ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ಅಭಿಷೇಕ್-ಸುಮಲತಾ ಅಂಬರೀಶ್; ಮದುವೆ ಯಾವಾಗ?
ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಇಬ್ಬರೂ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಮದುವೆಗೆ ಆಮಂತ್ರಣ ನೀಡಿದ್ದಾರೆ.

ನಟ, ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಷ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಹಸೆಮಣೆ ಏರುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಭಿಷೇಕ್ ಮತ್ತು ಅವಿವಾ ಈಗ ಮದುವೆ ತಯಾರಿಯಲ್ಲಿದ್ದಾರೆ.
ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯಕ್ರದಲ್ಲಿ ಅಭಿಷೇಕ್ ಬ್ಯುಸಿಯಾಗಿದ್ದಾರೆ. ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಇಬ್ಬರೂ ಮದುವೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ.
ಸದ್ಯ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಶ್ ಇಬ್ಬರೂ ಪ್ರಧಾನಿ ಮೋದಿ ಅವರಿಗೆ ಆಮಂತ್ರಣ ನೀಡಿದ್ದಾರೆ. ಇಂದು (ಏಪ್ರಿಲ್ 5) ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅಂಬರೀಶ್ ಇಬ್ಬರೂ ಪ್ರಧಾನಿಗೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ಪ್ರಧಾನಿಗೆ ಆಮಂತ್ರಣ ನೀಡಿದ ಅಭಿಷೇಕ್ ಮತ್ತು ಸುಮಲತಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೋದಿ ಜೊತೆ ಇಬ್ಬರೂ ಕ್ಯಾಮರಾಗೆ ಪೋಸ್ ನೀಡಿದ್ದು ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಅಂದಹಾಗೆ ಅಭಿಷೇಕ್ ಮತ್ತು ಅವಿವಾ ಮದುವೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆದರೆ ಮೂಲಗಳ ಪ್ರಕಾರ ಅಭಿಷೇಕ್ ಜೂನ್ 5 ಅಥವಾ ಜೂನ್ 10ಕ್ಕೆ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಬಹಿರಂಗ ಪಡಿಸಿಲ್ಲ.
ಈಗಾಗಲೇ ಅಭಿಷೇಕ್ ತನ್ನ ಎಲ್ಲಾ ಹಳೆಯ ಸ್ನೇಹಿತರಿಗೆ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಅವಿವಾ ಮತ್ತು ಅಭಿಷೇಕ್ ಇಬ್ಬರ ಪ್ರಿ ವೆಡ್ಡಿಂಗ್ ಫೋಟೋಶೂಟ್ ಫಾರಿನ್‌ನಲ್ಲಿ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.
ಅಭಿಷೇಕ್ ಮದುವೆ ತಯಾರಿ ಜೊತೆಗೆ ಸಿನಿಮಾ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಬ್ಯಾಡ್ ಮ್ಯಾನರ್ಸ್ ಮುಗಿಸಿರುವ ಅಭಿಷೇಕ್ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾಗೆ ಸುಕ್ಕಾ ಸೂರಿ ಆಕ್ಷನ್ ಕಟ್ ಹೇಳಿದ್ದಾರೆ.