ನನಗೆ ನಟನೆ ಗೊತ್ತಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ನಂಜುಂಡೇ ಗೌಡ ನಿರ್ದೇಶನದ ಕಾಸಿನ ಸರ ಚಿತ್ರದ ಆಡಿಯೋ ಬಿಡುಗಡೆ. ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಚಿತ್ರಕ್ಕೆ ಸಾಥ್ ಕೊಟ್ಟ ಸಿಎಂ...

‘ನನಗೆ ರಿಯಲ್ ಮತ್ತು ರೀಲ್ ಎರಡರಲ್ಲೂ ನಟಿಸುವುದಕ್ಕೆ ಬರಲ್ಲ. ಕೆಲವರು ತೆರೆಯ ಹಿಂದೆಯೂ ಸಣ್ಣಾಟ, ದೊಡ್ಡಾಟ ಆಡ್ತಾರೆ. ನನಗದು ಬರಲ್ಲ. ಸಹಜ ಕೃಷಿ ಹಾಗೆ ನಾನು ಸಹಜವಾಗಿ ಬದುಕ್ತೀನಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಂಜುಂಡೇ ಗೌಡ ನಿರ್ದೇಶನದ, ವಿಜಯ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಕಾಸಿನ ಸರ’ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಭರವಸೆಯೇ ಬದುಕು ಅನ್ನುವವರು ರೈತರು. ಅನಿಶ್ಚಿತತೆಯ ಮಧ್ಯೆ ಅವರಿಗೆ ಭರವಸೆ ಸಿಗುವುದು ಭೂಮಿ ತಾಯಿಯಿಂದ. ಆ ಭೂಮಿತಾಯಿ ಮಾಡೋ ಮ್ಯಾಜಿಕ್ ಮುಂದೆ ಬೇರೆ ಯಾವುದೂ ಇಲ್ಲ. ನಮ್ಮಲ್ಲಿ ಆಹಾರ ಅಭಿವೃದ್ಧಿ ಆಗಿದೆ.
ಆದರೆ ರೈತನ ಸ್ಥಿತಿ ಹಾಗೇ ಇದೆ. ರೈತ ಕೇಂದ್ರಿತ ಕೃಷಿ ಯೋಜನೆ ಮಾಡಬೇಕು. ರೈತನಿಗೆ ಬೇಕಾದ್ದನ್ನ ಮಾಡಬೇಕು. ಹಿಂದೆ ಹೆಣ್ಣುಮಕ್ಕಳ ಭ್ರೂಣ ಹತ್ಯೆಯಾಗ್ತಿತ್ತು. ಅವ್ವ ನನ್ನನ್ಯಾಕ ಹತ್ಯೆ ಮಾಡ್ತೀಯಾ, ನಾನು ನಿಮಗೆಲ್ಲ ಆಶ್ರಯ, ಸಹಾಯ ಆಗ್ತೀನಿ.
ನನ್ನ ಕೊಲ್ಲಬ್ಯಾಡವ್ವಾ ಅಂತ ಆ ಭ್ರೂಣ ಕೂಗಿ ಹೇಳುತ್ತಂತೆ. ಅದೇ ರೀತಿ ಭೂಮ್ತಾಯಿ ಆರ್ತನಾದ ಮಾಡ್ತಿದ್ದಾಳೆ. ಆಕೆಗೆ ವಿಷ ಉಣಿಸುವ ಕೆಲಸ ಮಾಡೋದು ಬೇಡ. ಸಾವಯವ ಕೃಷಿ ಮಾಡಿದ್ರೆ ಭೂಮಿ ಉಳಿಸಿ ಆರೋಗ್ಯ ಪೂರ್ಣ ಆಹಾರ ಬೆಳೆಯಬಹುದು.
ಇದನ್ನೆಲ್ಲ ಕಾಸಿನ ಸರ ಸಿನಿಮಾದಲ್ಲಿ ಹೇಳಿರಬಹುದು ಎಂಬ ಊಹೆ ನನ್ನದು. ಇದರಲ್ಲಿ ನನ್ನ ಸಹೋದ್ಯೋಗಿ ಸೋಮಶೇಖರ್ ನಟನೆ ಮಾಡಿದ್ದಾರೆ. ಯಾವ ಪಾತ್ರ ಅಂತ ಗೊತ್ತಿಲ್ಲ. ಅವರ ಅಭಿನಯ ನೋಡಲಿಕ್ಕಾದರೂ ನಾನು ಈ ಸಿನಿಮಾ ನೋಡ್ಬೇಕು’ ಎಂದು ಅವರು ಹೇಳಿದರು.
ನಾಯಕ ವಿಜಯ ರಾಘವೇಂದ್ರ, ‘ರೈತನ ಪಾತ್ರ ಮಾಡೋ ಅವಕಾಶ ಎಲ್ಲಾ ನಟರಿಗೂ ಸಿಗಲ್ಲ. ನನಗೆ ಈ ಪಾತ್ರ ಮಾಡಿರೋದಕ್ಕೆ ತೃಪ್ತಿ ಇದೆ’ ಎಂದರು. ನಾಯಕಿ ಹರ್ಷಿಕಾ ಪೂಣಚ್ಚ, ‘ಶೂಟಿಂಗ್ ವೇಳೆ ನಿರ್ದೇಶಕರು ತೋಟದಲ್ಲಿ ಕೆಲಸ ಮಾಡಿಲ್ವಾ ಅಂತ ಕೇಳ್ತಿದ್ರು.
ಯೋಗಾಯೋಗ ಎಂಬಂತೆ ಕಾಫಿ ತೋಟ ಖರೀದಿಸಿದೆ. ರೈತನ ಕಷ್ಟಗೊತ್ತಾಯ್ತು’ ಎನ್ನುತ್ತಾ ತೀರಿಕೊಂಡ ತಂದೆಯನ್ನು ನೆನೆದು ಭಾವುಕರಾದರು.
ಹಕಾರ ಸಚಿವ ಎಸ್ ಟಿ ಸೋಮಶೇಖರ್, ನಟಿ ತಾರಾ ಅನೂರಾಧಾ, ನಿರ್ದೇಶಕ ನಂಜುಂಡೇ ಗೌಡ, ನಿರ್ಮಾಪಕ ದೊಡ್ಡ ನಾಗಯ್ಯ, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.