ಆನ್‌ಲೈನಲ್ಲಿ ಪರಿಚಯವಾದವರೊಂದಿಗೆ ಡೇಟಿಂಗ್ ಹೋಗೋ ಮುನ್ನ....
ಟೆಕ್ನಾಲಜಿ ಎಷ್ಟು ಬೆಳೆದಿದೆ ಎಂದರೆ ಯಾವುದರದ್ದೇ ಹೆಸರು ಹೇಳಿದರೆ ಸಾಕು, ಅದು ಬೆರಳ ತುದಿಯಲ್ಲೇ ದೊರಕುವಷ್ಟು. ಇದಕ್ಕೆ ಡೇಟಿಂಗ್ ಕೂಡಾ ಹೊರತಲ್ಲ. ಮುಂಚಿನಂತೆ ಯಾರೊಂದಿಗಾದರೂ ಡೇಟ್ ಹೋಗಲು ವರ್ಷಗಟ್ಟಲೆ ಚಡಪಡಿಸಿ ಅವಕಾಶಕ್ಕಾಗಿ ಕಾಯಬೇಕಿಲ್ಲ. ಹಲವಾರು ಡೇಟಿಂಗ್ ಆ್ಯಪ್‌ಗಳು ನಿಮಗೆ ಇಂಡಿಯಾದಿಂದ ಇಂಗ್ಲೆಂಡ್‌ವರೆಗೂ ಯಾರೊಂದಿಗಾದರೂ ಆನ್‌ಲೈನ್ ಕಾನ್ವರ್ಸೇಶನ್‌ಗಿಳಿಯಲು ಸಹಾಯ ಮಾಡುತ್ತವೆ. ಎಲ್ಲವೂ ಸರಿ ಹೋಗುತ್ತಿದೆ ಎನಿಸಿದರೆ ಅವರೊಂದಿಗೆ ಜೀವನ ಹಂಚಿಕೊಳ್ಳುವವರೆಗೂ ಮುಂದುವರಿಯಬಹುದು. ಆದರೆ, ಹೀಗೆ ಆನ್‌ಲೈನ್ ಡೇಟಿಂಗ್ ಆರಂಭಿಸುವ ಮುಂಚೆ ಈ ವಿಷಯಗಳನ್ನು ನೆನಪಲ್ಲಿಟ್ಟುಕೊಳ್ಳಿ.
ನಿಮಗೆ ಸಂಪೂರ್ಣ ಅಪರಿಚಿತರಾದವರೊಡನೆ ಡೇಟಿಂಗ್ ಬೇಡ. ಕನಿಷ್ಠ ಪಕ್ಷ ಆ ವ್ಯಕ್ತಿ ಅಸ್ತಿತ್ವದಲ್ಲಿದ್ದಾರೆ ಎಂಬುದಾದರೂ ಪಕ್ಕಾ ಇರಬೇಕು. ಏಕೆಂದರೆ ಆನ್‌ಲೈನ್ ಜಗತ್ತಿನಲ್ಲಿ ಸಾಕಷ್ಟು ಫೇಕ್ ಐಡಿಗಳಿವೆ. ನೀವು ಹುಡುಗಿ ಎಂದುಕೊಂಡವರು ಕಡೆಗೆ ಹುಡುಗನಾಗಿರಬಹುದು!
ಒಂದು ವೇಳೆ ಡೇಟಿಂಗ್ ಆ್ಯಪ್‌ನಲ್ಲಿ ಯಾರಾದರೂ ಆಸಕ್ತಿಕರ ಎನಿಸಿದರೆ, ಅವರ ಬಗ್ಗೆ ಸೋಷ್ಯಲ್ ಮೀಡಿಯಾಗಳಲ್ಲಿ ಹುಡುಕಾಡಿ. ಡೇಟಿಂಗ್ ಆ್ಯಪ್‌ನಲ್ಲಿ ಕೊಟ್ಟಿರುವ ಮಾಹಿತಿ ಹಾಗೂ ಫೋಟೋಗಳು ಅವರ ಸೋಷ್ಯಲ್ ಮೀಡಿಯಾ ಖಾತೆಯೊಂದಿಗೆ ಹೊಂದಿಕೆಯಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಅತಿಯಾದ ನಿರೀಕ್ಷೆ ಹುಟ್ಟಿಸಬೇಡಿ. ನಿಮ್ಮ ಆನ್‌ಲೈನ್ ಫ್ರೆಂಡ್‌ಗೆ ಮುಂಚಿತವಾಗಿಯೇ ನೀವು ಗಂಭೀರ ಸಂಬಂಧ ಬಯಸುತ್ತಿದ್ದೀರೋ ಅಥವಾ ಸುಮ್ಮನೆ ಕ್ಯಾಶುಯಲ್ ಡೇಟಂಗ್ ಮಾಡುತ್ತಿದ್ದೀರೋ ಎಂಬುದನ್ನು ತಿಳಿಸಿ.
ನಿಮ್ಮ ನಿಜವಾದ ಫೋಟೋವನ್ನೇ ಶೇರ್ ಮಾಡಿ. ಹಾಗಂಥ ಹೆಚ್ಚು ಫೋಟೋಗಳು ಬೇಡ. ಕಡಿಮೆ ಮಾಹಿತಿ ನೀಡಿದರೂ ಸರಿಯಾದ ಮಾಹಿತಿ ನೀಡಿ. ನಿಮ್ಮ ಬಗ್ಗೆ ಆಸಕ್ತಿ ಹುಟ್ಟಿಸಲು ಸುಳ್ಳುಗಳನ್ನು ಹೆಣೆಯಬೇಡಿ. ಕಡೆಗೆ ಅದೇ ನಿಮಗೆ ತಿರುಗುಬಾಣವಾದೀತು.
ಡೇಟಿಂಗ್ ಆರಂಭಿಸುವ ಮುನ್ನವೇ ಮಿತಿಗಳನ್ನು ಹೇರಿ. ನಿಮ್ಮೊಂದಿಗೆ ಯಾವ ಮಟ್ಟಿಗೆ ಚಾಟ್ ಮಾಡಬಹುದು, ಯಾವ ಗಡಿ ದಾಟಕೂಡದು ಎಂಬ ಬಗ್ಗೆ ಡೇಟ್‌ಗೆ ಖಡಕ್ ಆಗಿ ತಿಳಿಸಿರುವುದು ಮುಖ್ಯ.
ವರ್ಚುಯಲ್ ಜಗತ್ತಿನ ವ್ಯಕ್ತಿಯೊಡನೆ ವರ್ಷಗಟ್ಟಲೆ ಚಾಟ್ ಮಾಡಿದ್ದರೂ ಸರಿ, ಅವರನ್ನು ಮುಖತಃ ಭೇಟಿಯಾಗಲು ಹೊರಟಾಗ ನಿಮ್ಮ ಕೆಲ ಗೆಳೆಯರಿಗೆ ವಿಷಯ ತಿಳಿಸಲು ಮರೆಯಬೇಡಿ. ನೀವು ಹೋಗುವ ಲೊಕೇಶನ್ ಹಾಗೂ ಮತ್ತೊಬ್ಬ ವ್ಯಕ್ತಿಯ ಫೋನ್ ನಂಬರ್‌ಗಳನ್ನು ಗೆಳೆಯರಿಗೆ ಕೊಟ್ಟಿರಿ.
ಮೊದಲ ಬಾರಿ ಡೇಟಿಂಗ್‌ಗೆ ತೆರಳುವಾಗ ಸಾಧ್ಯವಾದಷ್ಟು ಸುರಕ್ಷಿತ ಎನಿಸುವಂಥ ಸ್ಥಳವನ್ನು ಆಯ್ಕೆ ಮಾಡಿ. ಹೋಟೆಲ್, ಕಾಫಿ ಡೇಯಂಥ ಸ್ಥಳವಾಗಿರಲಿ. ಏಕಾಂತಕ್ಕೆ ಅವಕಾಶ ಕೊಡಬೇಡಿ.
ಆನ್‌ಲೈನ್ ಡೇಟಿಂಗ್‌ನಲ್ಲಿ ಯಾರಾದರೂ ನಿಮ್ಮನ್ನು ತಿರಸ್ಕರಿಸಿದರೆ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಪಾಸಿಟಿವ್ ಆಗಿ ಬದುಕಿನಲ್ಲಿ ಮುಂದುವರಿಯಿರಿ.
ಡೇಟಿಂಗ್ ಆ್ಯಪ್‌ನಲ್ಲಿ ನೀವು ವ್ಯವಹರಿಸಿದ ವ್ಯಕ್ತಿಯು ಅಂದುಕೊಂಡಂತಿಲ್ಲ ಎನಿಸಿದರೆ, ಅವರಿಂದ ನಯವಾಗಿ ಜಾರಿಕೊಳ್ಳಲು ಮುಂಚಿತವಾಗಿಯೇ ಒಂದು ಯೋಜನೆ ಸಿದ್ಧವಿರಲಿ.
ನಿಮ್ಮ ಆನ್‌ಲೈನ್ ಡೇಟಿಂಗ್ ಭೇಟಿ ಹಂತಕ್ಕೆ ಬಂದಿದ್ದರೆ, ನೀವು ಅವರ ಬಗ್ಗೆ ಗಂಭೀರವಾಗಿದ್ದರೆ ಅವರ ಕುಟುಂಬದವರೊಡನೆ ಭೇಟಿ ಮಾಡಿಸಲು ಹೇಳಿ.