ತಾನು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಸೂಪರ್‌ಸ್ಟಾರ್ ರಜನೀಕಾಂತ್ ಸದ್ದಿಲ್ಲದೆ ಭೇಟಿ
ಬೆಂಗಳೂರಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ರೌಂಡ್ಸ್ ಹಾಕಿದ್ದಾರೆ. ಸದ್ದಿಲ್ಲದೆ ಬೆಂಗಳೂರಿಗೆ ಬಂದಿರುವ ನಟ ರಾಯರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅದಾದ ನಂತರ ತಾನು ಈ ಹಿಂದೆ ತಾವು ಕೆಲಸ ಮಾಡಿದ್ದ ಜಯನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು. ಇವರ ಸದ್ದಿಲ್ಲದೆ ಭೇಟಿ ಇಡೀ ಬಿಎಂಟಿಸಿ ಸಿಬ್ಬಂದಿಗೆ ಶಾಕ್ ಜೊತೆಗೆ ಖುಷಿಗೆ ಪಾರವೇ ಇಲ್ಲದಂತಾಯ್ತು. ಚಾಮರಾಜಪೇಟೆ ಸೇತುಪತಿ ಅಗ್ರಹಾರ ರಾಯರ ಮಠದ ಜೊತೆ ರಜನಿಕಾಂತ್ ತುಂಬಾ ನಂಟು ಹೊಂದಿದ್ದಾರೆ. ಇದೇ ಕಾರಣಕ್ಕೆ ಚೆನ್ನೈನಲ್ಲಿ ರಾಘವೇಂದ್ರ ಕಲ್ಯಾಣಮಂಟಪ ಕಟ್ಟಿಸಿದ್ದಾರೆ.
ಜಯನಗರ ಬಿಎಂಟಿಸಿ ಡಿಪೋಗೆ 11.30 ಕ್ಕೆ ಬಂದ ರಜನಿಕಾಂತ್ 11.45 ರವರೆಗೂ ಡಿಪೋದಲ್ಲೇ ಇದ್ದರು. ಅಲ್ಲಿದ್ದ ಸಿಬ್ಬಂದಿಗಳ ಜೊತೆ ಮಾತನಾಡಿ ಡಿಪೋ ಒಳಗೆ ಸುತ್ತಾಡಿ ಬಳಿಕ ತೆರಳಿದರು. ಜಯನಗರ ಘಟಕ- 4 1966 ಬೋರ್ಡ್ ಮುಂದೆ ಪೋಟೋ ತೆಗೆಸಿಕೊಳ್ಳಲು ಬಂದಿದ್ದರು. ಪೋಟೋ ತೆಗೆಸಿಕೊಳ್ಳುವ ವೇಳೆ ಚಾಲಕ ರಾಜ್ ಬಹದ್ದೂರ್ ರನ್ನ ಸಿಬ್ಬಂದಿ ನೋಡಿದರು. ರಜನಿ ಜೊತೆ ಬಸ್ ಚಾಲಕರಾಗಿ ಕೆಲಸ ಮಾಡಿದ್ದ ರಾಜ್ ಬಹದ್ದೂರ್.
ರಜನಿಕಾಂತ್ ಪ್ರಸಿದ್ಧ ನಟರಾಗುವುದಕ್ಕೂ ಮುನ್ನ ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಇಂದು ಅಲ್ಲಿಗೆ ಭೇಟಿ ನೀಡಿ ತನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು. ಸಿಬ್ಬಂದಿಗಳು ಗಮನಿಸದೆ ಇದ್ದರೆ ಹಾಗೆ ಪೋಟೋ ತೆಗೆದುಕೊಂಡು ವಾಪಸ್ಸಾಗಲು ಯೋಚಿಸಿದ್ದರು. ಆದರೆ ಸಿಬ್ಬಂದಿಗಳೇ ರಜನಿಕಾಂತ್ ರನ್ನ ನೋಡಿ ಒಳಗಡೆ ಬನ್ನಿ ಎಂದು ಆಮಂತ್ರಿಸಿದರು. ಡಿಪೋ ಪ್ರವೇಶಕ್ಕೂ ಮುನ್ನ ಗೇಟ್ ನಲ್ಲಿ ಭೂಮಿಗೆ ನಮಸ್ಕರಿಸಿ ಡಿಪೋ ಒಳಗಡೆ ಪ್ರವೇಶ ಪಡೆದ ತಲೈವಾ. ಬಳಿಕ ಜನ ಹೆಚ್ಚಾಗ್ತಿದ್ದಂತೆ ಡಿಪೋ ದಿಂದ ರಜನಿಕಾಂತ್ ತೆರಳಿದರು.
ಈ ಹಿಂದೆ ಕೂಡ ರಜನೀಕಾಂತ್ ಹಲವು ಸಂದರ್ಶನಗಳಲ್ಲಿ ಬಿಎಂಟಿಸಿ ನನಗೆ ಅನ್ನ ಹಾಕಿದ ಅದರ ಮೇಲೆ ನನ್ನ ಋಣವಿದೆ. ಪ್ರತೀದಿನ ನಾನು ಬಿಎಂಟಿಸಿಯನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ. ಅದರಂತೆ ಇಂದು ದಿಡೀರ್ ಭೇಟಿ ನೀಡಿರುವುದು. ಬಿಎಂಟಿಸಿ ಮೇಲೆ ಅವರು ಇಟ್ಟಿರುವ ಅಭಿಮಾನವೇ ಸರಿ.
ರಜನಿಕಾಂತ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಕಥೆಯೇ ಒಂದು ರೋಚಕ. ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಅವರು ಸಿನೆಮಾ ಕ್ಷೇತ್ರಕ್ಕೆ ಹೋಗಲು ಅವರ ಸ್ನೇಹಿತ ಬಸ್ ಚಾಲಕ ರಾಜ್ ಬಹದ್ದೂರ್ ಪ್ರಮುಖ ಪ್ರೇರಣೆ ಹೀಗಾಗಿ 2021ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ತನ್ನ ಸ್ನೇಹಿತನಿಗೆ ಅರ್ಪಣೆ ಮಾಡಿ ಗಮನ ಸೆಳೆದಿದ್ದರು.
1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್ ಮೂಲ ಹೆಸರು ಶಿವಾಜಿರಾವ್ ಗಾಯಕ್‍ವಾಡ್. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ರಜನಿಕಾಂತ್ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮಾಡಿದ್ದಾರೆ. ಬಳಿಕ ರಾಮಕೃಷ್ಣ ಮಿಷನ್ ಶಾಖೆಯಾದ ವಿವೇಕಾನಂದ ಬಾಲಕ ಸಂಘದಲ್ಲಿ ವ್ಯಾಸಾಂಗ ಮಾಡಿ ಅಲ್ಲಿ ವೇದಗಳು, ಭಾರತೀಯ ಸಂಸ್ಕೃತಿ ಇತಿಹಾಸವನ್ನು ಅಧ್ಯಯನ ಮಾಡುತ್ತ ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.
ಯಾರಿಗೂ ಕೂಡ ತಿಳಿಸದೆ ತಾನು ಬೆಂಗಳೂರು ಭೇಟಿಗೆ ಬಂದಿರುವ ನಟ ರಜನೀಕಾಂತ್. ತಾನು ಕಂಡಕ್ಟರ್ ಆಗಿದ್ದ ದಿನಗಳನ್ನು ನೆನಪು ಮಾಡಿಕೊಂಡರು. ಸಿಬ್ಬಂದಿಗಳು ತಲೈವಾ ಜೊತೆಗೆ ಫೋಟೋ ತೆಗೆಸಿಕೊಂಡರು. ಜೊತೆಗೆ ಅವರ ಆಶೀರ್ವಾದ ಪಡೆದರು. ಈ ಮೊದಲು ರೂಟ್ ನಂಬರ್ 10 ಡಿಪೋ ನಂ 4 ರಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರಜನಿಕಾಂತ್.