನಗೌಡ, ಆರ್.ಚನ್ನಪ್ಪ ಹಾಗೂ ಎರಿಸ್ವಾಮಿ ಬಳಗದ ಸದಸ್ಯರು ಇದ್ದರು.