'ಬಾಲಕರಾಮನ ಕಣ್ಣಿನ ಕೌತುಕಕ್ಕೆ ಉತ್ತರ ಸಿಕ್ತು..' ರಾಮಮಂದಿರಕ್ಕೆ ಭೇಟಿ ನೀಡಿದ ಬಳಿಕ ನಟ ರಕ್ಷಿತ್ ಪೋಸ್ಟ್!
ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಬಾಲಕರಾಮನ ದರ್ಶನ ಪಡೆದುಕೊಂಡಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮ ಮಂದಿರದಲ್ಲಿ ವಿರಾಜಮಾನರಾಗಿರುವ ಬಾಲಕರಾಮನ ದರ್ಶನ ಪಡೆದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಅವರೊಂದಿಗೆ ಅವರ ಸ್ನೇಹಿತರು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ಕೂಡ ಅಯೋಧ್ಯೆಗೆ ತೆರಳಿದ್ದರು.
ಬಾಲಕರಾಮನ ಶ್ರೀರಾಮ ಮಂದಿರವಲ್ಲದೆ, ಅಯೋಧ್ಯೆಯ ಶ್ರೀರಾಮ ಮಂದಿರದ ದಾರಿಯಲ್ಲೇ ಇರುವ ಹನುಮಾನ್ ಗರ್ಹಿ ದೇವಸ್ಥಾನಕ್ಕೂ ರಕ್ಷಿತ್ ಶೆಟ್ಟಿ ಭೇಟಿ ನೀಡಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಕ್ಷಿತ್ ಶೆಟ್ಟಿ, ಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮನನ್ನು ನೇರವಾಗಿ ನೋಡುವ ಹಂಬಲವಿತ್ತು. ಕೊನೆಗೂ ಆತನ ಕಣ್ಣುಗಳು ನಿಜವೆಂದು ನಾನು ಕಂಡುಕೊಂಡಿದ್ದೇನೆ ಮತ್ತು ಅದು ಎಷ್ಟು ನೈಜವಾಗಿದೆ ಎಂಬುದನ್ನು ನೋಡಲು ನಾನು ಬಾಲಕರಾಮನ ಅನೇಕ ಚಿತ್ರಗಳನ್ನು ಜೂಮ್ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.
ಇದು ಶಿಲ್ಪವು ಅಳವಡಿಸಿಕೊಂಡ ಭ್ರಮೆಯ ಪರಿಣಾಮದಂತೆ ತೋರುತ್ತಿದೆ. ಬಹುಶಃ, ಈ ಪರಿಣಾಮವನ್ನು ಪಡೆಯಲು ಶಿಲ್ಪಿ ಕಣ್ಣಿನ ಬಿಳಿ ಭಾಗವನ್ನು ಅಡ್ಡ-ಅಡ್ಡ ರೀತಿಯಲ್ಲಿ ಕೆತ್ತಿರಬೇಕು, ನಾನು ಅಂತಿಮವಾಗಿ ಚಿತ್ರಕ್ಕೆ ಹಲವು ಬಾರಿ ಜೂಮ್ ಮಾಡಿದ ನಂತರ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಬಾಲಕರ ರಾಮನ ಕಣ್ಣಿನ ಕೌತುಕಕ್ಕೆ ಉತ್ತರ ಪಡೆದುಕೊಂಡ ಬಳಿಕ ತಿಳಿಸಿದ್ದಾರೆ.
ಇಂದು ನಾನು ರಾಮನ ವಿಗ್ರಹವನ್ನು ಬಹಳ ಹತ್ತಿರದಿಂದ ನೋಡಿದೆ. ಕೆಲವೇ ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ನಾನು ಸುಮಾರು ಅರ್ಧಗಂಟೆಯ ಕಾಲ ರಾಮನ ಎದುರು ಕುಳಿತು ಅರಾಧನೆ ಮಾಡಿದೆ ಎಂದು ರಕ್ಷಿತ್ ಬರೆದಿದ್ದಾರೆ.
ನಾನು ಈವರೆಗೂ ಯಾವ ದೇವರ ವಿಗ್ರಹದ ಎದುರೂ ಈ ರೀತಿಯ ಪ್ರಾರ್ಥನೆ ಮಾಡಿಲ್ಲ. ನಾನು ಸಾಮಾನ್ಯವಾಗಿ ಎಲ್ಲಾ ವಿಗ್ರಹಗಳ ಕೆಲಸವನ್ನು ಮೆಚ್ಚುತ್ತೇನೆ, ಆದರೆ ಈ ಆರಾಧನೆಯು ವಿಭಿನ್ನ ಎಂದು ಹೇಳಿದ್ದಾರೆ.
ನನ್ನ ಪಾಲಿಗೆ ರಾಮ ಬರೀ ದೇವರಂತೆ ಕಂಡಿಲ್ಲ. ಕಲಾ ಪ್ರಕಾರವೊಂದು ಜೀವಂತವಾಗಿದ್ದಂತೆ ಕಂಡಿತು. ಅರುಣ್ ಯೋಗಿರಾಜ್ ಜೀವಂತ ದಂತಕಥೆಯಾಗಿದ್ದು, ಅವರನ್ನು ತಲೆಮಾರುಗಳ ಕಾಲ ನೆನಪಿಸಿಕೊಳ್ಳುತ್ತಾರೆ ಎಂದು ರಕ್ಷಿತ್ ಮೆಚ್ಚುಗೆ ಸೂಚಿಸಿದ್ದಾರೆ.
ನಾನು ಅವರ ದೈವಿಕ ಕೆಲಸವನ್ನು ನೋಡಿದ್ದೇನೆ. ಒಂದು ದಿನ ನಾನು ಅವರನ್ನು ಭೇಟಿ ಮಾಡಿ, ನಮ್ಮ ಆರಾಧ್ಯ ರಾಮನನ್ನು ಕೆತ್ತಿದ ಅವರ ಅನುಭವದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಜೈ ಸಿಯಾ ರಾಮ್, ಜೈ ಶ್ರೀ ರಾಮ್ ಎಂದು ರಕ್ಷಿತ್ ಶೆಟ್ಟಿ ತಮ್ಮ ಟ್ವೀಟ್ ಮುಗಿಸಿದ್ದಾರೆ.
ರಾಮ ಮಂದಿರ ಹಾಗೂ ಹನುಮಾನ್ ಗರ್ಹಿಯ ಒಳಗೆ ಕುಳಿತು ಶ್ರೀರಾಮಚರಿತ ಮಾನಸ್‌ಅನ್ನು ರಕ್ಷಿತ್ ಶೆಟ್ಟಿ ಓದುತ್ತಿರುವ ಚಿತ್ರವೂ ವೈರಲ್ ಆಗಿದೆ.