- Home
- News
- Politics
- ಮುಂದಿನ ಸಿಎಂ ಡಿಕೆಶಿಗೆ ಎಲ್ಲರೂ ಸಹಕರಿಸಿ! ವಿದಾಯದ ಕೂಟದಲ್ಲಿ ಸಿದ್ದರಾಮಯ್ಯ ಭಾವುಕ, ಬಹಿರಂಗವಾಯ್ತು 'ರಹಸ್ಯ ಒಪ್ಪಂದ'!
ಮುಂದಿನ ಸಿಎಂ ಡಿಕೆಶಿಗೆ ಎಲ್ಲರೂ ಸಹಕರಿಸಿ! ವಿದಾಯದ ಕೂಟದಲ್ಲಿ ಸಿದ್ದರಾಮಯ್ಯ ಭಾವುಕ, ಬಹಿರಂಗವಾಯ್ತು 'ರಹಸ್ಯ ಒಪ್ಪಂದ'!
ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಾಹಾರ ಕೂಟದಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿ, ಡಿ.ಕೆ. ಶಿವಕುಮಾರ್ ಅವರನ್ನು ನೂತನ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದರು. ಈ ಭಾವುಕ ಸಭೆಯಲ್ಲಿ, ತಮ್ಮ ಅಧಿಕಾರಾವಧಿಯ ಕೆಲಸಗಳನ್ನು ಸ್ಮರಿಸಿ, ಪಕ್ಷದ ಸಿದ್ಧಾಂತವನ್ನು ಪಾಲಿಸುವಂತೆ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು.

ಹೈವೋಲ್ಟೇಜ್ ಉಪಾಹಾರ ಕೂಟ ಅಂತ್ಯ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿಗಳ ನಿವಾಸದ ಹೈವೋಲ್ಟೇಜ್ ಉಪಾಹಾರ ಕೂಟದಲ್ಲಿ (Breakfast Meeting) ಅತ್ಯಂತ ಮಹತ್ವದ ಹಾಗೂ ಭಾವುಕ ವಿದ್ಯಮಾನಗಳು ನಡೆದಿವೆ. "ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೆ ನನ್ನ ಸಂಪೂರ್ಣ ಒಪ್ಪಿಗೆಯಿದೆ" ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಭೆಯಲ್ಲಿ ಘೋಷಿಸುವ ಮೂಲಕ ರಾಜ್ಯ ರಾಜಕೀಯದ ಮುಂದಿನ ನಾಯಕ ಯಾರು ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಡಿಕೆಶಿ ಅವರನ್ನು ನೂತನ ಮುಖ್ಯಮಂತ್ರಿ ಎನ್ನುತ್ತಿದ್ದಂತೆಯೇ ಶಿವಕುಮಾರ್ ಅವರು ಕೂಡ ತೀವ್ರ ಭಾವುಕರಾದರು.
ಅತ್ಯಂತ ಭಾವುಕರಾದ ಸಿದ್ದರಾಮಯ್ಯ
ಉಪಾಹಾರ ಕೂಟ ಆರಂಭವಾಗುತ್ತಿದ್ದಂತೆ ಮಂತ್ರಿಗಳು ಹಾಗೂ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅತ್ಯಂತ ಭಾವುಕರಾದರು. "ನನ್ನ ಅಧಿಕಾರಾವಧಿಯಲ್ಲಿ ನಾನು ಜನರಿಗಾಗಿ ಅತ್ಯಂತ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ನೀವೆಲ್ಲರೂ ಅದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕು. ಪಕ್ಷದ ಸೈದ್ಧಾಂತಿಕ ಬದ್ಧತೆಯನ್ನು ಸದಾ ಪ್ರದರ್ಶಿಸಿ" ಎಂದು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು. ಹೊಸದಾಗಿ ನಡೆಯಲಿರುವ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಎಲ್ಲವನ್ನೂ ವಿಸ್ತೃತವಾಗಿ ಚರ್ಚಿಸಿ, ನೂತನ ಸಿಎಂ ಆಗಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲರೂ ಮುಕ್ತವಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಭೆಯ ಬಳಿಕ ಉಭಯ ನಾಯಕರು ಅತ್ಯಂತ ಪರಸ್ಪರ ವಿಶ್ವಾಸದಿಂದ ಹಸ್ತಲಾಘವ ಮಾಡಿ ಔಪಚಾರಿಕ ಮಾತುಕತೆ ನಡೆಸಿದರು.
ರಾಜೀನಾಮೆ ಸಲ್ಲಿಕೆಗೆ ಮಧ್ಯಾಹ್ನ 2:30ಕ್ಕೆ ಲೋಕ ಭವನ ಭೇಟಿ
ಬೆಳಗ್ಗೆ 11:30ರ ಸುಮಾರಿಗೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಅವರು ಈ ಮೊದಲು ರಾಜಭವನಕ್ಕೆ ಸಮಯ ಕೇಳಿದ್ದರು. ಆದರೆ ಬಕ್ರೀದ್ ಹಬ್ಬದ ರಜೆಯ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಸದ್ಯಕ್ಕೆ ರಾಜ್ಯಪಾಲರಾಗಲಿ ಅಥವಾ ಅವರ ಕಾರ್ಯದರ್ಶಿಯಾಗಲಿ ಲಭ್ಯವಿರಲಿಲ್ಲ. ಹೀಗಾಗಿ ಪ್ರಕ್ರಿಯೆ ಕೊಂಚ ವಿಳಂಬವಾಗಿತ್ತು. ಆದಾಗ್ಯೂ, ಹಬ್ಬದ ರಜೆಯ ನಡುವೆಯೂ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರು ರಾಜಭವನಕ್ಕೆ ಆಗಮಿಸಿದ್ದು, ಸಿಎಂ ರಾಜೀನಾಮೆ ಪತ್ರ ಸ್ವೀಕರಿಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸಚಿವರಿಗೆ ಸಿಎಂ ಹೇಳಿದ್ದೇನು?
ನನಗೆ ಹೈಕಮಾಂಡ್ ರಾಜೀನಾಮೆ ಕೊಡಲು ಹೇಳಿದ್ದಾರೆ. ನಾನು ಇವತ್ತು ಮಧ್ಯಾಹ್ನ 3 ಗಂಟೆಗೆ ಲೋಕಭವನಕ್ಕೆ ತೆರಳಿ ರಾಜೀನಾಮೆ ಕೊಡಬೇಕು ಅಂದುಕೊಂಡಿದ್ದೆ. ಆದ್ರೆ ರಾಜ್ಯಪಾಲರು ಲೋಕಭವನದಲ್ಲಿ ಇಲ್ಲ. ಆದ್ರು ನಾನು ಲೋಕಭವನಕ್ಕೆ ಹೋಗಿ ರಾಜೀನಾಮೆ ಕೊಟ್ಟು ಬರುತ್ತೇನೆ. ಹೈಕಮಾಂಡ್ ಡಿಕೆಶಿವಕುಮಾರ್ ಸಿಎಂ ಆಗಬೇಕು ಎಂದಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಲು ನನ್ನ ಒಪ್ಪಿಗೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ .
ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಒಪ್ಪಂದ ಆಗಿತ್ತು. ಆದ್ರೆ ನಾನು ಎಲ್ಲೂ ಕೂಡ ಬಹಿರಂಗವಾಗಿ ಒಪ್ಪಂದದ ಬಗ್ಗೆ ಮಾತನಾಡಿಲ್ಲ. ಸಿಎಂ ಸ್ಥಾನ ಚೇಂಜ್ ಆಗುತ್ತೆ ಅಂತಾನೂ ಹೇಳಿಲ್ಲ. ದೆಹಲಿಗೆ ಹೋಗಿ ಹೈಕಮಾಂಡ್ ಅವರ ಬಳಿ ಕೇಳುತ್ತಿದ್ದೆ ಅಷ್ಟೇ. ಮುಂದೆ ನಿಮ್ಮ(ಸಿದ್ದರಾಮಯ್ಯ) ಸಹಕಾರ ಕೂಡ ಬೇಕು. ನಿಮ್ಮ ಸಹಕಾರದಿಂದಲೇ ಇನ್ನು ಎರಡು ವರ್ಷ ಸರ್ಕಾರ ನಡೆಸೋಣ. 2028 ಕ್ಕೂ ಕಾಂಗ್ರೆಸ್ ಸರ್ಕಾರ ಬರುವಂತೆ ಮಾಡೋಣ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ.
ರಾಜಭವನದ ಸುತ್ತಮುತ್ತ ಬಂದೋಬಸ್ತ್
ರಾಜಭವನದ ಸುತ್ತಮುತ್ತ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 02:30ಕ್ಕೆ ಅಧಿಕೃತವಾಗಿ ಲೋಕ ಭವನಕ್ಕೆ (ರಾಜಭವನ) ಭೇಟಿ ನೀಡಿ ರಾಜೀನಾಮೆ ಪತ್ರ ಹಸ್ತಾಂತರಿಸಲಿದ್ದಾರೆ. ಒಂದು ವೇಳೆ ಸರ್ಕಾರದಿಂದ ಅಧಿಕೃತವಾಗಿ ಸಮಯ ಕೋರಿದರೆ, ಇಂದೋರ್ ಪ್ರವಾಸದಲ್ಲಿರುವ ರಾಜ್ಯಪಾಲರು ಮಧ್ಯಾಹ್ನ 3 ಗಂಟೆಯ ವೇಳೆಗೆ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆಯೂ ಇದೆ. ಒಂದು ವೇಳೆ ರಾಜ್ಯಪಾಲರು ಬರದಿದ್ದರೆ ಅವರ ಸೆಕ್ರೆಟರಿಗೆ ಪತ್ರ ನೀಡಲಾಗುತ್ತದೆ.
ಮಧ್ಯಾಹ್ನ 3 ಗಂಟೆಗೆ ಕೃಷ್ಣಾದಲ್ಲಿ ಪ್ರೆಸ್ ಮೀಟ್, ಸಂಜೆ ದೆಹಲಿಗೆ ಪಯಣ!
ರಾಜೀನಾಮೆ ಸಲ್ಲಿಕೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 3:00 ಗಂಟೆಗೆ ತಮ್ಮ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಮಹತ್ವದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ತಮ್ಮ ರಾಜೀನಾಮೆ ಹಾಗೂ ಮುಂದಿನ ನಿರ್ಧಾರಗಳ ಕುರಿತು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ವರಿಷ್ಠರಿಗೆ ಧನ್ಯವಾದ ಹೇಳಲು ದೆಹಲಿಗೆ:
ಇದಾದ ನಂತರ, ಇಂದು ಸಂಜೆ 4 ಗಂಟೆ ನಂತರ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ದೆಹಲಿಗೆ ವಿಶೇಷ ವಿಮಾನದ ಮೂಲಕ ಹೊರಡಲಿದ್ದಾರೆ. ತಮಗೆ ಎರಡು ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ ಬಳಿಕ ಇಂದೇ ರಾತ್ರಿ ಗಂಟೆಯ ಸುಮಾರಿಗೆ ಅವರು ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಡಿಕೆ ಶಿವಕುಮಾರ್ ಕೂಡ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

