Love yourself: ನೀವು ಹೇಗೆ ಇದ್ದೀರೋ ಹಾಗೆಯೇ ಒಪ್ಪಿಕೊಳ್ಳಿ!
Love yourself ನಿನ್ನೆಗಿಂತ ಇಂದು ನೀವು ಸ್ವಲ್ಪ ಉತ್ತಮವಾಗಿದ್ದೀರಿ ಎಂದರೆ ಅದೇ ದೊಡ್ಡ ಸಾಧನೆ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲು ಆರಂಭಿಸಿದ ದಿನವೇ ನಿಮ್ಮ ಬದುಕು ಹೆಚ್ಚು ಸುಂದರವಾಗುತ್ತದೆ

ನಿಜಕ್ಕೂ ನಮ್ಮನ್ನು ನಾವು ಪ್ರೀತಿಸುತ್ತೇವೆಯೇ?
ಜಗತ್ತಿನಲ್ಲಿ ನಾವು ಇತರರನ್ನು ಮೆಚ್ಚಿಸಲು ಎಷ್ಟೊಂದು ಕಷ್ಟ ಪಡುತ್ತೇವೆ. ಯುವಕರಂತೂ ಕೇವಲ ಯಾರದೋ ಪ್ರೀತಿಗಾಗಿ ಹಾತೋರೆಯುತ್ತಾ ಇರುತ್ತಾರೆ, ಇತರರಂತೆ ಕಾಣಲು ಮತ್ತು ಇತರರ ಓಟಕ್ಕೆ ಸಮನಾಗಿ ಓಡಲು ಹೋಗಿ ನಮ್ಮನ್ನೇ ನಾವು ಮರೆತುಬಿಟ್ಟಿದ್ದೇವೆ. ನಿಜಕ್ಕೂ ನಮ್ಮನ್ನು ನಾವು ಪ್ರೀತಿಸುತ್ತೇವೆಯೇ? ಎಂಬ ಪ್ರಶ್ನೆಗೆ ಬಹುಪಾಲು ಜನರಲ್ಲಿ ಮೌನವೇ ಉತ್ತರವಾಗಿರುತ್ತದೆ. ನಾವು ಬೇರೆಯವರ ತಪ್ಪುಗಳನ್ನು ಕ್ಷಮಿಸುತ್ತೇವೆ, ಆದರೆ ನಮ್ಮ ಒಂದು ಸಣ್ಣ ತಪ್ಪಿಗೆ ನಮ್ಮನ್ನೇ ನಾವು ಕಠಿಣವಾಗಿ ದೂಷಿಸಿಕೊಳ್ಳುತ್ತೇವೆ.
ಸ್ವಪ್ರೀತಿ ಸ್ವಾರ್ಥವಲ್ಲ
ಅನೇಕರು ‘ನನ್ನನ್ನು ನಾನು ಪ್ರೀತಿಸುವುದು’ ಎಂದರೆ ಸ್ವಾರ್ಥ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ನಿಮ್ಮನ್ನು ನೀವು ಪ್ರೀತಿಸಿಕೊಳ್ಳದ ಹೊರತು ನೀವು ಇತರರನ್ನು ಪ್ರಾಮಾಣಿಕವಾಗಿ ಪ್ರೀತಿಸಲು ಸಾಧ್ಯವಿಲ್ಲ. ಖಾಲಿಯಿರುವ ಪಾತ್ರೆಯಿಂದ ನೀವು ಯಾರಿಗೂ ನೀರುಣಿಸಲು ಸಾಧ್ಯವೇ? ಹಾಗೆಯೇ ನಿಮ್ಮ ಅಂತರಂಗದಲ್ಲಿ ಪ್ರೀತಿ ಮತ್ತು ಸಂತೋಷ ತುಂಬಿರದಿದ್ದರೆ ನೀವು ಸಮಾಜಕ್ಕೆ ಏನನ್ನು ನೀಡಲು ಸಾಧ್ಯ?
ನಾವು ಯಾರೂ ಪರಿಪೂರ್ಣರಲ್ಲ
ನಾವ್ಯಾರೂ ಪರಿಪೂರ್ಣರಲ್ಲ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕೊರತೆ ಇರುತ್ತದೆ. ನಮ್ಮ ಬಣ್ಣ, ಎತ್ತರ, ರೂಪ ಅಥವಾ ನಮ್ಮ ಹಳೆಯ ಸೋಲುಗಳ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವುದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಿಮ್ಮನ್ನು ನೀವು ಹೇಗೆ ಇದ್ದೀರೋ ಹಾಗೆಯೇ ಒಪ್ಪಿಕೊಳ್ಳುವುದು ನಿಮ್ಮ ಪ್ರೀತಿಯ ಮೊದಲ ಹೆಜ್ಜೆ. ಕನ್ನಡಿಯ ಮುಂದೆ ನಿಂತಾಗ ನಿಮ್ಮಲ್ಲಿರುವ ದೋಷಗಳಿಗಿಂತ, ನಿಮ್ಮಲ್ಲಿರುವ ಶಕ್ತಿಯನ್ನು ನೋಡಿ ಮುಗುಳ್ನಗುವುದನ್ನು ಕಲಿಯಿರಿ.
ನಿಮ್ಮನ್ನು ಗೌರವಿಸಿಕೊಂಡಾಗ ಜಗತ್ತು ಗೌರವಿಸುತ್ತದೆ
ದಿನವಿಡೀ ಕೇವಲ ಯಾಂತ್ರಿಕವಾಗಿ ಕೆಲಸ ಮಾಡುವ ನಮಗೆ ನಮ್ಮ ಮನಸ್ಸಿನ ಆಸೆಗಳನ್ನು ಪೂರೈಸಲು ಸಮಯವೇ ಇರುವುದಿಲ್ಲ. ನಿಮಗಿಷ್ಟವಾದ ಹವ್ಯಾಸಗಳಿಗೆ ಸಮಯ ಮೀಸಲಿಡುವುದು ಆರೋಗ್ಯಕರ ಆಹಾರ ಸೇವಿಸುವುದು ಮತ್ತು ವಿಶ್ರಾಂತಿ ಪಡೆಯುವುದು ಕೂಡ ನಿಮ್ಮ ಮೇಲೆ ನೀವು ತೋರುವ ಪ್ರೀತಿಯೇ ಆಗಿದೆ. ನಿಮ್ಮನ್ನು ನೀವು ಗೌರವಿಸಲು ಆರಂಭಿಸಿದಾಗ ಜಗತ್ತು ನಿಮ್ಮನ್ನು ಗೌರವಿಸಲು ಸಂಕೋಚ ಪಡುವುದಿಲ್ಲ.
ವಿಮರ್ಶೆಗಳಿಗೆ ಕಿವಿಗೊಡುವುದು ನಿಲ್ಲಿಸಿ:
ಇಂದೇ ಒಂದು ಕೆಲಸ ಮಾಡಿ ಇತರರ ವಿಮರ್ಶೆಗಳಿಗೆ ಕಿವಿಗೊಡುವುದನ್ನು ನಿಲ್ಲಿಸಿ. ನಿಮ್ಮ ಪ್ರಗತಿಯನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿ. ನಿನ್ನೆಗಿಂತ ಇಂದು ನೀವು ಸ್ವಲ್ಪ ಉತ್ತಮವಾಗಿದ್ದೀರಿ ಎಂದರೆ ಅದೇ ದೊಡ್ಡ ಸಾಧನೆ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲು ಆರಂಭಿಸಿದ ದಿನವೇ ನಿಮ್ಮ ಬದುಕು ಹೆಚ್ಚು ಸುಂದರವಾಗುತ್ತದೆ.
ನೆನಪಿಡಿ ನೀವು ಈ ಜಗತ್ತಿನ ಅದ್ಭುತ ಸೃಷ್ಟಿ. ನಿಮ್ಮನ್ನು ನೀವು ದ್ವೇಷಿಸಲು ಯಾವುದೇ ಕಾರಣಗಳಿಲ್ಲ, ಆದರೆ ಪ್ರೀತಿಸಲು ಸಾವಿರಾರು ಕಾರಣಗಳಿವೆ. ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

