ವಿಜಯಪುರ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ವೈ.ಬಿ. ವಾಲಿಕಾರ ಅವರಿಗೆ ಪುಸ್ತಕಗಳಿಂದ ತುಲಾಭಾರ ಮಾಡುವ ಮೂಲಕ ವಿಶಿಷ್ಟವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಾಲಿಕಾರ ಅವರ ಗುರುಗಳಾದ ಡಿ.ಬಿ. ಡೇಂಬ್ರೆ ಅವರು ಭಾಗವಹಿಸಿ, ಶಿಷ್ಯನ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಗುರು-ಶಿಷ್ಯರ ಪರಂಪರೆಯ ಮಹತ್ವವನ್ನು ಸಾರುವ ಈ ಸಮಾರಂಭದಲ್ಲಿ ಹಲವು ಗಣ್ಯರು ಗುರುವನ್ನು ಒಂದು ಶಕ್ತಿಯೆಂದು ಬಣ್ಣಿಸಿದರು.
ವಿಜಯಪುರ (ಆ.10): ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆ. ಅಂಥ ಉತ್ತಮರಲ್ಲಿ ಮಹತ್ತರ ಸಾಧನೆ ಮಾಡಿದವರಲ್ಲಿ ನನ್ನ ಶಿಷ್ಯರಲ್ಲಿ ವೈ.ಬಿ. ವಾಲಿಕಾರ ಒಬ್ಬರು ಎಂದು ಡಿ.ಬಿ. ಡೇಂಬ್ರೆ ಹೇಳಿದರು.
ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಮರಡಿ ಸಿದ್ದೇಶ್ವರ ದೇವಸ್ಥಾನದಲ್ಲಿ ಗುರುಗಳಿಗೆ ಪಾದಪೂಜೆ ಕಾರ್ಯಕ್ರಮ ಹಾಗೂ ನಿವೃತ್ತಗೊಂಡ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಿವೃತ್ತಿ ಹೊಂದಿದ ಶಿಕ್ಷಕ ವೈ.ಬಿ. ವಾಲಿಕಾರಗೆ ಪುಸ್ತಕಗಳಿಂದ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಎಂಬ ಶ್ಲೋಕದಂತೆ, ಗುರುಗಳು ನಮ್ಮ ಬದುಕಿನ ಸೃಷ್ಟಿಕರ್ತರು ಮತ್ತು ಮಾರ್ಗದರ್ಶಕರು ಎಂದು ಸಿದ್ದಣ್ಣ ಖಟೆ ಅನಿಸಿಕೆ ವ್ಯಕ್ತಪಡಿಸಿದರು.
ಗುರು ಎಂದರೆ ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿ
ಶಿಕ್ಷಣ ಸಂಯೋಜಕ ಎ.ಕೆ. ದಳವಾಯಿ ಮಾತನಾಡಿ, ‘ಗುರು ಎಂದರೆ ಒಬ್ಬ ವ್ಯಕ್ತಿ ಅಲ್ಲ, ಗುರು ಎಂದರೆ ಒಂದು ಶಕ್ತಿ. ಒಬ್ಬ ಗುರು ಪ್ರಕೃತಿಯಲ್ಲಿರುವ ಮರ, ಗಾಳಿ, ನದಿಯಂತೆ ನಿಸ್ವಾರ್ಥಿಯಾಗಿರುತ್ತಾನೆ’ ಎಂದು ಹೇಳಿದರು. ನಂತರ ಬಾಬುರಾವ ಮಹಾರಾಜರು ಮಾತನಾಡಿದರು.
ವೇದಿಯ ಮೇಲೆ ಹಿರಿಯ ಶಿಕ್ಷಕರಾದ ರೇ.ಸಿ. ಪಾಟೀಲ, ಎ.ಬಿ. ಬಿರಾದಾರ, ವಿಜಯಪುರದ ಆರ್.ಕೆ.ಎಂ ಆಯುರ್ವೇದಿಕ್ ಕಾಲೇಜಿನ ಉಪಪ್ರಾಚಾರ್ಯ ಡಾ.ಸಿದ್ರಾಮಯ್ಯ ಹಿರೇಮಠ, ವೈ.ಬಿ. ವಾಲಿಕಾರ್ ದಂಪತಿ, ಕಾರ್ಯಕ್ರಮ ಆಯೋಜಕರಾಗಿ ದೀಪಕ್ ಅಥಣಿ ಇದ್ದರು. ಡಿ.ಟಿ. ಸಿದ್ನಾಥ, ಆರ್.ಎಂ. ಸಕ್ರಿ ನಿರೂಪಿಸಿದರು. ಎಚ್.ಎನ್. ಮೋಹಿತೆ ಸ್ವಾಗತಿಸಿದರು. ಎನ್.ಬಿ. ಕೋಟಿ ವಂದಿಸಿದರು.


