- Home
- Karnataka Districts
- ಹುಬ್ಬಳ್ಳಿಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ, ಹಾವೇರಿ ಮಹಿಳೆಯ ಅತ್ಯಾ*ಚಾರವೆಸಗಿ ವಿಡಿಯೋ ಹರಿಬಿಟ್ಟ ಯುವಕರು!
ಹುಬ್ಬಳ್ಳಿಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ, ಹಾವೇರಿ ಮಹಿಳೆಯ ಅತ್ಯಾ*ಚಾರವೆಸಗಿ ವಿಡಿಯೋ ಹರಿಬಿಟ್ಟ ಯುವಕರು!
ಹುಬ್ಬಳ್ಳಿಯಲ್ಲಿ ಹಾವೇರಿ ಮೂಲದ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾ*ಚಾರ ಎಸಗಿ, ಆ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣವು ಸ್ಥಳೀಯವಾಗಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದೆ.

ಇಬ್ಬರು ಯುವಕರಿಂದ ಮಹಿಳೆ ಮೇಲೆ ಅತ್ಯಾ*ಚಾರ
ಹುಬ್ಬಳ್ಳಿ: ಇಡೀ ರಾಜ್ಯವನ್ನು ಬೆಚ್ಚಿಬೀಳಿಸುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಹಾವೇರಿ ಮೂಲದ ಮಹಿಳೆ ಮೇಲೆ ಇಬ್ಬರು ಯುವಕರು ಅತ್ಯಾ*ಚಾರ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅತ್ಯಾ*ಚಾರಕ್ಕೊಳಗಾದ ಮಹಿಳೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಶಿವಾನಂದ (29) ಮತ್ತು ಗಣೇಶ್ ಗಿಡ್ಡಣ್ಣವರ (31) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಶಿವಶಂಕರ ಕಾಲೋನಿ ನಿವಾಸಿಗಳಾಗಿದ್ದಾರೆ. ಅತ್ಯಾ*ಚಾರಕ್ಕೊಳಗಾದ ಮಹಿಳೆಯನ್ನು ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾ*ಚಾರ ಮಾಡಿ ವಿಡಿಯೋ ವೈರಲ್ ಮಾಡಿದ ದುರುಳರು
ಪೊಲೀಸ್ ತನಿಖೆಯ ಪ್ರಕಾರ, ಆರೋಪಿಗಳು ಮಹಿಳೆಗೆ ಮದ್ಯಪಾನ ಮಾಡಿ ದೈಹಿಕ ಸಂಪರ್ಕ ಬೆಳೆಸಿ, ಆ ಕ್ಷಣಗಳನ್ನ ವಿಡಿಯೋ ಚಿತ್ರೀಕರಣ ಮಾಡಿದ್ದರು. ಬಳಿಕ ಆ ವಿಡಿಯೋವನ್ನು ಕೆಲವು ಯುವಕರಿಗೆ ಹರಿಬಿಟ್ಟಿದ್ದು, ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ತಲೆ ಬೋಳಿಸಿದ ಸ್ಥಳೀಯರು
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸಿಟ್ಟಿಗೆದ್ದು ಆರೋಪಿಗಳನ್ನು ಥಳಿಸಿದ ಘಟನೆ ಕೂಡ ನಡೆದಿದೆ. ಹುಬ್ಬಳ್ಳಿ ನಗರದ ಶಿವಶಂಕರ್ ಕಾಲೋನಿ ನಿವಾಸಿಗಳು ರೇಪ್ ಮಾಡಿದ ಆರೋಪಿಗಳಿಬ್ಬರ ತಲೆ ಬೋಳಿಸಿದ್ದರು. ಆರೋಪಿಗಳಾದ ಗಣೇಶ್ ಮತ್ತು ಶಿವಾನಂದ ತಲೆ ಮೀಸೆ ಬೋಳಿಸಿ ತಮ್ಮ ಬಡಾವಣೆ ಮರ್ಯಾದೆ ಹಾಳು ಮಾಡಿದ್ದೀರಿ ಅಂತ ಆಕ್ರೋಶ ಹೊರಹಾಕಿದ್ದರು. ಆರೋಪಿಗಳನ್ನು ಹಿಡಿದು ತಲೆ, ಮೀಸೆ ಬೋಳಿಸಿ ಥಳಿಸಿದ್ದರು. ನಂತರ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಿದ್ದರು.
ತಾಂಡಾ ಸಮುದಾಯದ ಆಕ್ರೋಶ
ಆರೋಪಿಗಳ ವಿರುದ್ಧ ತಾಂಡಾ ಸಮುದಾಯದವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, “ಇಂತಹ ಕೃತ್ಯದಿಂದ ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಹೀಗಾಗಿ ಸಮಾಜದ ಹಿರಿಯರು ಸೇರಿ ಆರೋಪಿಗಳ ತಲೆ ಬೋಳಿಸಿ, ಹೊಡೆದು, ಪೊಲೀಸರಿಗೆ ಒಪ್ಪಿಸಿದ್ದೇವೆ. ನಾವು ಮಾಡದೇ ಹೋಗಿದ್ದರೆ ಜನರೇ ಹೊಡೆದು ಕೊಲ್ಲುತ್ತಿದ್ದರು. ಸಮಾಜದ ಹಿರಿಯರು ಮಧ್ಯಪ್ರವೇಶಿಸಿ ಜೀವ ಉಳಿಸಿ ಪೊಲೀಸರಿಗೆ ಒಪ್ಪಿಸಿದ್ದೇವೆ” ಎಂದು ತಿಳಿಸಿದ್ದಾರೆ. ಆದರೆ, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದವರನ್ನೇ ಇದೀಗ ಬಂಧಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆ ಎದುರು ತಾಂಡಾ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸ್ ಕಮಿಷನರ್ ಸ್ಥಳದಲ್ಲೇ ಮುಕ್ಕಾಂ
ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ, ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಠಾಣೆ ಎದುರಲ್ಲೇ ಮುಕ್ಕಾಂ ಹೂಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಲ ನಿಯೋಜಿಸಲಾಗಿದೆ.
ಪ್ರಕರಣದ ಸಂಪೂರ್ಣ ವಿವರ: ಪೊಲೀಸ್ ಆಯುಕ್ತರ ಸ್ಪಷ್ಟನೆ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, “ಈ ತಿಂಗಳ 9ರಂದು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ 35 ವರ್ಷದ ಮಹಿಳೆಯನ್ನು ಹಳೆ ಹುಬ್ಬಳ್ಳಿಯ ಹೆಗ್ಗೆರಿ ಮೈದಾನದಿಂದ ಇಬ್ಬರು ಯುವಕರು ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಮಧ್ಯಪಾನ ಮಾಡಿಸಿದ್ದಾರೆ. ಈ ವೇಳೆ ದೈಹಿಕ ಸಂಪರ್ಕದ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ನಂತರ ಆ ವಿಡಿಯೋವನ್ನು ಕೆಲ ಯುವಕರಿಗೆ ಹರಿಬಿಟ್ಟಿದ್ದಾರೆ. ವಿಡಿಯೋ ಆಧಾರದ ಮೇಲೆ ಮಹಿಳೆಯನ್ನು ಪತ್ತೆಹಚ್ಚಲಾಯಿತು. ಕಳೆದ ಒಂದೂವರೆ ತಿಂಗಳಿಂದ ಆಕೆ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದಳು. ಆರಂಭದಲ್ಲಿ ಆಕೆಯ ಗುರುತು ಸ್ಪಷ್ಟವಾಗದ ಕಾರಣ ಸೋಮೊಟೊ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಮಹಿಳೆಯ ಹೇಳಿಕೆ ಆಧರಿಸಿ ಅತ್ಯಾ*ಚಾರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂವರು ಪ್ರಮುಖ ಆರೋಪಿಗಳು ವಶಕ್ಕೆ
ಈ ಪ್ರಕರಣದಲ್ಲಿ ಶಿವಾನಂದ, ಗಣೇಶ್ ಮತ್ತು ಪ್ರದೀಪ್ ಎಂಬ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಪ್ರದೀಪ್ ಎಂಬಾತನೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾನಂದ ಮತ್ತು ಗಣೇಶ್‌ರನ್ನು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಹಲ್ಲೆ ಮಾಡಿರುವುದೂ ತನಿಖೆಯಲ್ಲಿ ದೃಢಪಟ್ಟಿದೆ.
ಮಹಿಳೆಯ ಹಿನ್ನೆಲೆ
ಪೊಲೀಸರ ಮಾಹಿತಿ ಪ್ರಕಾರ, ಅತ್ಯಾ*ಚಾರಕ್ಕೊಳಗಾದ ಮಹಿಳೆ ಗಂಡನೊಂದಿಗೆ ಉಂಟಾದ ವೈಮನಸ್ಸಿನ ಹಿನ್ನೆಲೆ ಹುಬ್ಬಳ್ಳಿಗೆ ಆಗಮಿಸಿದ್ದಳು. ಸಿದ್ಧಾರೂಢ ಮಠದಲ್ಲಿ ಊಟ ಮಾಡಿಕೊಂಡು, ಭಿಕ್ಷೆ ಬೇಡುತ್ತ ತಿರುಗಾಡುತ್ತಿದ್ದಳು. ಆಕೆಯ ಗಂಡ ಒಂದು ಪ್ರಕರಣದ ಆರೋಪಿಯಾಗಿ ಪ್ರಸ್ತುತ ಶಿವಮೊಗ್ಗ ಜೈಲಿನಲ್ಲಿ ಬಂಧನದಲ್ಲಿದ್ದಾನೆ.
ಒಟ್ಟಿನಲ್ಲಿ, ಮಹಿಳೆಯ ಮೇಲೆ ನಡೆದ ಅಮಾನವೀಯ ಕೃತ್ಯ, ವಿಡಿಯೋ ಚಿತ್ರೀಕರಣ ಹಾಗೂ ವೈರಲ್, ಸ್ಥಳೀಯರ ಹಲ್ಲೆ, ತಾಂಡಾ ಸಮುದಾಯದ ಪ್ರತಿಭಟನೆ ಈ ಎಲ್ಲ ಅಂಶಗಳು ಸೇರಿ ಹುಬ್ಬಳ್ಳಿ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಹಾಗೂ ನ್ಯಾಯಾಂಗ ಪ್ರಕ್ರಿಯೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.

