- Home
- Karnataka Districts
- ತವರೂರು ಕಾರವಾರಕ್ಕೆ ಆಗಮಿಸಿದ ಫೆಮಿನಾ ಮಿಸ್ ಇಂಡಿಯಾ ಸಾಧ್ವಿ ಸೈಲ್; ಕಿರೀಟಕ್ಕೆ ಪೂಜೆ ಸಲ್ಲಿಕೆ
ತವರೂರು ಕಾರವಾರಕ್ಕೆ ಆಗಮಿಸಿದ ಫೆಮಿನಾ ಮಿಸ್ ಇಂಡಿಯಾ ಸಾಧ್ವಿ ಸೈಲ್; ಕಿರೀಟಕ್ಕೆ ಪೂಜೆ ಸಲ್ಲಿಕೆ
ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ, ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು ತಮ್ಮ ತವರೂರು ಕಾರವಾರಕ್ಕೆ ಭೇಟಿ ನೀಡಿದರು. ಅವರಿಗೆ ಅದ್ದೂರಿ ಸ್ವಾಗತ ದೊರೆತಿದ್ದು, ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕಾರವಾರಕ್ಕೆ ಮಿಸ್ ಇಂಡಿಯಾ
ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದ ಸಾಧ್ವಿ ಸೈಲ್ ಅವರು ಇಂದು ಕಾರವಾರಕ್ಕೆ ಆಗಮಿಸಿದ್ದು ನೂರಾರು ಅಭಿಮಾನಿಗಳು ಸಾಧ್ವಿ ಸೈಲ್ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು. ಗೋವಾದಿಂದ ಕಾರವಾರದ ಮಾಲಾದೇವಿ ಮೈದಾನದಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಾಧ್ವಿ ಅವರಿಗೆ ಅಭಿಮಾನಿಗಳು ಪುಷ್ಪ ಮಳೆಗರೆದರು.
ತೆರೆದ ವಾಹನದಲ್ಲಿ ಮೆರವಣಿಗೆ
ತೆರೆದ ವಾಹನದಲ್ಲಿ ಮಿಸ್ ಇಂಡಿಯಾ ಸಾಧ್ವಿ ಅವರು ನಗರದ ಪ್ರಮುಖ ರಸ್ತೆ ಯಲ್ಲಿ ಸಂಚರಿಸಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು. ನಂತರ ಕಾರವಾರದ ಸುಭಾಷ್ ವೃತ್ತದಲ್ಲಿರುವ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿ ಮಿಸ್ ಇಂಡಿಯಾ ಕಿರೀಟವನ್ನು ಗಣಪತಿಯ ಮುಂದೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಗೋವಾ ಪ್ರತಿನಿಧಿಸಿರುವ ಸಾಧ್ವಿ
ಸಾಧ್ವಿ ಸೈಲ್ ಅವರು ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ಪುತ್ರಿಯಾಗಿದ್ದು ಪೆಮಿನಾ ಮಿಸ್ ಇಂಡಿಯಾ 2026 ರಲ್ಲಿ ಗೋವಾ ರಾಜ್ಯ ಪ್ರತಿನಿಧಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಧ್ವಿ ಅವರು ಕಾರವಾರ ಹಾಗೂ ಗೋವಾದ ಜನರು ಭಾರತಾಂಬೆಯ ಮಕ್ಕಳು, ಭೇದಭಾವ ಮಾಡದೇ ಎಲ್ಲರೂ ಪ್ರೀತಿಸಿದ್ದಿರಿ. ಮುಂದೂ ಸಹಃ ನಿಮ್ಮ ಸಹಕಾರ ನನ್ನ ಮೇಲೆ ಇರಲಿ ಎಂದು ಹೇಳಿದರು.
ಸ್ವತಃ ನನ್ನ ಮಗಳು ಸಾದ್ವಿಯೇ
ನನ್ನ ಮಗಳು ನನಗೆ ಅಕ್ಷಯ ತೃತೀಯಾದಂದು ನೀಡಿದ ಗಿಫ್ಟ್ ಇದಾಗಿದೆ. ಸ್ವತಃ ನನ್ನ ಮಗಳು ಸಾದ್ವಿಯೇ, ‘ನಾನು ಮಿಸ್ ಇಂಡಿಯಾ’ ಆಗಿದ್ದೇನೆ ಎಂದು ಹೇಳಿದರೂ ನನಗೆ ನಂಬಲೇ ಆಗಲಿಲ್ಲ. ಹತ್ತು ಬಾರಿ ಖಚಿತಪಡಿಸಿಕೊಂಡೆ. ಎಲ್ಲಿಲ್ಲದ ಖುಷಿಯಾಗಿದೆ. ದೇವರು, ಜನರ ಆಶೀರ್ವಾದದಿಂದ ಇದು ಸಾಧ್ಯ ಆಗಿದೆ. ಮೂರು ತಿಂಗಳಿನಿಂದ ಗಂಭೀರವಾಗಿ ಪ್ರಯತ್ನಿಸಿ ಅಂತಿಮವಾಗಿ ಯಶಸ್ವಿಯಾಗಿದ್ದಾಳೆ. ಅವಳು ಮಿಸ್ ವರ್ಲ್ಡ್ ಸ್ಪರ್ಧೆಗೆ ಹೋಗಲಿದ್ದು, ಅಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಸತೀಶ್ ಸೈಲ್ ಹೇಳಿದ್ದರು.
2027ರ ಮಿಸ್ ವರ್ಲ್ಡ್ ಸ್ಪರ್ಧೆ
ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ಕ್ಯಾಂಪಸ್‌ನಲ್ಲಿ ನಡೆದ 2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸಾದ್ವಿ ಸೈಲ್‌ಗೆ ಸಿಎಂ ಅಭಿನಂದನೆ
ಓಡಿಶಾದಲ್ಲಿ ನಡೆದ ಫೆಮಿನಾಸ್ ಇಂಡಿಯಾ 2026ರ ಕಿರೀಟ ಮುಡಿಗೇರಿಸಿಕೊಂಡ ಶಾಸಕ ಸತೀಶ ಸೈಲ್ ಪುತ್ರಿ ಸಾದ್ವಿ ಸೈಲ್ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದಿಸಿದ್ದರು. ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸಿಎಂ ಈ ಬಗ್ಗೆ ಸ್ವತಃ ಶಾಸಕರೇ ತಮ್ಮಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಿಸ್ ವರ್ಲ್ಡ್ ಸ್ಪರ್ಧೆಯಲ್ಲೂ ಗೆಲುವು ಸಾಧಿಸಲಿ ಎಂದು ಅವರು ಹಾರೈಸಿದ್ದರು.

