- Home
- Karnataka Districts
- ಜೀವನದ ಕೊನೆಯ ಸೆಲ್ಫಿ: ಅರಬೈಲ್ ಘಾಟ್‌ನಲ್ಲಿ ಅಂತ್ಯವಾದ ಸ್ನೇಹಯಾತ್ರೆ, ಮೃತರ ಫೋಟೋ ರಿಲೀಸ್ ಮಾಡಿದ ಜಿಲ್ಲಾಡಳಿತ!
ಜೀವನದ ಕೊನೆಯ ಸೆಲ್ಫಿ: ಅರಬೈಲ್ ಘಾಟ್‌ನಲ್ಲಿ ಅಂತ್ಯವಾದ ಸ್ನೇಹಯಾತ್ರೆ, ಮೃತರ ಫೋಟೋ ರಿಲೀಸ್ ಮಾಡಿದ ಜಿಲ್ಲಾಡಳಿತ!
ಉತ್ತರ ಕನ್ನಡದ ಅರಬೈಲ್ ಘಾಟ್‌ನಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಏಳು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಡೆಲಿವರಿ ಬಾಯ್ಸ್ ತಂಡದ ವಾಹನವು ಅಪಘಾತವಾಗಿದ್ದು, ಮೃತರ ಫೋಟೋಗಳನ್ನು ಜಿಲ್ಲಾಡಳಿತ ಹಂಚಿಕೊಂಡಿದೆ.

ಉತ್ತರ ಕನ್ನಡ (ಜು.09): ಬೆಳ್ಳಂಬೆಳಗ್ಗೆ ಅರಬೈಲ್ ಘಟ್ಟ ಪ್ರದೇಶದಲ್ಲಿ ಜವರಾಯನ ಅಟ್ಟಹಾಸ ನಡೆದಿದೆ. ಪ್ರವಾಸಕ್ಕೆಂದು ಖುಷಿಯಿಂದ ಹೊರಟಿದ್ದ ಸ್ನೇಹಿತರ ತಂಡವೊಂದು ಮನೆಗೆ ಶವವಾಗಿ ಮರಳುವಂತಾದ ಎದೆನಡುಗಿಸುವ ಘಟನೆ ಸಂಭವಿಸಿದೆ. ಲಾರಿ ಮತ್ತು ತೂಫಾನ್ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಧಾರವಾಡ ಮೂಲದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಫೋಟೋಗಳನ್ನು ಜಿಲ್ಲಾಡಳಿತವು ಬಿಡುಗಡೆ ಮಾಡಿದೆ.
ಘಟನೆಯ ವಿವರ:
ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಗೋಕರ್ಣ, ಮುರುಡೇಶ್ವರ ಮತ್ತು ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಒಟ್ಟು ಒಂಬತ್ತು ಜನ ಸ್ನೇಹಿತರು ಕ್ರೂಸರ್ ವಾಹನದಲ್ಲಿ ಹೊರಟಿದ್ದರು. ಇಂದು ಮುಂಜಾನೆ ಸುಮಾರು ಧಾರವಾಡದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದಾಗ, ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನಲ್ಲಿ ಮಂಗಳೂರಿನಿಂದ ಕುಡತನಿ ಕಡೆಗೆ ಬರುತ್ತಿದ್ದ ಲಾರಿಗೆ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, 7 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವಸ್ಥಾನದಲ್ಲಿ ತೆಗೆಸಿಕೊಂಡಿದ್ದ ಸೆಲ್ಫಿಯೇ ಕೊನೆಯಾಯ್ತು!
ಮೃತಪಟ್ಟವರೆಲ್ಲರೂ ಧಾರವಾಡದ ವಿವಿಧ ಕಂಪನಿಗಳಲ್ಲಿ 'ಡೆಲಿವರಿ ಬಾಯ್ಸ್' ಆಗಿ ಕೆಲಸ ಮಾಡುತ್ತಿದ್ದ ಸ್ನೇಹಿತರು. ಕೆಲಸದ ಒತ್ತಡದಿಂದ ಸ್ವಲ್ಪ ವಿರಾಮ ಪಡೆಯಲು ಗೋಕರ್ಣ, ಧರ್ಮಸ್ಥಳ ಪ್ರವಾಸಕ್ಕೆ ಯೋಜಿಸಿದ್ದರು. ಪ್ರವಾಸಕ್ಕೆ ಹೊರಡುವ ಮುನ್ನ ಧಾರವಾಡದ ಕೆಸಿಡಿ ಸರ್ಕಲ್ ಬಳಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದರ್ಶನ ಪಡೆದ ಬಳಿಕ ಎಲ್ಲರೂ ಸೇರಿ ಒಂದು ಗ್ರೂಪ್ ಸೆಲ್ಫಿ ತೆಗೆದುಕೊಂಡಿದ್ದರು. ದುರದೃಷ್ಟವಶಾತ್, ಆ ಫೋಟೋ ಅವರ ಜೀವನದ ಕೊನೆಯ ಸೆಲ್ಫಿಯಾಗಿದೆ. ದೇವರ ಆಶೀರ್ವಾದ ಪಡೆದು ಹೊರಟವರು ಅರ್ಧ ಹಾದಿಯಲ್ಲೇ ಸಾವಿನ ದವಡೆಗೆ ಸಿಲುಕಿರುವುದು ಸಂಕಟ ಮೂಡಿಸಿದೆ.
ಮೃತರ ವಿವರ:
- ಸಂಜಯ್ ಅಂಗಡಿ (33) - ಚಾಲಕ
- ಅಭಿಷೇಕ ಈಶ್ವರ (28)
- ಅಭಿಷೇಕ ಮಡಬಾವಿ (26)
- ಬಸವರಾಜ (48)
- ಅಕ್ಷಯ್ (26)
- ಮಂಜುನಾಥ ಚುಲಕಿ (32)
- ಸಚಿನ್ (28)
ಗಾಯಾಳುಗಳಾದ ಶಿವರಾಜ್ ಮಡಿವಾಳ್ ಮತ್ತು ಚೆನ್ನಬಸಯ್ಯ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬದುಕುಳಿದ ಶಿವರಾಜ್ ಹೇಳಿಕೆ:
ಅಪಘಾತದಲ್ಲಿ ಬದುಕುಳಿದ ಶಿವರಾಜ್ ಮಾತನಾಡಿ, 'ನಾವು ರಾತ್ರಿ 11 ಗಂಟೆಗೆ ಧಾರವಾಡದಿಂದ ಹೊರಟಿದ್ದೆವು. ನಾವೆಲ್ಲರೂ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದೆವು. ಘಟನೆಯ ಸಮಯದಲ್ಲಿ ನಾನು ಮಲಗಿದ್ದೆ, ಒಮ್ಮೆಲೇ ಜೋರಾಗಿ ಶಬ್ದವಾಯಿತು. ಕಣ್ಣು ಬಿಟ್ಟು ನೋಡಿದಾಗ ಅಪಘಾತವಾಗಿತ್ತು. ನಾನು ಮತ್ತು ಚನ್ನಬಸು ಮಾತ್ರ ಬದುಕಿದ್ದೇವೆ, ಉಳಿದವರೆಲ್ಲಾ ನಮ್ಮ ಕಣ್ಣ ಮುಂದೆಯೇ ಪ್ರಾಣ ಬಿಟ್ಟರು' ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನು ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ವಿಚಾರಿಸಿದ್ದಾರೆ. ಜೊತೆಗೆ, ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.
ಲಾರಿ ಚಾಲಕನ ಪ್ರತಿಕ್ರಿಯೆ:
ಲಾರಿ ಚಾಲಕ ಸಮ್ಸೀರ್ ಪ್ರಕಾರ, ಅರಬೈಲ್ ಘಾಟ್ ಹತ್ತುವಾಗ ಎದುರುಗಡೆಯಿಂದ ಬಂದ ಕ್ರೂಸರ್ ವಾಹನ ಅತ್ಯಂತ ವೇಗವಾಗಿತ್ತು. ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದರೂ ಸಹ ವೇಗವಾಗಿ ಬಂದ ಕ್ರೂಸರ್ ನೇರವಾಗಿ ಲಾರಿಗೆ ಗುದ್ದಿದೆ ಎಂದು ತಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಕೆಲವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು.
ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಘಟನೆ ನಡೆದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಎಸ್ಪಿ ದೀಪನ್ ಮತ್ತು ಸಿಇಒ ದಿಲೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮುಗಿಸಿ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

