ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರದ ಮುಹೂರ್ತಕ್ಕೆ Rajamouli ಆಗಮನ
ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ಮೊದಲ ಚಿತ್ರಕ್ಕೆ ಮಾರ್ಚ್ 4ರಂದು ಅದ್ದೂರಿ ಮುಹೂರ್ತ ನಡೆಯಲಿದೆ. 'ಬಾಹುಬಲಿ' ಖ್ಯಾತಿಯ ನಿರ್ದೇಶಕ ರಾಜಮೌಳಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಿದ್ದಾರೆ. ಆ ಮೂಲಕ ರಾಜಮೌಳಿ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಕ್ಲಾಪ್ ಮಾಡಿದಂತೆ ಆಗಲಿದೆ.
ವಾರಾಹಿ ಪ್ರೊಡಕ್ಷನ್ ಹೌಸ್ ಮೂಲಕ ಸಾಯಿ ಕೊರಪಾಠಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಮಾಯಾ ಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ (Radha Krishna) ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
ತೆಲುಗು ಹಾಗೂ ಕನ್ನಡದಲ್ಲಿ ಮೂಡಿ ಬರುತ್ತಿರುವ ಚಿತ್ರವಿದು. ಟಾಲಿವುಡ್‌ನ ದೇವಿಶ್ರೀ ಪ್ರಸಾದ್ (Devi Sri Prasad) ಸಂಗೀತ, ಬಾಹುಬಲಿ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದ ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಇರಲಿದೆ. ರವೀಂದರ್ ಕಲಾ ನಿರ್ದೇಶನ, ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೀನ್ (Peter Hein) ಸಾಹಸ ಸಂಯೋಜನೆ ಚಿತ್ರಕ್ಕಿದೆ.
ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿಗೆ (Kireeti Reddy) ಸಿನಿಮಾರಂಗದ ಮೇಲೆ ಆಸಕ್ತಿ ಬೆಳೆದಿತ್ತು. ‘ಜಾಕಿ’ ಚಿತ್ರ ತೆರೆಕಂಡಾಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಲಭ್ಯವಾಗಿತ್ತು.
ಪುನೀತ್ ಕೂಡ ಆಗ ಕಿರೀಟಿಗೆ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಈಗ ಅವರು ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ. ಕಿರೀಟಿ ನಟನೆಯ ಮೊದಲ ಚಿತ್ರಕ್ಕೆ ಚಿತ್ರಕ್ಕೆ ಮಾರ್ಚ್ 4ರಂದು ಅದ್ದೂರಿ ಮುಹೂರ್ತ ನಡೆಯಲಿದ್ದು, ನಿರ್ದೇಶಕ ರಾಜಮೌಳಿ ಕ್ಲಾಪ್ ಮಾಡಲಿದ್ದಾರೆ.
ನನಗೆ ಎಲ್ಲ ರೀತಿಯ ಸಿನಿಮಾಗಳೂ ಇಷ್ಟ. ಆದರೆ, ಪ್ರೇಮಕತೆಗಳು ಹಾಗೂ ಆ್ಯಕ್ಷನ್ ಕತೆಗಳನ್ನು ಒಳಗೊಂಡ ಸಿನಿಮಾಗಳು ನನ್ನನ್ನು ತುಂಬಾ ಕಾಡಿವೆ. ಅಂಥ ಸಿನಿಮಾಗಳ ಮೂಲಕ ಲಾಂಚ್ ಆದರೆ ಲಾಂಗ್ ಲೈಫ್ ಇರುತ್ತದೆ.
ಕನ್ನಡದಲ್ಲಿ ನನ್ನ ನೆಚ್ಚಿನ ಹೀರೋ ಯಶ್. ಅವರಂತೆ ಡೈಲಾಗ್ ಹೇಳುವುದು, ಡ್ಯಾನ್ಸ್ ಹಾಗೂ ಫೈಟ್ ಮಾಡಬೇಕೆಂಬುದು ನನ್ನ ದೊಡ್ಡ ಆಸೆ. ನನಗೆ ಡ್ಯಾನ್ಸ್ ಇಷ್ಟ. ಇದರ ಜತೆಗೆ ಕ್ರಿಕೆಟ್ ಅಂದ್ರೂ ಪ್ರಾಣ. ರಾಜ್ಯ ತಂಡದಿಂದ ತರಬೇತಿಯನ್ನೂ ತೆಗೆದುಕೊಂಡಿದ್ದೇನೆ ಎಂದು ಕಿರೀಟಿ ಹೇಳಿದ್ದಾರೆ.