ಕರ್ನಾಟಕದಲ್ಲಿ ಸರಣಿ ದರೋಡೆ ನಡೆಸುತ್ತಿದ್ದ ಕುಖ್ಯಾತ 'ಚಡ್ಡಿ ಗ್ಯಾಂಗ್' ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಪ್ರತ್ಯಕ್ಷವಾಗಿದೆ. ಲೇಔಟ್ ಒಂದರಲ್ಲಿ ದರೋಡೆಗೆ ಯತ್ನಿಸಿದಾಗ, ಮಹಿಳೆಯೊಬ್ಬರ ಜಾಗರೂಕತೆಯಿಂದ ಪ್ರಯತ್ನ ವಿಫಲವಾಗಿದೆ. ಈ ಹಿಂಸಾತ್ಮಕ ಗ್ಯಾಂಗ್‌ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ, ಜನರಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ (ಆ.10): ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರಣಿ ದರೋಡೆ ನಡೆಸಿ, ಜನರ ನಿದ್ದೆಗೆಡಿಸಿದ್ದ ಕರುಳಬಳ್ಳಿ ಕದೀಮರ ‘ಚಡ್ಡಿ ಗ್ಯಾಂಗ್’ (Chaddi Gang) ಇದೀಗ ರಾಜಧಾನಿ ಬೆಂಗಳೂರಿನ ಹೊಸ್ತಿಲಿಗೆ ಬಂದು ನಿಂತಿದೆ! ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಗೆ ಕನ್ನ ಹಾಕಲು ಯತ್ನಿಸಿರುವ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಆನೇಕಲ್‌ನ ಲೇಔಟ್‌ನಲ್ಲಿ ಭೀತಿ:

ಆನೇಕಲ್ ತಾಲೂಕಿನ ಕುಂಬಾರನಹಳ್ಳಿ ಬಳಿ ಇರುವ ‘ಸೆಲಬ್ರಿಟಿ ಎಕೋ ಫ್ರಂಟ್’ ಬಡಾವಣೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಒಳ ಉಡುಪು (ಚಡ್ಡಿ) ಧರಿಸಿ, ಮುಖಕ್ಕೆ ಬಟ್ಟೆ ಕಟ್ಟುಕೊಂಡು ಬಂದಿದ್ದ ನಾಲ್ವರು ಕದೀಮರ ತಂಡ, ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್ ಮತ್ತು ರಾಮರೆಡ್ಡಿ ಎಂಬುವವರ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಂಚು ರೂಪಿಸಿತ್ತು.

ಮಹಿಳೆಯ ಜಾಗರೂಕತೆಯಿಂದ ತಪ್ಪಿದ ಅನಾಹುತ:

ದರೋಡೆಕೋರರ ಪೈಕಿ ಇಬ್ಬರು ಕದೀಮರು ರಸ್ತೆಯಲ್ಲಿ ಕಾವಲು ನಿಂತಿದ್ದರೆ, ಉಳಿದಿಬ್ಬರು ಮನೆಯ ಕಾಂಪೌಂಡ್ ಏರಿ ಒಳ ನುಗ್ಗಿದ್ದರು. ಕಾಂಪೌಂಡ್ ಗೇಟ್ ಕಟ್ ಮಾಡಿ ಮನೆ ಒಳಗೆ ನುಗ್ಗಲು ಯತ್ನಿಸುತ್ತಿದ್ದಾಗ ಉಂಟಾದ ಶಬ್ದವನ್ನು ಕೇಳಿಸಿಕೊಂಡು ಲೇಔಟ್‌ನ ಮಹಿಳೆಯೊಬ್ಬರು ಕಿಟಕಿಯಿಂದ ಹೊರಗೆ ನೋಡಿದ್ದಾರೆ. ಈ ವೇಳೆ ಕದೀಮರ ಚಲನವಲನ ಕಂಡು ಬೆಚ್ಚಿಬಿದ್ದ ಆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಚೀರಾಟ ಕೇಳಿ ಸೌಂಡ್ ಮಾಡುತ್ತಲೇ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ.

ಜೀವ ತೆಗೆಯಲು ಹಿಂಜರಿಯದ ದರೋಡೆಕೋರರು!

ಈ ಚಡ್ಡಿ ಗ್ಯಾಂಗ್ ಸಾಮಾನ್ಯ ಕಳ್ಳರಲ್ಲ. ಧಾರವಾಡ, ಹುಬ್ಬಳ್ಳಿ, ಹಾಸನ ಸೇರಿದಂತೆ ಕರ್ನಾಟಕದ ಭಾಗಗಳಲ್ಲಿ ಬಾಗಿಲು ಒಡೆದು ಕಳ್ಳತನ ಮಾಡುವುದು ಇವರ ಕಾಯಕ. ಕಳ್ಳತನದ ವೇಳೆ ಮನೆಯಲ್ಲಿ ಯಾರಾದರೂ ಅಡ್ಡ ಬಂದರೆ ಅಥವಾ ಎಚ್ಚರಗೊಂಡರೆ, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಸಹ ಈ ಗ್ಯಾಂಗ್ ಹಿಂಜರಿಯುವುದಿಲ್ಲ. ಜನರ ಜೀವಕ್ಕೆ ಬೆಲೆಯೇ ಕೊಡದ ಈ ದರೋಡೆಕೋರರ ಎಂಟ್ರಿಯಿಂದಾಗಿ ಆನೇಕಲ್ ಹಾಗೂ ಜಿಗಣಿ ಭಾಗದ ಜನರು ತೀವ್ರ ಭೀತಿಯಲ್ಲಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ರಾತ್ರಿ ವೇಳೆ ಜಾಗರೂಕರಾಗಿರುವಂತೆ ಪೊಲೀಸರು ಸೂಚಿಸಿದ್ದಾರೆ.