ಭಾರತದ ರಾಷ್ಟ್ರೀಯ ಭಾಷೆ ಯಾವುದು? ಹೃದಯಗೆದ್ದ ಕನಿಮೋಳಿ ಉತ್ತರ
kanimozhi karunanidhi: ಸ್ಪೇನ್‌ನಲ್ಲಿ ಭಾರತದ ರಾಷ್ಟ್ರಭಾಷೆ ಕುರಿತು ಕೇಳಲಾದ ಪ್ರಶ್ನೆಗೆ ಡಿಎಂಕೆ ಸಂಸದೆ ಕನಿಮೋಳಿ 'ಏಕತೆ ಮತ್ತು ವೈವಿಧ್ಯತೆ' ಎಂದು ಉತ್ತರಿಸಿದ್ದಾರೆ.

ಪಾಕಿಸ್ತಾನದ ಉಗ್ರಮುಖವಾಡ ಬಯಲಿಗೆ ವಿದೇಶಿಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗವೊಂದರ ನೇತೃತ್ವ ಹೊತ್ತಿರುವ ಡಿಎಂಕೆ ಸಂಸದೆ ಕನಿಮೋಳಿಗೆ ಸ್ಪೇನ್‌ನಲ್ಲಿ ಭಾರತದ ರಾಷ್ಟ್ರಭಾಷೆ ಯಾವುದು ಎಂಬ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಅವರು ‘ಏಕತೆ ಮತ್ತು ವಿವಿಧತೆ’ ಎಂದು ಉತ್ತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ವಲಸಿಗರು, ಸರ್ವಪಕ್ಷ ನಿಯೋಗಕ್ಕೆ ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ ಸಂಸದೆ, ‘ಭಾರತದ ರಾಷ್ಟ್ರೀಯ ಭಾಷೆ ಏಕತೆ ಮತ್ತು ವೈವಿಧ್ಯತೆ. ಈ ನಿಯೋಗವು ಜಗತ್ತಿಗೆ ನೀಡುವ ಸಂದೇಶ ಅದು. ಮತ್ತು ಅದು ಇಂದಿನ ಅತ್ಯಂತ ಮುಖ್ಯವಾದ ವಿಷಯ’ ಎಂದಿದ್ದಾರೆ.
ಸಿಂದೂರ ಚರ್ಚೆಗೆ ವಿಶೇಷ ಅಧಿವೇಶನ
ಕಾಂಗ್ರೆಸ್ ಸೇರಿ ಇಂಡಿಯಾ ಕೂಟದ 16 ವಿಪಕ್ಷಗಳು ಆಪರೇಷನ್ ಸಿಂದೂರ ಕುರಿತ ಚರ್ಚೆಗೆ ಸಂಸತ್ ವಿಶೇಷ ಅಧಿವೇಶನ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮಂಗಳವಾರ ಪತ್ರ ಬರೆದಿವೆ.
ಕಾಂಗ್ರೆಸ್, ಟಿಎಂಸಿ, ಆರ್‌ಜೆಡಿ, ಎಸ್ಪಿ, ಶಿವಸೇನೆ (ಯುಬಿಟಿ) ಒಳಗೊಂಡ ಕೂಟದ ನಾಯಕರು ದೆಹಲಿಯಲ್ಲಿ ಈ ಕುರಿತು ಸಭೆ ನಡೆಸಿ ಪತ್ರ ಬರೆಯುವ ತೀರ್ಮಾನ ಕೈಗೊಂಡಿದ್ದರು. ಈ ಬಗ್ಗೆ ಕೂಟದ ಸಂಸದರು ಪತ್ರಕ್ಕೆ ಸಹಿ ಹಾಕಿದ್ದಾರೆ. ಡಿಎಂಕೆ ಸಭೆಯಲ್ಲಿ ಭಾಗವಹಿಸದಿದ್ದರೂ ಪತ್ರಕ್ಕೆ ಸಹಿ ಹಾಕಿದೆ. ಸಭೆಯಲ್ಲಿ ಭಾಗಿಯಾಗದ ಆಪ್ ಅಧಿವೇಶನ ಬಗ್ಗೆ ಪ್ರಧಾನಿಗೆ ಪ್ರತ್ಯೇಕ ಪತ್ರ ಬರೆದಿದೆ.