ಬೆಂಗಳೂರಿನ ಖಾಸಗಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿಯೊಬ್ಬಳು ವಾರಾಂತ್ಯದಲ್ಲಿ ಮದುವೆ ಮಂಟಪಗಳಿಗೆ ನುಗ್ಗಿ ಚಿನ್ನಾಭರಣ ಕದಿಯುತ್ತಿದ್ದಳು. ಬಸವನಗುಡಿ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದು, ಆಕೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (ಡಿ.23): ವಾರಪೂರ್ತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರಾಧ್ಯಾಪಕಿ, ವಾರಾಂತ್ಯದಲ್ಲಿ ಮದುವೆ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ವಿಚಿತ್ರ ಪ್ರಕರಣವೊಂದನ್ನು ಬಸವನಗುಡಿ ಪೊಲೀಸರು ಭೇದಿಸಿದ್ದಾರೆ. ಬಂಧಿತ ಆರೋಪಿತೆಯನ್ನು ಕೆ.ಆರ್. ಪುರಂ ನಿವಾಸಿ, ಮೂಲತಃ ಶಿವಮೊಗ್ಗದ ರೇವತಿ ಎಂದು ಗುರುತಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಪ್ರಾಧ್ಯಾಪಕಿಯ ಕಳ್ಳಾಟ

ರೇವತಿ ಬೆಳ್ಳಂದೂರು ಬಳಿಯ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ವೃತ್ತಿ ಮಾಡುತ್ತಿದ್ದಳು. ಸೋಮವಾರದಿಂದ ಶನಿವಾರದವರೆಗೆ ವೃತ್ತಿಯಲ್ಲಿ ನಿರತಳಾಗುತ್ತಿದ್ದ ಈಕೆ, ಭಾನುವಾರ ಬಂತೆಂದರೆ ಸಾಕು 'ಕಳ್ಳಿಯ' ಅವತಾರವೆತ್ತುತ್ತಿದ್ದಳು. ಸುಂದರವಾಗಿ ಸೀರೆ ಉಟ್ಟು, ಬೆಲೆಬಾಳುವ ಆಭರಣಗಳನ್ನು ಧರಿಸಿ ಮದುವೆ ಮಂಟಪಗಳಿಗೆ ಸಂಬಂಧಿಕರಂತೆ ಎಂಟ್ರಿ ಕೊಡುತ್ತಿದ್ದಳು.

ಕಳ್ಳತನದ ಕಾರ್ಯವೈಖರಿ

ಯಾರಿಗೂ ಅನುಮಾನ ಬಾರದಂತೆ ಮದುವೆ ಮನೆಯವರ ಜೊತೆ ಆತ್ಮೀಯವಾಗಿ ಮಾತನಾಡಿಸಿ, ಅವರ ನಂಬಿಕೆ ಗಳಿಸುತ್ತಿದ್ದಳು. ಎಲ್ಲರೂ ಸಂಭ್ರಮದಲ್ಲಿ ಮೈಮರೆತಾಗ ಅಥವಾ ಫೋಟೋ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾಗ ಅವರ ಬ್ಯಾಗ್ ಅಥವಾ ಆಭರಣಗಳನ್ನು ಎಗರಿಸಿ, ನಂತರ ರಾಜಾರೋಷವಾಗಿ ಮದುವೆ ಊಟ ಮುಗಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು.

ಬಸವನಗುಡಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

ಕಳೆದ ನವೆಂಬರ್ 25 ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯೊಂದರಲ್ಲಿ ರೇವತಿ ಕೈಚಳಕ ತೋರಿದ್ದಳು. ಈ ಸಂಬಂಧ ದಾಖಲಾದ ದೂರಿನ ಬೆನ್ನತ್ತಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈಕೆಯ ಸುಳಿವು ಸಿಕ್ಕಿದೆ. ತನಿಖೆಯ ವೇಳೆ ಈಕೆ ಕೇವಲ ಬಸವನಗುಡಿ ಮಾತ್ರವಲ್ಲದೆ, ನಗರದ ವಿವಿಧ ಭಾಗಗಳ ಕಲ್ಯಾಣ ಮಂಟಪಗಳಲ್ಲಿ ಇದೇ ರೀತಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಲಕ್ಷಾಂತರ ಮೌಲ್ಯದ ಚಿನ್ನ ವಶ

ಸದ್ಯ ಬಂಧಿತಳಿಂದ ಪೊಲೀಸರು ಸುಮಾರು 32 ಲಕ್ಷ ರೂಪಾಯಿ ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಈಕೆ ಮೂರು ಪ್ರಮುಖ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ವಿದ್ಯಾವಂತೆ ಹಾಗೂ ಜವಾಬ್ದಾರಿಯುತ ವೃತ್ತಿಯಲ್ಲಿದ್ದ ಮಹಿಳೆಯೊಬ್ಬಳು ಇಂತಹ ಕೃತ್ಯಕ್ಕೆ ಇಳಿದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.