- Home
- Karnataka Districts
- ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನ ಟೈರ್ ಬ್ಲಾಸ್ಟ್ ಆಗಿ ಪಲ್ಟಿ, ಓರ್ವ ಸಾವು, ಏಳು ಮಂದಿಗೆ ಗಾಯ
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನ ಟೈರ್ ಬ್ಲಾಸ್ಟ್ ಆಗಿ ಪಲ್ಟಿ, ಓರ್ವ ಸಾವು, ಏಳು ಮಂದಿಗೆ ಗಾಯ
ಧಾರವಾಡದಿಂದ ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಪ್ರಯಾಣಿಕರ ವಾಹನದ ಟೈರ್ ಬ್ಲಾಸ್ಟ್ ಆಗಿ ನಡುರಸ್ತೆಯಲ್ಲೇ ಪಲ್ಟಿಯಾಗಿದೆ. ಈ ದುರಂತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಏಳು ಜನ ಗಾಯಗೊಂಡಿದ್ದಾರೆ.

ಕೊಪ್ಪಳ: ಟೈರ್ ಬ್ಲಾಸ್ಟ್ ಆಗಿ ಕ್ರೂಷರ್ ವಾಹನ ಪಲ್ಟಿ
ಧಾರವಾಡದ ಆ ಹತ್ತು ಮಂದಿ ಭಕ್ತರ ಮನಸ್ಸಿನಲ್ಲಿ ಅಂಜನಾದ್ರಿಯ ಹನುಮನ ದರ್ಶನ ಪಡೆಯಬೇಕೆಂಬ ಅತೀವ ಹಂಬಲವಿತ್ತು. ಕ್ರೂಷರ್ ವಾಹನದಲ್ಲಿ ಹರಟೆ ಹೊಡೆಯುತ್ತಾ, ಸಂಭ್ರಮದಿಂದಲೇ ಅವರು ಅಂಜನಾದ್ರಿಯತ್ತ ಸಾಗುತ್ತಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು
ಟೈರ್ ಸ್ಫೋಟಕ್ಕೆ ವಾಹನವೇ ಪಲ್ಟಿ!
ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಷರ್ ವಾಹನ ವೇಗವಾಗಿ ಚಲಿಸುತ್ತಿತ್ತು. ಇನ್ನೇನು ಅಂಜನಾದ್ರಿ ತಲುಪಲು ಕೆಲವೇ ಮೈಲುಗಳ ದೂರ ಬಾಕಿ ಇತ್ತು. ಅಷ್ಟರಲ್ಲಿ ಇಡೀ ಹೆದ್ದಾರಿಯೇ ನಡುಗುವಂತಹ ಭೀಕರ ಶಬ್ದವೊಂದು ಕೇಳಿಬಂತು!
ಕೊಪ್ಪಳ: ಟೈರ್ ಬ್ಲಾಸ್ಟ್ ಆಗಿ ವಾಹನ ಪಲ್ಟಿ
ಬೆಂಕಿಯಂತಹ ಬಿಸಿಲಿನಲ್ಲಿ ಚಲಿಸುತ್ತಿದ್ದ ಕ್ರೂಷರ್ ವಾಹನದ ಟೈರ್ ಏಕಾಏಕಿ ಸ್ಫೋಟಗೊಂಡಿತ್ತು. ಕ್ಷಣಾರ್ಧದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ. ಹತ್ತೂ ಮಂದಿಯ ಕಿರುಚಾಟ, ಆಕ್ರಂದನ ನಡುವೆ ಏನಾಯ್ತು ಎಂದು ಯೋಚಿಸುವಷ್ಟರಲ್ಲಿ ದಿಕ್ಕಪಾಲಾಗಿ ಬಿದ್ದಿದ್ದ ಪ್ರಯಾಣಿಕರು.
ಈ ಭೀಕರ ಅಪಘಾತದಲ್ಲಿ ಓರ್ವ ದುರ್ದೈವಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕೊಪ್ಪಳ: ಗಾಯಾಳುಗಳು ಜಿಲ್ಲಾಸ್ಪತ್ರೆಗೆ ದಾಖಲು
ಅದೃಷ್ಟವಶಾತ್ ಕ್ರೂಷರ್‌ನಲ್ಲಿದ್ದ ಉಳಿದ ಏಳು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೊಪ್ಪಳ ಗ್ರಾಮೀಣ ಪೊಲೀಸರು ಗಾಯಾಳುಗಳನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಅಂಜನಾದ್ರಿ ದರ್ಶನಕ್ಕೆ ಬಂದವರು ಆಸ್ಪತ್ರೆಗೆ!
ಹನುಮನ ದರ್ಶನ ಪಡೆಯಬೇಕೆಂಬ ಭಕ್ತರ ಆಸೆ ಅರ್ಧ ದಾರಿಯಲ್ಲೇ ಕಮರಿ ಹೋಗಿದ್ದು, ಘಟನೆಯ ಮಾಹಿತಿ ತಿಳಿದು ಮೃತರ ಕುಟುಂಬದವರ ಗೋಳು ಮುಗಿಲು ಮುಟ್ಟಿದೆ.

