ಗುವಾಹಟಿಯ ಶಕ್ತಿ ಪೀಠ ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ಪ್ರೇಮಾ
ಚಂದನವನದ ನಟಿ ಪ್ರೇಮಾ ಅಸ್ಸಾಂನ ಗುವಾಹಟಿಯ ಶಕ್ತಿ ಪೀಠ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ. ಇವರಿಗೆ ನಟಿ ವಾಣಿಶ್ರೀ ಸಾಥ್ ನೀಡಿದ್ದಾರೆ.

ಚಂದನವನದ ಬೆಡಗಿ ಪ್ರೇಮಾ (Actress Prema) 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದು, ಅವರಿಗೆ ನಟಿ ವಾಣಿಶ್ರೀ ಹಾಗೂ ಮಗಳು ಸಾಥ್ ನೀಡಿದ್ದಾರೆ. ವಾಣಿಶ್ರೀ ಪುತ್ರಿ ಖುಷಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದು, ಅದರ ಜೊತೆಗೆ ಕಾಮಾಕ್ಯ ಮಂದಿರದ ವಿಶೇಷತೆಯ ಬಗ್ಗೆ ಬರೆದುಕೊಂಡಿದ್ದಾರೆ.
ತಮ್ಮ ಇನ್’ಸ್ಟಾಗ್ರಾಂನಲ್ಲಿ ಫೋಟೊಗಳನ್ನ ಶೇರ್ ಮಾಡಿರುವ ಖುಷಿ ಅಸ್ಸಾಂನ ಗುವಾಹಟಿಯ ನೀಲಾಚಲ ಬೆಟ್ಟಗಳಲ್ಲಿರುವ ಕಾಮಾಕ್ಯ ದೇವಾಲಯವು (Kamakhya Temple) ತಾಂತ್ರಿಕ ಆಚರಣೆಗಳ ಅತ್ಯಂತ ಹಳೆಯ ಮತ್ತು ಅತ್ಯಂತ ಪೂಜ್ಯ ಕೇಂದ್ರಗಳಲ್ಲಿ ಒಂದಾಗಿದೆ, ಇದು ಕಾಮಾಕ್ಯ ದೇವಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಕುಲಾಚಾರ ತಂತ್ರ ಮಾರ್ಗದ ಕೇಂದ್ರವಾಗಿದೆ ಮತ್ತು ದೇವಿಯ ಋತುಚಕ್ರವನ್ನು ಆಚರಿಸುವ ವಾರ್ಷಿಕ ಉತ್ಸವವಾದ ಅಂಬುಬಾಚಿ ಮೇಳದ ತಾಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ಕಾಮಾಕ್ಯ ಮಂದಿರದ ಕುರಿತು ನಿಮಗೆ ತಿಳಿದೇ ಇದೆ ಅಲ್ವಾ? ಇದು ಶಕ್ತಿ ಪೀಠಗಳಲ್ಲಿ ಒಂದಾದ ಸ್ಥಳ. ಈ ದೇವಿಯ ದರ್ಶನ ಮಾತ್ರದಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ ನಿಮ್ಮ ಬೇಡಿಕೆಗಳು ಈಡೇರುತ್ತೆ ಎನ್ನುವ ನಂಬಿಕೆ ಇದೆ. ಹಿಂದೆ ಚಂದನವನದ ಹಲವಾರು ಸೆಲೆಬ್ರಿಟಿಗಳು ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ನಟ ಜಗ್ಗೇಶ್ ದಂಪತಿಗಳು, ನಟಿ ನಿಶ್ವಿಕಾ ನಾಯ್ಡು, ಕನ್ನಡ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ, ನಿರೂಪಕಿ ಹಾಗೂ ನಟಿ ಜಾಹ್ನವಿ ಮೊದಲಾದ ಸೆಲೆಬ್ರಿಟಿಗಳು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ, ಕಾಮಾಕ್ಯ ದೇವಿಯ ದರ್ಶನ ಪಡೆದು ಬಂದಿದ್ದಾರೆ.ಇದೀಗ ನಟಿ ಪ್ರೇಮ ಹಾಗೂ ಅವರ ಸ್ನೇಹಿತೆಯಾಗಿರುವ ಸದ್ಯ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ವಾಣಿಶ್ರೀ (Vanishree) ಜೊತೆಗೆ ದೇವಿ ದರ್ಶನ ಪಡೆದಿದ್ದಾರೆ. ನಟಿ ಪ್ರೇಮ ಕೂಡ ಅಲ್ಲಿ ತೆಗೆಸಿಕೊಂಡಿರುವ ಫೋಟೊ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಜನಪ್ರಿಯ ನಟಿ ಪ್ರೇಮಾ. ನಂತರ ಅವರು ಸಿನಿಮಾ, ನಟನೆ, ಕ್ಯಾಮೆರಾಗಳಿಂದ ದೂರವೇ ಉಳಿದಿದ್ದರು. ಇದೀಗ ವರ್ಷದಿಂದೀಚೆಗೆ ಕಂ ಬ್ಯಾಕ್ ಮಾಡಿರುವ ಪ್ರೇಮಾ, ಮಹಾನಟಿ ಸೇರಿ, ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಒಂದೆರಡು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಪ್ರೇಮಾ ನಟಿಸಿದ್ದಾರೆ. ಆದರೆ ನಟಿಯನ್ನು ಪೂರ್ಣಪ್ರಮಾಣದಲ್ಲಿ ಮತ್ತೆ ಸಿನಿಮಾಗಳಲ್ಲಿ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.