- Home
- Life
- ಪ್ರಾಣ ತೆಗೆಯೋ ಹಾವಿನ ವಿಷವೇ ಸಂಜೀವಿನಿ! ಈ ವಿಷದಿಂದ ತಯಾರಾಗುತ್ತೆ ಜೀವ ಉಳಿಸುವ ಔಷಧಿ..! ಹಾರ್ಟ್ ಅಟ್ಯಾಕ್‌ಗೂ ರಾಮಬಾಣ
ಪ್ರಾಣ ತೆಗೆಯೋ ಹಾವಿನ ವಿಷವೇ ಸಂಜೀವಿನಿ! ಈ ವಿಷದಿಂದ ತಯಾರಾಗುತ್ತೆ ಜೀವ ಉಳಿಸುವ ಔಷಧಿ..! ಹಾರ್ಟ್ ಅಟ್ಯಾಕ್‌ಗೂ ರಾಮಬಾಣ
ಹಾವು ಕಚ್ಚಿದರೆ ಪ್ರಾಣ ಹೋಗುತ್ತೆ ಅನ್ನೋ ಭಯ ಎಲ್ಲರಿಗೂ ಇರುತ್ತೆ. ಆದ್ರೆ ಅದೇ ಹಾವಿನ ವಿಷ ಈಗ ಎಷ್ಟೋ ಜನರ ಪ್ರಾಣ ಉಳಿಸೋ ಸಂಜೀವಿನಿಯಾಗಿ ಬದಲಾಗಿದೆ. ವೈದ್ಯಕೀಯ ಲೋಕದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳಿಂದ ಹಾವಿನ ವಿಷ ಬಳಸಿ ಹಲವು ಕಾಯಿಲೆಗಳಿಗೆ ಮದ್ದು ತಯಾರಿಸುತ್ತಿದ್ದಾರೆ.

ಕ್ಯಾಪ್ಟೋಪ್ರಿಲ್ ಔಷಧಿ
ಹಾವಿನ ವಿಷದಿಂದ ತಯಾರಾದ ಅತ್ಯಂತ ಫೇಮಸ್ ಔಷಧಿ ಅಂದ್ರೆ ಕ್ಯಾಪ್ಟೋಪ್ರಿಲ್ (Captopril). ಬ್ರೆಜಿಲ್ ವೈಪರ್ (Brazil viper) ಎಂಬ ಹಾವಿನ ವಿಷದಲ್ಲಿರುವ ಬ್ರಾಡಿಕಿನಿನ್-ಪೊಟೆನ್ಷಿಯೇಟಿಂಗ್ ಪೆಪ್ಟೈಡ್ಸ್ ಬಳಸಿ ಇದನ್ನು ತಯಾರಿಸಿದ್ದಾರೆ. 1981ರಲ್ಲಿ ಎಫ್‌ಡಿಎ (FDA) ಅನುಮೋದನೆ ಪಡೆದ ಈ ಔಷಧಿ, ಹೈ ಬಿಪಿ ಕಡಿಮೆ ಮಾಡಲು ಮತ್ತು ಹಾರ್ಟ್ ಫೇಲ್ಯೂರ್ ತಡೆಯಲು ಸೂಪರ್ ಆಗಿ ಕೆಲಸ ಮಾಡುತ್ತೆ. ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (Myocardial infarction) ನಂತರ ಹೃದಯವನ್ನು ಕಾಪಾಡಲು ಇದು ತುಂಬಾ ಉಪಯುಕ್ತ. ಇದೇ ಮಾದರಿಯನ್ನು ಇಟ್ಟುಕೊಂಡು ಎನಾಲಾಪ್ರಿಲ್ (Enalapril) ನಂತಹ ಇತರ ಬಿಪಿ ಔಷಧಿಗಳನ್ನು ಕೂಡ ಅಭಿವೃದ್ಧಿಪಡಿಸಿದ್ದಾರೆ.
ಹಾರ್ಟ್ ಅಟ್ಯಾಕ್ ತಡೆಯುತ್ತೆ ಹಾವಿನ ವಿಷ
ಹಾರ್ಟ್ ಅಟ್ಯಾಕ್ ಅಥವಾ ಹೃದಯದ ಗಂಭೀರ ಸಮಸ್ಯೆಗಳು ಎದುರಾದಾಗ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಇದನ್ನು ತಡೆಯಲು ಪಿಗ್ಮಿ ರ್ಯಾಟಲ್‌ಸ್ನೇಕ್ (Pygmy rattlesnake) ವಿಷದಲ್ಲಿರುವ ಬಾರ್ಬೌರಿನ್ (Barbourin) ಎಂಬ ಡಿಸಿಂಟಿಗ್ರಿನ್ ಬಳಸಿ ಎಪ್ಟಿಫಿಬಾಟೈಡ್ (Eptifibatide) ಎಂಬ ಔಷಧಿ ತಯಾರಿಸಿದ್ದಾರೆ. ಇದು 1998ರಲ್ಲಿ ಎಫ್‌ಡಿಎ (FDA) ಅನುಮೋದನೆ ಪಡೆದಿದೆ. ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಹಾಕುವಾಗ ಇದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತೆ. ಹಾಗೆಯೇ, ಆಫ್ರಿಕನ್ ಸಾ ಸ್ಕೇಲ್ಡ್ ವೈಪರ್ (African saw-scaled viper) ವಿಷದಲ್ಲಿರುವ ಎಕಿಸ್ಟಾಟಿನ್ (Echistatin) ಪ್ರೋಟೀನ್ ಬಳಸಿ ಟಿರೋಫಿಬಾನ್ (Tirofiban) ಎಂಬ ಔಷಧಿಯನ್ನು ಕೂಡ ತಯಾರಿಸಿದ್ದಾರೆ.
ಕೆಲವು ಹಾವಿನ ವಿಷ ರಕ್ತ ಹೆಪ್ಪುಗಟ್ಟಿಸಲು ಸಹಕಾರಿ
ಕೆಲವು ಜಾತಿಯ ಹಾವುಗಳ ವಿಷ ರಕ್ತವನ್ನು ಹೆಪ್ಪುಗಟ್ಟಿಸುವ ಗುಣವನ್ನು ಕೂಡ ಹೊಂದಿರುತ್ತೆ. ಬೋಥ್ರಾಪ್ಸ್ ಅಟ್ರಾಕ್ಸ್ (Bothrops atrox) ನಂತಹ ಹಾವುಗಳ ವಿಷದಿಂದ ಶುದ್ಧೀಕರಿಸಿದ ಬ್ಯಾಟ್ರಾಕ್ಸೋಬಿನ್ (Batroxobin) ಎಂಬ ಎಂಜೈಮ್ ರಕ್ತದಲ್ಲಿರುವ ಫೈಬ್ರಿನೊಜೆನ್ ಮೇಲೆ ಕೆಲಸ ಮಾಡುತ್ತೆ. ಸರ್ಜರಿ ಮಾಡುವಾಗ ಅಥವಾ ತುರ್ತು ರಕ್ತಸ್ರಾವದ ಸಮಸ್ಯೆಗಳಿದ್ದಾಗ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೆಲವು ದೇಶಗಳಲ್ಲಿ ಇದನ್ನು ಹೆಮೋಸ್ಟಾಟಿಕ್ ಆಗಿ ಬಳಸುತ್ತಿದ್ದಾರೆ. ಇದರ ಜೊತೆಗೆ, ನಾಗರಹಾವಿನ ವಿಷದಿಂದ ನೇರವಾಗಿ ಶುದ್ಧೀಕರಿಸಿದ ಕೋಬ್ರಾಟೈಡ್ (Cobratide) ಎಂಬ ಕಾಂಪೌಂಡ್ ನರಗಳ ನೋವು ಮತ್ತು ರಕ್ತನಾಳಗಳ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿದೆ.
ಹಾವಿನ ವಿಷ ಕ್ಯಾನ್ಸರ್ ಥೆರಪಿಗೂ ಬಳಕೆ
ಪ್ರಸ್ತುತ ಹಾವಿನ ವಿಷದ ಮೇಲೆ ನಡೆಯುತ್ತಿರುವ ಸಂಶೋಧನೆಗಳು ಕ್ಯಾನ್ಸರ್ ಥೆರಪಿಯಲ್ಲಿ ಹೊಸ ಭರವಸೆ ಮೂಡಿಸಿವೆ. ವಿಷದಲ್ಲಿರುವ ಕೆಲವು ಪೆಪ್ಟೈಡ್‌ಗಳು ಮತ್ತು ಪ್ರೋಟೀನ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವುದಲ್ಲದೆ, ಅವು ದೇಹದಾದ್ಯಂತ ಹರಡದಂತೆ ತಡೆಯುತ್ತವೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಉದಾಹರಣೆಗೆ, ಕಾಪರ್‌ಹೆಡ್ (Copperhead) ಹಾವಿನ ವಿಷದಲ್ಲಿರುವ ಕಾಂಟೋರ್ಟ್ರೋಸ್ಟಾಟಿನ್ (Contortrostatin) ಎಂಬ ಪ್ರೋಟೀನ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಂಶೋಧನಾ ಹಂತದಲ್ಲಿದೆ. ಅಷ್ಟೇ ಅಲ್ಲದೆ, ಮಾರ್ಫಿನ್‌ಗಿಂತ ಶಕ್ತಿಶಾಲಿ ಹಾಗೂ ಚಟವಾಗದ ನೋವು ನಿವಾರಕಗಳಾಗಿ, ನರಗಳ ಕಾಯಿಲೆ, ಮಧುಮೇಹ ಮತ್ತು ಪಾರ್ಶ್ವವಾಯು ಚಿಕಿತ್ಸೆಗಳಲ್ಲೂ ಈ ವಿಷದ ಪೆಪ್ಟೈಡ್‌ಗಳು ಭವಿಷ್ಯದ ಔಷಧಿಗಳಾಗಿ ಬದಲಾಗುತ್ತಿವೆ.
ಹಾವಿನ ವಿಷವನ್ನು ಲ್ಯಾಬ್‌ನಲ್ಲಿ ಔಷಧಿಯಾಗಿ ಪರಿವರ್ತಿಸಲಾಗುತ್ತದೆ
ಬಹಳಷ್ಟು ಜನ ಹಾವಿನ ವಿಷವನ್ನು ನೇರವಾಗಿ ಇಂಜೆಕ್ಷನ್ ಮೂಲಕ ಕೊಡುತ್ತಾರೆ ಎಂದು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು. ಹಾವಿನ ವಿಷದಲ್ಲಿ ನೂರಾರು ಜೈವಿಕ ಸಕ್ರಿಯ ಅಣುಗಳಿರುತ್ತವೆ. ವಿಜ್ಞಾನಿಗಳು ಲ್ಯಾಬ್‌ನಲ್ಲಿ ವಿಷದ ನಿರ್ದಿಷ್ಟ ಅಣುಗಳನ್ನು ಬೇರ್ಪಡಿಸಿ, ಅವುಗಳ ರಚನೆಯನ್ನು ಅಧ್ಯಯನ ಮಾಡುತ್ತಾರೆ. ಮನುಷ್ಯನ ದೇಹಕ್ಕೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಅವುಗಳನ್ನು ಸಿಂಥೆಟಿಕ್ ಅಥವಾ ಮಾರ್ಪಡಿಸಿದ ರೂಪದಲ್ಲಿ ತಯಾರಿಸುತ್ತಾರೆ. ಕ್ಯಾಪ್ಟೋಪ್ರಿಲ್ (Captopril) ಸಂಪೂರ್ಣವಾಗಿ ಲ್ಯಾಬ್‌ನಲ್ಲಿ ತಯಾರಾದ ಸಿಂಥೆಟಿಕ್ ಔಷಧಿ, ಆದರೆ ಅದರ ಡಿಸೈನ್ ಬ್ಲೂಪ್ರಿಂಟ್ ಮಾತ್ರ ಬ್ರೆಜಿಲಿಯನ್ ವೈಪರ್ (Brazilian viper) ಹಾವಿನ ವಿಷವೇ. ಹಾಗೆಯೇ ಹಾವು ಕಚ್ಚಿದವರನ್ನು ಕಾಪಾಡುವ ಆಂಟಿ-ವೆನಮ್ ಅನ್ನು ಕುದುರೆ ಅಥವಾ ಕುರಿಗಳ ದೇಹಕ್ಕೆ ಹಾವಿನ ವಿಷವನ್ನು ಸೇರಿಸಿ, ಅಲ್ಲಿ ಉತ್ಪತ್ತಿಯಾಗುವ ಆಂಟಿಬಾಡಿಗಳಿಂದ ಸಂಗ್ರಹಿಸುತ್ತಾರೆ.
ಪ್ರಾಣ ಉಳಿಸುವ ಸಂಜೀವಿನಿಯಾಗಿ ಬದಲಾದ ಹಾವಿನ ವಿಷ
ಹಾವಿನ ವಿಷದಿಂದ ತಯಾರಾಗುವ ಔಷಧಿಗಳು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿವೆ. ಪ್ರಾಣ ತೆಗೆಯುವ ವಿಷವೇ ಇಂದು ಲಕ್ಷಾಂತರ ಜನರ ಪ್ರಾಣ ಉಳಿಸುವ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಶೋಧನೆಗಳು ಇನ್ನಷ್ಟು ಹೊಸ ಔಷಧಿಗಳನ್ನು ಪರಿಚಯಿಸುವ ಸಾಧ್ಯತೆ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

