3 ವರ್ಷಗಳ Shrirasthu Shubhamasthuಗೆ ಇಂದು ಅಂತ್ಯ! ಅಂದುಕೊಂಡದ್ದೇನು? ಆಗಿದ್ದೇನು?
2022ರ ಅಕ್ಟೋಬರ್ನಿಂದ ಶುರುವಾದ ಶ್ರೀರಸ್ತು ಶುಭಮಸ್ತು ಸೀರಿಯಲ್ ಕೊನೆಗೂ ಅಂತ್ಯ ಕಂಡಿದೆ. ಚಿತ್ರ ವಿಚಿತ್ರ ತಿರುವುಗಳ ಮೂಲಕ ಕೊನೆಗೆ ಧಾರಾವಾಹಿಯಲ್ಲಿ ಆಗಿದ್ದೇನು?

ಕೊನೆಗೂ ಮುಗಿದ ಶ್ರೀರಸ್ತು ಶುಭಮಸ್ತು
ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿದೇ ಬಿಡ್ತು ಎನ್ನುವಷ್ಟರಲ್ಲಿಯೇ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಲೇ ಇತ್ತು. ಶಾರ್ವರಿಯ ಕುತಂತ್ರ ತಿಳಿಯಿತು, ಸೀರಿಯಲ್ ಮುಗಿಯತ್ತೆ ಅಂದುಕೊಳ್ಳುವಷ್ಟರಲ್ಲಿ ಅವಳು ನಾಪತ್ತೆಯಾದಳು. ಕೈಯಲ್ಲಿ ದುಡ್ಡು ಇಲ್ಲದಿದ್ದರೂ ರೌಡಿಗಳನ್ನು ಹೇಗೆ ಸಾಕಿದಳು ಎನ್ನುವುದೇ ಪ್ರಶ್ನಾರ್ಹವಾಗಿ ಉಳಿದುಕೊಂಡಿತು. ಕೊನೆಗೆ ಅವಳ ಅಕ್ಕ ಶರ್ಮಿಳಾ ಸಿಕ್ಕಾಗ, ಅಲ್ಲೊಂದಿಷ್ಟು ವಿಚಿತ್ರಗಳೇ ನಡೆದುಹೋದವು. 2022ರ ಅಕ್ಟೋಬರ್ನಿಂದ ಶುರುವಾದ ಈ ಸೀರಿಯಲ್ಗೆ 3 ವರ್ಷಗಳಾಗಿವೆ.
ರಾಧಾಳೇ ಶರ್ಮಿಳಾ
ಕೊನೆಗೆ ರಾಧಾಳೇ ಶರ್ಮಿಳಾ ಎಂದು ತಿಳಿದಾಗ, ಶಾರ್ವರಿ ಒಳ್ಳೆಯವಳಾಗುತ್ತಾಳೆ ಎಂದುಕೊಂಡರೆ ಹಾಗೂ ಆಗದೇ ಮತ್ತದೇ ಕಿಡ್ನಾಪ್, ಸಾಯಿಸಲು ಪ್ರಯತ್ನ ಎಲ್ಲವೂ ನಡೆದವು. ಎಲ್ಲವೂ ಚಿತ್ರ-ವಿಚಿತ್ರಗಳಂತೆಯೇ ನಡೆಯತೊಡಗಿದವು. ವಯಸ್ಸಾದವರ ಮದುವೆಯ ಸುಮಧುರ ಕಥೆಯಿಂದ ಪ್ರಾರಂಭವಾದ ಸೀರಿಯಲ್ ಎಲ್ಲೋ ತಾಳ ತಪ್ಪುತ್ತಿದೆ ಎಂದು ಹಲವರು ಅಂದುಕೊಂಡದ್ದೂ ಇದೆ.
ತುಳಸಿ-ಮಾಧವ ಪ್ರೀತಿಯ ಪಯಣ
ಆರಂಭದಲ್ಲಿ ಮಾಧವ್ ಮತ್ತು ತುಳಸಿ ಒಂದಾಗಲಿ ಎಂದು ಅಂದುಕೊಂಡವರು ಹಲವರಾಗಿದ್ದರೆ, ಈ ವಯಸ್ಸಲ್ಲಿ ಮದುವೆಯಾಕೆ ಅಂದವರ ಮತ್ತೊಂದಿಷ್ಟು ಮಂದಿ. ಆದರೆ ಪ್ರೀತಿ, ಮದುವೆ, ಒಂಟಿತನದ ತೊಳಲಾಟಕ್ಕೆ ಸಂಗಾತಿ ಬೇಕು ಎನ್ನುವುದನ್ನು ಸಾರುವ ಉದ್ದೇಶದಿಂದ ಮಾಧವ್ ಮತ್ತು ತುಳಸಿಯನ್ನು ಮದುವೆ ಮಾಡಲಾಯಿತು. ಇವರಿಬ್ಬರ ಸುಮಧುರ ಪ್ರೀತಿಗೆ ಹಲವರು ಖುಷಿ ಪಟ್ಟರು. ನಿಜಕ್ಕೂ ಇದೊಂದು ಒಳ್ಳೆಯ ಸಂದೇಶ ಎಂದರು.
ಗರ್ಭಿಣಿಯಾದಾಗ ಹಂಗಾಮಾ
ಕೊನೆಗೆ ನಾವಿಬ್ಬರೂ ಸ್ನೇಹಿತರಾಗಿಯೇ ಇರೋಣ ಎಂದುಕೊಂಡಿದ್ದ ಡೈಲಾಗ್ ತುಳಸಿ ಗರ್ಭಿಣಿ ಎಂದು ತಿಳಿದಾಗ ವೀಕ್ಷಕರು ಮತ್ತೊಂದಿಷ್ಟು ಶಾಕ್ಗೆ ಒಳಗಾದರು. ಆಗಂತೂ ಒಂದು ಹಂತದಲ್ಲಿ ವಾಹಿನಿಯವರು ಕಮೆಂಟ್ ಸೆಕ್ಷನ್ ಆಫ್ ಮಾಡುವಷ್ಟರ ಮಟ್ಟಿಗೆ ಟೀಕೆಗಳೇ ಹರಿದು ಬಂದವು. ಇದರ ಹೊರತಾಗಿಯೂ ಈ ವಯಸ್ಸಿನಲ್ಲಿ ಮಗುವಾದರೆ ತಪ್ಪೇನು ಎಂದು ಹೇಳಿದವರೂ ಇದ್ದಾರೆ.
ತುಳಸಿ ಮಗುವನ್ನು ಒಪ್ಪಿಕೊಂಡು ಮನಗೆದ್ದ ಕಥೆ
ಆದರೆ, ಕೊನೆಗೆ ಎಲ್ಲರೂ ತುಳಸಿಯ ಮಗುವನ್ನು ಒಪ್ಪಿಕೊಂಡರು. ಬಳಿಕ ಶಾರ್ವರಿ ನಾಪತ್ತೆ, ರಾಧಾಳ ಪ್ರತ್ಯಕ್ಷತೆ. ಮಗುವನ್ನು ಶಾರ್ವರಿ ಕಿಡ್ನಾಪ್ ಮಾಡಿದ್ದು ಅದರ ಮೇಲೆ ಅವಳಿಗೆ ಪ್ರೀತಿ ಹುಟ್ಟಿದ್ದು.... ಹೀಗೆ ಚಿತ್ರ-ವಿಚಿತ್ರವಾಗಿಯೇ ಸೀರಿಯಲ್ ಮುಂದುವರೆದು ಅಂತೂ ಇಂದು ಅದು ಅಂತ್ಯ ಕಾಣುತ್ತಿದೆ.
ಪೊಲೀಸರ ಕೈ ಸೇರಿದ ಶಾರ್ವರಿ
ಶಾರ್ವರಿ ಪೊಲೀಸರ ಕೈಗೆ ಕೊನೆಗೂ ಸೇರಿದ್ದಾಳೆ. ಆದರೆ ಸೀರಿಯಲ್ಗಳಲ್ಲಿ ಪೊಲೀಸರು, ತನಿಖಾಕಾಧಿಕಾರಿಗಳು ಎಲ್ಲರೂ ಸೀರಿಯಲ್ ನಾಯಕ, ನಾಯಕರೇ ಆಗಿರುತ್ತಾರೆಯೇ ವಿನಾ ಪೊಲೀಸರು ದಡ್ಡರು ಎನ್ನುವಂತೆ ತೋರಿಸಲಾಗುತ್ತದೆ. ಅದರಲ್ಲಿಯೂ ಹಾಗೆಯೇ ಆಗಿ ಕೊನೆಗೆ ಎಲ್ಲವೂ ಸುಖಾಂತ್ಯಗೊಂಡಿದೆ. ಶಾರ್ವರಿ ಜೈಲುಪಾಲಾಗಿದ್ದು, ಎಲ್ಲರು ಅಂದುಕೊಂಡಂತೆ ಸೀರಿಯಲ್ ಅಂತ್ಯಕಂಡಿದೆ.
ಟ್ವಿಸ್ಟ್ ಇಲ್ಲದೇ ಅಂತ್ಯ
ಕೊನೆಯಲ್ಲಿ ಹೇಳಿಕೊಳ್ಳುವಂಥ ಟ್ವಿಸ್ಟ್ ಏನೂ ಇರಲಿಲ್ಲ ಎಂದು ಒಂದಿಷ್ಟು ಮಂದಿ, ಒಂದೊಳ್ಳೆ ಸೀರಿಯಲ್ ಹಾದಿ ತಪ್ಪಿಸಿದ್ದು ಸರಿಯಲ್ಲ ಎಂದು ಮತ್ತೊಂದಿಷ್ಟು ಮಂದಿ, ಶಾರ್ವರಿ ದುಡ್ಡಿಲ್ಲದಿದ್ದರೂ ರೌಡಿಗಳನ್ನು ಹೇಗೆ ಇಟ್ಟುಕೊಂಡಳು ಎಂದು ಇನ್ನೊಂದಿಷ್ಟು ಮಂದಿ... ಹೀಗೆ ಪ್ರಶ್ನೆಗಳ ನಡುವೆಯೇ, ತರಾತುರಿಯಿಲ್ಲದೇ ಎಂಡ್ ಮಾಡಿದ್ದು ಮಾತ್ರ ನೆಮ್ಮದಿ ಕೊಟ್ಟಿದೆ. ಇದು ನೆಟ್ಟಿಗರ ಕಮೆಂಟ್ಗಳಿಂದ ತಿಳಿದುಬರುತ್ತದೆ.