- Home
- Entertainment
- News
- ಎರಡು ವಿಚ್ಚೇದನ, ಮದ್ಯದ ಚಟ, ಕ್ಯಾನ್ಸರ್ ಹೃತಿಕ್ ರೋಷನ್ ಅಕ್ಕನನ್ನು ಕಾಡಿದ ಸಮಸ್ಯೆಗಳು ಒಂದೆರಡಲ್ಲ!
ಎರಡು ವಿಚ್ಚೇದನ, ಮದ್ಯದ ಚಟ, ಕ್ಯಾನ್ಸರ್ ಹೃತಿಕ್ ರೋಷನ್ ಅಕ್ಕನನ್ನು ಕಾಡಿದ ಸಮಸ್ಯೆಗಳು ಒಂದೆರಡಲ್ಲ!
ಸುನೈನಾ ರೋಷನ್ ಅವರ ಜೀವನವು ಹಲವು ಸವಾಲುಗಳಿಂದ ಕೂಡಿದೆ. ವಿವಾಹ ವಿಚ್ಛೇದನ, ಆರೋಗ್ಯ ಸಮಸ್ಯೆಗಳು ಮತ್ತು ವ್ಯಸನಗಳನ್ನು ಎದುರಿಸಿ, ಅವರು ತಮ್ಮ ಬದುಕನ್ನು ಪುನರ್ನಿರ್ಮಿಸಿಕೊಂಡಿದ್ದಾರೆ. ಈ ಕಥೆಯು ಸಂಕಷ್ಟಗಳ ನಡುವೆಯೂ ಆಶಾವಾದ ಮತ್ತು ಧೈರ್ಯದಿಂದ ಬದುಕುವುದರ ಮಹತ್ವವನ್ನು ಸಾರುತ್ತದೆ.

ಹೃತಿಕ್ ರೋಷನ್ ಅವರ ಅಕ್ಕ ಸುನೈನಾ ರೋಷನ್ ಅವರು ಜೀವನದಲ್ಲಿ ಹಲವು ಏರುಪೇರುಗಳನ್ನು ಕಂಡಿದ್ದಾರೆ. ಇಬ್ಬರು ಪತಿಯಾಗಿ ಇವರ ಬಾಳಲ್ಲಿ ಬಂದರೂ ಎರಡೂ ಕೂಡ ವಿಚ್ಛೇದನವಾಗಿ, ಖಾಸಗಿ ಜೀವನದಲ್ಲಿ ಅವಶ್ಯವಿಲ್ಲದ ಕಷ್ಟಗಳನ್ನು ಎದುರಿಸಿದ್ದಾರೆ. ಜೊತೆಗೆ, ಕ್ಷಯರೋಗ ಮೆನಿಂಜೈಟಿಸ್ ಹಾಗೂ ಗರ್ಭಕಂಠದ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಅನುಭವಿಸಿದರು. ಈ ಚಿಂತೆಯಲ್ಲಿ ಮದ್ಯಪಾನದ ದಾಸಳಾಗಿ ಹೊರಬರಲು ಅವರು ಅಮೆರಿಕದ ಪುನರ್ವಸತಿ ಕೇಂದ್ರಕ್ಕೆ ಹೋಗಿದ್ದು, ಈ ಮಧ್ಯೆ ತಮ್ಮ ಅತಿಯಾದ ತೂಕ ಇಳಿಕೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಸುದ್ದಿಯಾಗಿದ್ದಾರೆ.
ಜನವರಿ 22, 1972ರಂದು ಜನಿಸಿದ ಸುನೈನಾ, ಚಿತ್ರನಿರ್ಮಾಪಕ ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ದಂಪತಿಯ ಪುತ್ರಿ. ಮುಂಬೈನ ಸೇಂಟ್ ತೆರೆಸಾ ಕಾನ್ವೆಂಟ್‌ನಲ್ಲಿ ಶಾಲಾಭ್ಯಾಸ ಮಾಡಿ, ನಂತರ ಸ್ವಿಟ್ಜರ್‌ಲ್ಯಾಂಡ್‌ನ ಇನ್‌ಸ್ಟಿಟ್ಯೂಟ್ ವಿಲ್ಲಾ ಪಿಯರೆಫ್ಯೂನಲ್ಲಿ ಒಂದು ವರ್ಷ ಅಧ್ಯಯನ ಮಾಡಿದರು. ಈ ಸಂಸ್ಥೆ ವಿಶ್ವದ ವಿದ್ಯಾರ್ಥಿಗಳಿಗೆ ಶಿಷ್ಟಾಚಾರ ಮತ್ತು ಅಂತರರಾಷ್ಟ್ರೀಯ ಸಂಸ್ಕೃತಿಯನ್ನು ಕಲಿಸುವ ಹೆಸರಾಂತ ಶಿಕ್ಷಣ ಕೇಂದ್ರವಾಗಿದೆ.
ಸುನೈನಾ 1992ರಲ್ಲಿ ಆಶಿಷ್ ಸೋನಿಯನ್ನು ಮೊದಲ ವಿವಾಹವಾದರು ಮತ್ತು ಅವರಿಗೆ ಸುರಾನಿಕಾ ಎಂಬ ಪುತ್ರಿ ಹುಟ್ಟಿದಳು. ಆದರೆ ಬಳಿಕ ಇಬ್ಬರೂ ವಿಚ್ಛೇದನ ಪಡೆದರು. ನಂತರ 2009ರಲ್ಲಿ ಮೋಹನ್ ನಗರ್ ಅವರನ್ನು ಮದುವೆಯಾದರೂ, ಆ ಸಂಬಂಧ ಕೂಡ ಕೆಲವೇ ವರ್ಷಗಳಲ್ಲಿ ಕೊನೆ ಕಂಡಿತು. ಎರಡು ವಿಫಲ ವಿವಾಹಗಳ ಬಳಿಕ ಸುನೈನಾ ಪತ್ರಕರ್ತ ರುಹೈಲ್ ಅಮೀನ್ ಅವರೊಂದಿಗೆ ಸಂಬಂಧದಲ್ಲಿದ್ದರು. ಕೆಲವು ವರದಿಗಳ ಪ್ರಕಾರ, ರಾಕೇಶ್ ರೋಷನ್ ಅವರು ತಮ್ಮ ಮಗಳು ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆಂದೂ ಹೇಳುತ್ತವೆ. ಇನ್ನು ಕೆಲ ವರದಿಗಳು ರುಹೈಲ್ ಅವರ ಈಗಿನ ವೈವಾಹಿಕ ಜೀವನ ಮತ್ತು ಮಕ್ಕಳ ಕಾರಣದಿಂದ ರೋಷನ್ ಕುಟುಂಬ ವಿರೋಧಿಸಿದ್ದೆಂದು ಹೇಳಿವೆ. ಕೊನೆಗೆ, ರುಹೈಲ್ ಸ್ವತಃ ತಮ್ಮ ಸಂಬಂಧವನ್ನು ಮುರಿದುಕೊಂಡರು.
ತಮ್ಮ ಮದ್ಯಪಾನದ ವ್ಯಸನದ ಬಗ್ಗೆ ಮಾತನಾಡಿದ ಸುನೈನಾ, ದೈನಿಕ ಭಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ “ಜೀವನದಲ್ಲಿ ಯಾವುದೇ ಉದ್ದೇಶವಿಲ್ಲದೆ ಒಂಟಿತನದ ಹಂತವೊಂದು ಬಂದಿತ್ತು. ಆಗ ನಾನು ಬಿಯರ್ ಕುಡಿಯಲು ಆರಂಭಿಸಿದೆ. ಅದು ಕುಡಿಯುವ ಅಭ್ಯಾಸವಾಗಿ ಮಾರ್ಪಾಡಾಯ್ತು. ಯಾರನ್ನು ಭೇಟಿಯಾಗುತ್ತಿದ್ದೆ ಎನ್ನುವುದೂ ನನಗೆ ನೆನಪಾಗುತ್ತಿರಲಿಲ್ಲ. ಒಮ್ಮೆ ನನ್ನ ತಾಯಿ-ತಂದೆಗೆ ಈ ಚಟದಿಂದ ಮುಕ್ತಿ ಪಡೆಯಲು ಸಹಾಯ ಕೇಳಿದೆ. ಆಗ ಅಪ್ಪ ನನ್ನ ಕ್ರೆಡಿಟ್ ಕಾರ್ಡ್‌ಗಳು ಹಾಗೂ ಹಣವನ್ನು ಕಿತ್ತುಕೊಂಡರು. ಕುಡಿಯಲು ಅವಕಾಶವಾಗದಂತೆ ಅಂಗರಕ್ಷಕರನ್ನು ನೇಮಿಸಿದರು. ಆದರೆ ಭಾರತದಲ್ಲಿ ಅಥವಾ ಮುಂಬೈನಂತಹ ನಗರಗಳಲ್ಲಿ ಎಲ್ಲವನ್ನೂ ತಪ್ಪಿಸಬಹುದು. ಎಲ್ಲಿಂದಾದರೂ ಒಂದು ಬಾಟಲಿ ಬಿಯರ್ ಅನ್ನು ಹೇಗಾದರೂ ವ್ಯವಸ್ಥೆ ಮಾಡುತ್ತಿದ್ದೆ. ಕೊನೆಗೆ ಅಮೆರಿಕದ ಪುನರ್ವಸತಿ ಕೇಂದ್ರಕ್ಕೆ ಹೋದ ಮೇಲೆ ಚಟವನ್ನು ತೊರೆದೆ. ಅಲ್ಲಿ ದಿನಚರಿ ಬಹಳ ಕಠಿಣವಾಗಿತ್ತು. 28 ದಿನಗಳ ಕೋರ್ಸ್ ಮುಗಿಸಿ ಭಾರತಕ್ಕೆ ಹಿಂದಿರುಗಿದೆ.”
2003ರಲ್ಲಿ ಸುನೈನಾಗೆ ಮೆದುಳಿಗೆ ಪ್ರಭಾವ ಬೀರುವ ಕ್ಷಯರೋಗ ಮೆನಿಂಜೈಟಿಸ್ ತಗುಲಿದ್ದು, ಅವರು ಯಶಸ್ವಿಯಾಗಿ ಚಿಕಿತ್ಸೆ ಪಡೆದರು. 2007ರಲ್ಲಿ ಅವರಿಗೆ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಯಿತು. ಅದೃಷ್ಟವಶಾತ್ ಆರಂಭಿಕ ಹಂತದಲ್ಲಿ ಪತ್ತೆಯಾಗಿ, ಅವರು ಅದರಿಂದ ಚೇತರಿಸಿಕೊಂಡರು. ತಮ್ಮ ಕ್ಯಾನ್ಸರ್ ಪತ್ತಿಯ ಕುರಿತು ಮಾತನಾಡುತ್ತಾ, ಸುನೈನಾ “ನನ್ನ ಕ್ಯಾನ್ಸರ್ ರೋಗನಿರ್ಣಯ ಕೇಳಿ, ನನ್ನ ಪೋಷಕರು, ಸಹೋದರ ಹೃತಿಕ್, ಸುಸ್ಸೇನ್ ಖಾನ್ ಸೇರಿದಂತೆ ಇಡೀ ಕುಟುಂಬವೇ ಆಘಾತಕ್ಕೊಳಗಾಯಿತು. ಆದರೆ ನಾನು ಅದನ್ನು ಆಶಾವಾದದಿಂದ, ಹಾಸ್ಯದಿಂದ ಎದುರಿಸಿದೆ. ಅದು ಎಂದಿನ ಕಾಯಿಲೆಯೊಂದರಂತೆ ಮುಗಿದು ಹೋಗುತ್ತದೆ ಎಂಬ ನಂಬಿಕೆ ನನಗಿತ್ತು.
2017ರಲ್ಲಿ ಸುನೈನಾ ತಮ್ಮ ತೂಕ ಇಳಿಕೆಯಲ್ಲಿ ದೊಡ್ಡ ಪರಿವರ್ತನೆ ಕಂಡರು. ಕೇವಲ ಒಂದು ವರ್ಷದಲ್ಲಿ ಅವರು 50 ಕಿಲೋಗಳಿಂದ ಹೆಚ್ಚು ತೂಕ ಇಳಿಸಿದರು. ತಮ್ಮ ತೂಕ ಇಳಿಕೆಯ ಅನುಭವ ಹಂಚಿಕೊಳ್ಳುತ್ತಾ, ನಾನು ಮೊದಲು ಜಂಕ್ ಫುಡ್ ಮಾತ್ರ ತಿನ್ನುತ್ತಿದ್ದೆ. ಆರೋಗ್ಯಕರ ಆಹಾರ ಸೇವನೆ ಮಾಡಿರಲಿಲ್ಲ. ಕೇವಲ ತೀವ್ರವಾದ ಊದು ಕಾಮಾಲೆ ನನಗೆ ಎಚ್ಚರಿಕೆಯ ಗಂಟೆಯಾಯಿತು. ಅನಾರೋಗ್ಯದಿಂದ ನನ್ನ ತೂಕ ಕಡಿಮೆಯಾಯಿತು. ಆದರೆ ಅದು ನನಗೆ ವೈಜ್ಞಾನಿಕ ಅರಿವು ತಂದಿತು. ವೈದ್ಯರ ಸಲಹೆಯ ಮೇರೆಗೆ ಎಣ್ಣೆ ಮತ್ತು ಮಸಾಲೆಗಳ ಬಳಕೆಯನ್ನು ಕಡಿಮೆ ಮಾಡಿದೆ. ನಂತರ ನನ್ನ ಆರೋಗ್ಯವನ್ನು ಕಾಪಾಡಲು ನನ್ನ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕೆಂದು ನಿರ್ಧರಿಸಿದೆ.
ಈ ಆರೋಗ್ಯದ ಸಂಕಷ್ಟವು ನನ್ನ ಜೀವನವನ್ನು ಸಂಪೂರ್ಣವಾಗಿ ಪರಿಷ್ಕರಿಸುವ ಅವಕಾಶವಾಯಿತು. ಜಂಕ್ ಫುಡ್ ಬದಲು ಪೌಷ್ಟಿಕ ಆಹಾರವನ್ನು ಸೇರಿಸಿಕೊಂಡೆ. ಇಂದು ನಾನು ಜಿಮ್‌ಗೆ ಹೋಗದೆ ಇದ್ದರೆ ಏನಾದರೂ ಕಳೆದುಕೊಂಡಂತೆ ಅನಿಸುತ್ತಿದೆ ಎಂದು ಸುನೈನಾ ಹೇಳಿದರು. ಸುನೈನಾ ರೋಷನ್ ಅವರ ಕಥೆ, ಜೀವನದ ಸಂಕಷ್ಟಗಳ ನಡುವೆ ಆಶಾವಾದದಿಂದ, ಧೈರ್ಯದಿಂದ ಮತ್ತು ಶಕ್ತಿಯಿಂದ ಎದುರಿಸಲು ನಮಗೆ ದೊಡ್ಡ ಪಾಠವನ್ನು ನೀಡುತ್ತದೆ.