ರಾಮಮಂದಿರ ನಿರ್ಮಾಣ, ಮೌನ ಮುರಿದ ರಮ್ಯಾ ಸಾರಿದ ಸಂದೇಶ
ಬೆಂಗಳೂರು(ಆ. 07) ಅನೇಕ ದಿನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದ ನಟಿ, ರಾಜಕಾರಣಿ ರಮ್ಯಾ ಇದೀಗ ರಾಮಮಂದಿರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾ ಮುಖೇನ ಏಕತೆ ಪಾಠ ಹೇಳಿದ್ದಾರೆ. ಹಾಗಾದರೆ ರಮ್ಯಾ ಏನು ಸಂದೇಶ ನೀಡಿದ್ದಾರೆ?
ರಾಮಮಂದಿರ ನಿರ್ಮಾಣ ಆರಂಭವಾಗಿದೆ ಎಂದು ಹಿಂದೂಗಳು ಆನಂದದಿಂದಿದ್ದಾರೆ. ನನಗೆ ಸಹ ಖುಷಿಯಾಗಿದೆ.
ಮಸೀದಿ ನಿರ್ಮಾಣ ಪ್ರಾರಂಭ ಆದಾಗ ಮುಸ್ಲಿಮರು ಸಂತಸ ಪಡುತ್ತಾರೆ. ಆಗ ನಾನು ಸಂತಸ ಪಡುತ್ತೇನೆ.
ಸದಾ ಸಂತಸದಿಂದಿರಲು, ದೇವರನ್ನು ಕಾಣಲು ಮಂದಿರ, ಮಸೀದಿಗಳೇ ಬೇಕಾಗಿಲ್ಲ ಎಂಬುದನ್ನು ನಾವೆಲ್ಲ ಅರಿತ ವೇಳೆ ನನಗೆ ಅತ್ಯಂತ ಹೆಚ್ಚು ಸಂತಸ ಆಗಲಿದೆ.
ನಿಜವಾದ ಆನಂದ ಇರುವುದು ಭಾವೈಕ್ಯತೆ ಮತ್ತು ಏಕತೆಯಲ್ಲಿ. ನಮ್ಮೊಳಗಿನ ನಾವನ್ನು ನಾವು ನೋಡಿಕೊಂಡಾಗ ನಿಜ ದೇವರ ಅನುಭವ ಆಗುತ್ತದೆ.
ಸೋಶಿಯಲ್ ಮೀಡಿಯಾ ಮುಖೇನ ಬರೆದುಕೊಂಡು ರಮ್ಯಾ ಏಕತೆ, ಭಾವೈಕ್ಯ ಮತ್ತು ಸಾಮರಸ್ಯದ ಸಂದೇಶ ಸಾರಿದ್ದಾರೆ.
ರಾಜಕೀಯದ ದಾಳಕ್ಕೆ ಬಲಿಪಶುವಾಗದಿರಿ, ಅಧಿಕಾರ ಪಡೆಯಲು ಮತ್ತು ಜನರನ್ನು ನಿಯಂತ್ರಿಸಲು ಹುಟ್ಟುಹಾಕುವ ಗುರುತಿನ (ಐಡೆಂಟಿಟಿಯ) ಸಮಸ್ಯೆಗೆ ಬಲಿಯಾಗದಿರಿ. ಎಲ್ಲವನ್ನೂ ಪ್ರಶ್ನಿಸಿ, ಜಾಗೃತರಾಗಿ ಎದ್ದೇಳಿ, ಎಲ್ಲ ಎಲ್ಲೆಗಳ ಮೆಟ್ಟಿ ನಿಲ್ಲಿ ಎಂದು ಹೇಳಿದ್ದಾರೆ.