ಭಾರತದಲ್ಲಿರುವ ಇತಿಹಾಸ ಹೊಂದಿರೋ ಈ ರಾಜಮನೆತನಗಳ ಆಸ್ತಿ ಎಷ್ಟು? ಈಗ ಏನೇನು ಮಾಡ್ತಿದ್ದಾರೆ?
ಇಂದು ಸ್ವತಂತ್ರ ಭಾರತದಲ್ಲಿ ಸಂವಿಧಾನ ಅಸ್ತಿತ್ವದಲ್ಲಿದೆ. ಯಾವ, ಯಾವ ರಾಜಮನೆತನಗಳು ಇಂದು ಅಸ್ತಿತ್ವದಲ್ಲಿವೆ? ಎಷ್ಟು ಆಸ್ತಿ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

1947ರಲ್ಲಿ ರಾಜ್ಯಗಳ ರದ್ದಾದ ಬಳಿಕ 1971ರಲ್ಲಿ ರಾಜಕೀಯ ವಿಶೇಷಾಧಿಕಾರಗಳ ಸ್ಥಗಿತದ ನಂತರವೂ, ಭಾರತದ ರಾಜಮನೆತನಗಳು ತಮ್ಮ ಪರಂಪರೆಯನ್ನು ಕಾಪಾಡಿಕೊಂಡು, ಆಧುನಿಕ ಸಮಾಜದಲ್ಲಿ ತುಂಬ ಪ್ರಭಾವಿಯಾಗಿ ಉಳಿದಿವೆ. ಈ ಕುಟುಂಬಗಳು ತಮ್ಮ ಅರಮನೆಗಳನ್ನು ಐಷಾರಾಮಿ ಹೋಟೆಲ್‌ಗಳಾಗಿ ಪರಿವರ್ತಿಸಿವೆ. ಅಷ್ಟೇ ಅಲ್ಲದೆ ದಾನಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಸಾಂಪ್ರದಾಯಿಕ ಸಮಾರಂಭಗಳನ್ನು ಮುಂದುವರೆಸಿಕೊಂಡು ಬರುತ್ತ, ತಮ್ಮ ರಾಜಮನೆತನದ ವೈಭವವನ್ನು ಜೀವಂತವಾಗಿರಿಸಿಕೊಂಡು ಬಂದಿವೆ. ಹಾಗಾದರೆ ಅವು ಯಾವುವು?
1. ಉದಯಪುರದ ಮೇವಾರ್ ರಾಜವಂಶ
ಉದಯಪುರದ ಮೇವಾರ್ ರಾಜವಂಶವು ರಾಜಪೂತರ ಹೆಮ್ಮೆ, ವೀರತ್ವದ ಸಂಕೇತವಾಗಿದೆ. ಈಗ ರಾಣಾ ಶ್ರೀಜಿ ಅರವಿಂದ್ ಸಿಂಗ್ ಮೇವಾರ್ ಅವರು ಉದಯಪುರದ ಸಿಟಿ ಪ್ಯಾಲೇಸ್‌ನಿಂದ ವಿಶಾಲ ವ್ಯಾಪಾರ ಸಾಮ್ರಾಜ್ಯ ನೋಡಿಕೊಳ್ತಾರೆ. ಇಲ್ಲಿ ಸಾವಿರಾರು ಪ್ರವಾಸಿಗರು ಬರುತ್ತಾರೆ. 1576ರ ಹಲ್ದಿಘಾಟಿ ಯುದ್ಧದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಮಹಾರಾಣಾ ಪ್ರತಾಪ್‌ನಂತಹವರು ಹೋರಾಡಿದ ಕೀರ್ತಿ ಇವರಿಗೆ ಸಲ್ಲುವುದು. ಮಹಾರಾಣಾ ಮೇವಾರ್ ಚಾರಿಟೇಬಲ್ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಕೊಡುಗೆ ನೀಡಲಾಗುತ್ತಿದೆ. HRH ಗ್ರೂಪ್ ಆಫ್ ಹೋಟೆಲ್ಸ್, ಶಿವ್ ನಿವಾಸ್ ಪ್ಯಾಲೇಸ್, ಫತೇಹ್ ಪ್ರಕಾಶ್ ಪ್ಯಾಲೇಸ್‌ನಂತಹ ಆಸ್ತಿ ಇದ್ದು, ಭಾರತ ಸರ್ಕಾರದಿಂದ ‘ಹೆರಿಟೇಜ್ ಗ್ರ್ಯಾಂಡ್’ ಸ್ಥಾನಮಾನವೂ ಸಿಕ್ಕಿದೆ.
2. ಅಲ್ಸಿಸಾರ್ ಕುಟುಂಬ
ಅಲ್ಸಿಸಾರ್ ಕುಟುಂಬವು ಖೇತ್ರಿಯ ರಾಜ್ಯಕ್ಕೆ ಸಂಬಂಧಪಟ್ಟಿತ್ತು. ಒಂದು ಕಾಲದಲ್ಲಿ ಇದು ಖನಿಜ ಸಂಪತ್ತಿನಿಂದ ಸಮೃದ್ಧವಾಗಿತ್ತು. ಅಭಿಮನ್ಯು ಸಿಂಗ್ ಅವರು ಶೇಖಾವತಿಯ ಅಲ್ಸಿಸಾರ್ ಮಹಲ್, ರಣಥಂಬೋರ್‌ನ ನಹರ್‌ಗಢ ಕೋಟೆಯಂತಹ ಆಸ್ತಿಗಳನ್ನು ಐಷಾರಾಮಿ ತಾಣಗಳಾಗಿ ಮಾಡಿದ್ದಾರೆ. ಇವು ರಾಜರ ಜೀವನ ಶೈಲಿಯ ಝಲಕ್ ನೀಡುತ್ತದೆ. ಈ ಕುಟುಂಬವು ಅಲ್ಸಿಸಾರ್ ಮಹಲ್‌ನಲ್ಲಿ ಆಯೋಜಿಸುವ ಮ್ಯಾಗ್ನೆಟಿಕ್ ಫೀಲ್ಡ್ಸ್ ಫೆಸ್ಟಿವಲ್ ಜೊತೆಗೆ ಆಧುನಿಕ ಸಂಗೀತ, ಕಲೆಯ ಉತ್ಸವದ ಮೂಲಕ ಈ ಪ್ರದೇಶದ ಸಾಂಸ್ಕೃತಿಕ ವೈಭವ ನೆನಪುಳಿಯುವಂತೆ ಮಾಡುವುದು.
ರಾಜ್‌ಕೋಟ್‌ನ ಜಡೇಜಾ ಕುಟುಂಬ
ರಾಜ್‌ಕೋಟ್‌ನ ಜಡೇಜಾ ಕುಟುಂಬವು ತನ್ನ ಪೂರ್ವಜರಿಂದ ಪ್ರದೇಶದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಯುವರಾಜ್ ಮಂಧಾತಸಿಂಹ ಜಡೇಜಾ ಅವರು ಸದ್ಯ ರಾಜವಂಶದ ಘನತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಜೈವಿಂಧನ, ಜಲವಿದ್ಯುತ್ ಯೋಜನೆಗಳ ಮೂಲಕ ನವೀಕರಿಸಬಹುದಾದ ಇಂಧನದಲ್ಲಿ ತೊಡಗಿರುವ ಇವರು, ಸ್ಥಳೀಯ ಕುಶಲಕರ್ಮಿಗಳಿಗೆ ಬೆಂಬಲ ನೀಡುತ್ತ, ಕುಚ್ಛಿ ಕರಕುಶಲತೆಗೆ ಉತ್ತೇಜನ ನೀಡುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕ ಕಲೆಗಳನ್ನು ಕಾಪಾಡುವುದರ ಜೊತೆಗೆ ಸ್ಥಳೀಯ ಆರ್ಥಿಕತೆಗೆ ಕೊಡುಗೆ ಸಿಗುತ್ತಿದೆ.
3. ಜೈಪುರದ ರಾಜಕುಟುಂಬ
ಜೈಪುರದ ರಾಜಕುಟುಂಬವು ಕಲೆ, ಸಂಸ್ಕೃತಿ, ವಾಸ್ತುಶಿಲ್ಪದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. ಯುವ ರಾಜಕುಮಾರ ಪದ್ಮನಾಭ ಸಿಂಗ್ ಅವರು ಇಲ್ಲಿ ಆಧುನಿಕ ದೃಷ್ಟಿಕೋನ ಕೊಟ್ಟಿದ್ದಾರೆ. ಒಬ್ಬ ಸಾಧಕ ಪೋಲೋ ಆಟಗಾರನಾಗಿರುವ ಇವರು, ಅಂತರರಾಷ್ಟ್ರೀಯ ಫ್ಯಾಷನ್ ಬ್ರಾಂಡ್‌ಗಳಿಗಾಗಿ ರ್ಯಾಂಪ್‌ನಲ್ಲಿ ಕಾಣಿಸಿಕೊಳ್ತಾರೆ. ಜೈಪುರ ಸಾಹಿತ್ಯ ಉತ್ಸವಕ್ಕೆ ಬೆಂಬಲ ನೀಡುವ ಮೂಲಕ ಐತಿಹಾಸಿಕ ಆಸ್ತಿಗಳ ಪುನರ್ಸ್ಥಾಪನೆಗೆ ಕಾರಣರಾಗಿದ್ದಾರೆ. ಜೈಪುರದ ರಾಜವೈಭವವು ಜಗತ್ತನ್ನು ಆಕರ್ಷಿಸುವುದನ್ನು ಮುಂದುವರೆಸಿದೆ.
ಮೈಸೂರಿನ ಒಡೆಯರ್ ರಾಜವಂಶ
ಮೈಸೂರಿನ ಒಡೆಯರ್ ರಾಜವಂಶವು ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಾರ್ಷಿಕ ಮೈಸೂರು ದಸರಾ ಉತ್ಸವದ ಮೂಲಕ ಕಲೆಗಳ ಪೋಷಣೆಯನ್ನು ಮುಂದುವರೆಸಿದ್ದಾರೆ. ಇದು ಪ್ರದೇಶದ ಸಂಗೀತ, ನೃತ್ಯ, ಜಾನಪದ ಕಲೆಗಳನ್ನು ಪ್ರದರ್ಶಿಸುತ್ತದೆ. ಮೈಸೂರು ಅರಮನೆಯು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಶಿಕ್ಷಣ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ದಾನಧರ್ಮ ಚಟುವಟಿಕೆಗಳಲ್ಲಿ ಈ ಕುಟುಂಬದ ತೊಡಗಿಸಿಕೊಂಡಿದ್ದಾರೆ.
ಜೋಧ್‌ಪುರದ ರಾಠೋರ್ ಕುಟುಂಬ
ಮಾರ್ವಾರ್ ಪ್ರದೇಶದಲ್ಲಿ ಜೋಧ್‌ಪುರದ ರಾಠೋರ್ ಕುಟುಂಬವು ಶತಮಾನಗಳಿಂದ ಪ್ರಭಾವಿಯಾಗಿದೆ. ಉಮೈದ್ ಭವನ್ ಪ್ಯಾಲೇಸ್, ವಿಶ್ವದ ಅತಿದೊಡ್ಡ ಖಾಸಗಿ ನಿವಾಸಗಳಲ್ಲಿ ಒಂದಾಗಿದೆ. ಗಜ್ ಸಿಂಗ್ IIರ ನೇತೃತ್ವದಲ್ಲಿ, ಈ ಕುಟುಂಬವು ರಾಜಸ್ಥಾನ್ ಇಂಟರ್‌ನ್ಯಾಷನಲ್ ಫೋಕ್ ಫೆಸ್ಟಿವಲ್, ವರ್ಲ್ಡ್ ಸೇಕ್ರೆಡ್ ಸ್ಪಿರಿಟ್ ಫೆಸ್ಟಿವಲ್‌ನಂತಹ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಮೆಹರಾನ್‌ಗಢ ಮ್ಯೂಸಿಯಂ ಟ್ರಸ್ಟ್ ಮೂಲಕ ಮಾರ್ವಾರ್‌ನ ಸಂಪದ್ಭರಿತ ಪರಂಪರೆಯನ್ನು ಸಂರಕ್ಷಿಸಲಾಗುತ್ತಿದೆ.
ಬರೋಡಾದ ಗಾಯಕವಾಡ್ ಕುಟುಂಬ
ಬರೋಡಾದ ಗೇಕ್ವಾಡ್ ಕುಟುಂಬವು ಪ್ರಗತಿಪರ ಆಡಳಿತ, ಕಲೆಗಳ ಪೋಷಣೆಯಿಂದ ಕಂಗೊಳಿಸುತ್ತದೆ. ಸಮರ್ಜಿತ್‌ಸಿಂಗ್ ಗಾಯಕವಾಡ್ ಅವರು, ಬರೋಡಾ ಮ್ಯೂಸಿಯಂ, ಪಿಕ್ಚರ್ ಗ್ಯಾಲರಿಯಲ್ಲಿ ಇರುವ ಕಲೆ, ಐತಿಹಾಸಿಕ ಕಲಾಕೃತಿಗಳ ಸಂಗ್ರಹ ಮಾಡುತ್ತಾರೆ. ಬಕಿಂಗ್‌ಹ್ಯಾಮ್ ಪ್ಯಾಲೇಸ್‌ಗಿಂತ ನಾಲ್ಕು ಪಟ್ಟು ದೊಡ್ಡದಾದ ಲಕ್ಷ್ಮೀ ವಿಲಾಸ್ ಪ್ಯಾಲೇಸ್, ಇವರ ಹಿಂದಿನ ವೈಭವದ ಸಂಕೇತವಾಗಿದೆ. ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ. ಗುಜರಾತ್‌ನಾದ್ಯಂತ ಈ ಕುಟುಂಬವು ದಾನಧರ್ಮ ಕಾರ್ಯಗಳಲ್ಲಿ ತೊಡಗಿದೆ.
ತಿರುವಾಂಕೂರ್ ರಾಜಕುಟುಂಬ
ತಿರುವಾಂಕೂರ್ ರಾಜಕುಟುಂಬವು ಕೇರಳದ ಸಾಂಸ್ಕೃತಿಕ ಗುರುತಿನ ಸ್ತಂಭವಾಗಿದೆ. 18ನೇ ಶತಮಾನದ ಆರಂಭದಿಂದ ಇದರ ಇತಿಹಾಸವಿದೆ. ಪದ್ಮನಾಭಸ್ವಾಮಿ ದೇವಸ್ಥಾನದ ರಕ್ಷಕರಾಗಿರುವ ಈ ಕುಟುಂಬವು, ಅಪಾರ ಬಂಗಾರ, ಅಮೂಲ್ಯ ಕಲ್ಲುಗಳ ಸಂಪತ್ತು ಇದೆ. ಮುಖ್ಯಸ್ಥ ಮೂಲಂ ತಿರುನಾಳ್ ರಾಮ ವರ್ಮ, ಶ್ರೀ ಚಿತ್ರ ತಿರುನಾಳ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಆಂಡ್ ಟೆಕ್ನಾಲಜಿಯ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ವಾರ್ಷಿಕ ನವರಾತ್ರಿ ಉತ್ಸವದಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಈ ಪ್ರದೇಶದ ಕಲಾತ್ಮಕ ಪರಂಪರೆಯನ್ನು ಆಚರಿಸುತ್ತಾರೆ.
ಬಿಕಾನೇರ್ ರಾಜಕುಟುಂಬ
ಬಿಕಾನೇರ್ ರಾಜಕುಟುಂಬವು, ರಾಜಕುಮಾರಿ ರಾಜ್ಯಶ್ರೀ ಕುಮಾರಿಯ ನೇತೃತ್ವದಲ್ಲಿ, ವಿಶಿಷ್ಟ ಸೈನಿಕ ಇತಿಹಾಸವನ್ನು ಹೊಂದಿದೆ. ಇವರ ಪೂರ್ವಜರಾದ ಮಹಾರಾಜ ಗಂಗಾ ಸಿಂಗ್, ಎರಡೂ ವಿಶ್ವಯುದ್ಧಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇಂದು, ಮಹಾರಾಜ ಗಂಗಾ ಸಿಂಗ್‌ಜೀ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ, ಕ್ರೀಡೆಯ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ಬೆಂಬಲಿಸಲಾಗುತ್ತಿದೆ. ಲಾಲ್‌ಗಢ ಮಹಲ್, ಈಗ ಐತಿಹಾಸಿಕ ಹೋಟೆಲ್ ಆಗಿದೆ, ಅಲ್ಲಿ ರಾಜರ ರೀತಿಯ ಆತಿಥ್ಯವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ.
ಪಟೌಡಿ ಕುಟುಂಬ
ಪಟೌಡಿ ಕುಟುಂಬವು ಬಾಲಿವುಡ್, ಕ್ರಿಕೆಟ್‌ಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. ಈ ಕುಟುಂಬವು ಪಟೌಡಿ ರಾಜ್ಯದಿಂದ ತನ್ನ ವಂಶಾವಳಿಯ ಹೊಂದಿದೆ. ಮೊದಲ ನವಾಬ್ ಫೈಜ್ ತಲಾಬ್ ಖಾನ್, 1804ರಲ್ಲಿ ಎರಡನೇ ಆಂಗ್ಲೋ-ಮರಾಠಾ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಸಹಾಯ ಮಾಡಿ, ಪಟೌಡಿಯ ಮೊದಲ ನವಾಬ್ ಆದರು. ಇವರ ಪೂರ್ವಜರಾದ ಇಫ್ತಿಖಾರ್ ಅಲಿ ಖಾನ್ ಪಟೌಡಿ, ಮನ್ಸೂರ್ ಅಲಿ ಖಾನ್ ಪಟೌಡಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇಂದು ಸೈಫ್ ಅಲಿ ಖಾನ್, ಬಾಲಿವುಡ್‌ನ ಪ್ರಮುಖ ನಟರಾಗಿದ್ದಾರೆ. ಸುಮಾರು 800 ಕೋಟಿ ರೂ. ಮೌಲ್ಯದ ಪಟೌಡಿ ಅರಮನೆಯು ರಾಜವೈಭವದ ಸಾಕ್ಷಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

