- Home
- Karnataka Districts
- ಬರಗಾಲದಿಂದ ಬೆಳೆಯಿಲ್ಲದೆ ರೈತರಿಗೆ ಸಂಕಟ; ಊಟಕ್ಕೊಂದಿಷ್ಟು ಜೋಳ ಬೆಳೆದರೆ ಕಾಡುಹಂದಿಗಳ ಕಾಟ!
ಬರಗಾಲದಿಂದ ಬೆಳೆಯಿಲ್ಲದೆ ರೈತರಿಗೆ ಸಂಕಟ; ಊಟಕ್ಕೊಂದಿಷ್ಟು ಜೋಳ ಬೆಳೆದರೆ ಕಾಡುಹಂದಿಗಳ ಕಾಟ!
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ರೈತನ ಜೋಳದ ಬೆಳೆಯನ್ನು ಕಾಡುಹಂದಿಗಳ ಹಿಂಡು ರಾತ್ರೋರಾತ್ರಿ ನಾಶಪಡಿಸಿದೆ. ಈ ಘಟನೆಯಿಂದಾಗಿ ರೈತ ವೀರೇಶ್‌ಗೆ ಅಪಾರ ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯನಗರ (ಆ.10): ಈಗಾಗಲೇ ಸಕಾಲಕ್ಕೆ ಮಳೆಯಾಗದೆ, ಭೀಕರ ಬರಗಾಲದಿಂದ ಕಂಗಾಲಾಗಿದ್ದ ವಿಜಯನಗರ ಜಿಲ್ಲೆಯ ರೈತರಿಗೆ ಇದೀಗ ಕಾಡು ಪ್ರಾಣಿಗಳ ಹಾವಳಿ ಗಾಯದ ಮೇಲೆ ಎಳೆ ಎಳೆದಂತಾಗಿದೆ. ಕೈಗೆ ಬಂದ ಪಸಲು ಮನೆಗೆ ತಲುಪುವಷ್ಟರಲ್ಲಿ ಕಾಡುಹಂದಿಗಳ ಹಿಂಡು ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿದ್ದು, ರೈತರು ಕಣ್ಣೀರಿಡುವಂತಾಗಿದೆ.
ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಾಡುಹಂದಿಗಳು:
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಿಂಬಳಗೇರಿ ಗ್ರಾಮದಲ್ಲಿ ಇಂತಹದೊಂದು ದಾರುಣ ಘಟನೆ ನಡೆದಿದೆ. ಗ್ರಾಮದ ರೈತ ವೀರೇಶ್ ಎಂಬುವವರು ತಮ್ಮ 2 ಎಕರೆ ಜಮೀನಿನಲ್ಲಿ ಸಾಲ-ಸೋಲ ಮಾಡಿ ಜೋಳದ ಬೆಳೆ ಬೆಳೆದಿದ್ದರು. ತೆನೆ ಬಿಟ್ಟು ಕೊಯ್ಲಿಗೆ ಬಂದಿದ್ದ ಬೆಳೆ ನೋಡಿ ರೈತ ಸಂತಸಗೊಂಡಿದ್ದ. ಆದರೆ, ಶನಿವಾರ ರಾತ್ರಿ ಹೊಲಕ್ಕೆ ನುಗ್ಗಿದ ಕಾಡುಹಂದಿಗಳ ಹಿಂಡು ಅರ್ಧ ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಜೋಳದ ಬೆಳೆಯನ್ನು ರಾತ್ರೋರಾತ್ರಿ ತಿಂದು ತುಳಿದು ಹಾಳುಮಾಡಿವೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ:
ಮಳೆ ಇಲ್ಲದೆ ಕೊಳವೆ ಬಾವಿ ನೀರನ್ನು ನೆಚ್ಚಿಕೊಂಡು, ರಾತ್ರಿ-ಹಗಲೆನ್ನದೆ ಶ್ರಮಪಟ್ಟು ಬೆಳೆಸಿದ್ದ ಜೋಳದ ತೆನೆಗಳನ್ನು ಕಾಡುಹಂದಿಗಳು ನುಚ್ಚುನೂರು ಮಾಡಿವೆ. ಇದರಿಂದಾಗಿ ರೈತ ವೀರೇಶ್‌ಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. 'ಬರಗಾಲದಲ್ಲೂ ಕಷ್ಟಪಟ್ಟು ಬೆಳೆ ಬೆಳೆದಿದ್ದೆವು. ಇನ್ನೇನು ಬೆಳೆ ಮನೆಗೆ ಬರಬೇಕು ಅನ್ನುವಷ್ಟರಲ್ಲಿ ಕಾಡುಹಂದಿಗಳು ಎಲ್ಲವನ್ನೂ ನಾಶ ಮಾಡಿವೆ' ಎಂದು ಬಾಧಿತ ರೈತ ಕಣ್ಣೀರಿಟ್ಟಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ - ಪರಿಹಾರಕ್ಕೆ ಆಗ್ರಹ:
ಕೂಡ್ಲಿಗಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕಾಡುಹಂದಿ, ಕರಡಿ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿಂಬಳಗೇರಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತ ವೀರೇಶ್‌ಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಮತ್ತು ರೈತ ಸಂಘಟನೆಗಳು ಆಗ್ರಹಿಸಿವೆ.

