ಗೆಳೆಯನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದ ಇರ್ಫಾನ್!
ಸಿನಿ ಕ್ಷೇತ್ರದಲ್ಲಿ ತನ್ನ ನಟನೆಯಿಂದಲೇ ಪ್ರಸಿದ್ದಿ ಪಡೆದ ನಟ ಇರ್ಫಾನ್ ಖಾನ್ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇರ್ಫಾನ್ ಕೊನೆಯುಸಿರೆಳೆದಿದ್ದು, ಬಾಲಿವುಡ್‌ನಲ್ಲಿ ಶೋಕ ಮಡುಗಟ್ಟಿದೆ. ಹೀಗಿರುವಾಗ ಇರ್ಫಾನ್ ಗೆಳೆಯ ಐಪಿಎಸ್ ಅಧಿಕಾರಿ ಹೈದರ್ ಅಲೀ ಜೈದಿಗೆ ನಿಧನದ ಸುದ್ದಿ ಲಭಿಸಿದಾಗ ಕಣ್ಣೀರಾಗಿದ್ದಾರೆ.
ಹೈದರ್ ಅಲೀ, ಇರ್ಫಾನ್ ಖಾನ್‌ರವರ ಬಾಲ್ಯದ ಗೆಳೆಯ. ಇರ್ಫಾನ್ ನೆರೆ ಮನೆಯವರಾಗಿದ್ದ ಹಾಗೂ ಶಾಲೆ, ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಹೈದರ್ ಸಂದರ್ಶನವೊಂದರಲ್ಲಿ ತಾವಿಬ್ಬರೂ ಒಟ್ಟಿಗೆ ಆಡಿ ಬೆಳೆದವರೆಂದು ಹೇಳಿದ್ದರು. ಬಾಲಿವುಡ್ ಸ್ಟಾರ್ ಆದ ಬಳಿಕ ಕೂಡಾ ಇರ್ಫಾನ್ ತನ್ನ ಗೆಳೆಯರಿಂದ ದೂರವಾಗಲಿಲ್ಲ.
ಇರ್ಫಾನ್ ನಿಧನಕ್ಕೆ ಕಂಬನಿ ಮಿಡಿದ ಅಧಿಕಾರಿ ಹೈದರ್ ಮಾತನಾಡುತ್ತಾ ದೀರ್ಘ ಕಾಲದ ಸಂಘರ್ಷದ ಬಳಿಕ ಸಿನಿ ಕ್ಷೇತ್ರದಲ್ಲಿ ಯಶಸ್ಸು ಕಂಡ ಇರ್ಫಾನ್ ಜಮೀನಿಗೆ ಸಂಬಂಧಿಸಿದಂತೆ ಎಲ್ಲರಿಗೂ ಸಾಥ್ ನೀಡಿದ್ದಾರೆ. ಅತ್ಯುತ್ತಮ ನಟ ಎನ್ನುವುದರ ಜೊತೆಗೆ ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದರು ಎಂದಿದ್ದಾರೆ.
ಇರ್ಫಾನ್ ಜೊತೆಗಿನ ಬಾಲ್ಯದ ಘಟನೆಯೊಂದನ್ನು ಹಂಚಿಕೊಂಡ ಹೈದರ್, ಸ್ಕೂಲ್, ಕಾಲೇಜಿನಲ್ಲಿ ಒಟ್ಟಾಗಿ ಆಡಿ ಬೆಳೆದೆವು ಆದರೀಗ ಅವರು ಈ ಲೋಕದಲ್ಲಿಲ್ಲ ಎಂಬುವುದು ಬಹಳ ದುಃಖಕರ ಸಂಗತಿ. ನಾನು ಜಯ್ಪುರದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು, ಇರ್ಫಾನ್ ಉರ್ದುವಿನಲ್ಲಿ ಮಾಸ್ಟರ್ಸ್ ಮಾಡಿದ್ದರು.
ಒಂದು ಬಾರಿ ಇಬ್ಬರೂ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದಾಗ ಹಾದಿ ಮಧ್ಯೆ ಹೈದರ್‌ಗೆ ವುದ್ಯುತ್ ಶಾಕ್ ತಗುಲಿತ್ತು. ಅವರು ನರಳಾಡುತ್ತಿದ್ದರೂ ಯಾರೊಬ್ಬರೂ ಸಹಾಯ ಮಾಡಲು ಧಾವಿಸಿರಲಿಲ್ಲ. ಆದರೆ ಆ ವೇಳೆ ಇರ್ಫಾನ್ ಅವರನ್ನು ಇದರಿಂದ ಕಾಪಾಡಿ, ಪ್ರಾಣ ಉಳಿಸಿದ್ದರು.
ಇನ್ನು ಇರ್ಫಾನ್‌ಗೆ ಕ್ಯಾನ್ಸರ್ ಇದೆ ಎಂಬ ವಿಚಾರ ತಿಳಿದ ಹೈದರ್ ಅವರನ್ನು ನೋಡಲು ಇಂಗ್ಲೆಂಡ್‌ಗೆ ತೆರಳಿದ್ದರು. ಅದರೆ ಈಗ ಅಚಾನಕ್ಕಾಗಿ ಇರ್ಫಾನ್ ನಿಧನರಾಗಿದ್ದಾರೆಂಬ ಸುದ್ದಿ ಕೇಳಿದಾಗ ನಂಬಲಾಗಲಿಲ್ಲ ಎಂದಿದ್ದಾರೆ.
ಆದರೆ ಇಂದು ಲಾಕ್‌ಡೌನ್‌ನಿಂದಾಗಿ ಇರ್ಫಾನ್‌ರನ್ನು ಭೇಟಿಯಾಗಲು ಮುಂಬೈಗೆ ತೆರಳಲು ಸಾಧ್ಯವಾಗಲಿಲ್ಲ, ಆದರೆ ಅವರ ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿದ್ದೇನೆಂದು ಹೈದರ್ ತಿಳಿಸಿದ್ದಾರೆ.