- Home
- Karnataka Districts
- ಒಪನ್ ಮ್ಯೂಸಿಯಂ ವಾರಂಗಲ್ ಹಿಂದಿಕ್ಕಿ, ಐತಿಹಾಸಿಕ ದಾಖಲೆ ಬರೆಯುತ್ತ ಹೆಜ್ಜೆಯಿಟ್ಟ ಲಕ್ಕುಂಡಿ
ಒಪನ್ ಮ್ಯೂಸಿಯಂ ವಾರಂಗಲ್ ಹಿಂದಿಕ್ಕಿ, ಐತಿಹಾಸಿಕ ದಾಖಲೆ ಬರೆಯುತ್ತ ಹೆಜ್ಜೆಯಿಟ್ಟ ಲಕ್ಕುಂಡಿ
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 3000ಕ್ಕೂ ಅಧಿಕ ಪುರಾತನ ಕುರುಹುಗಳು ಪತ್ತೆಯಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಪ್ರಾಚ್ಯಾವಶೇಷಗಳನ್ನು ಹೊಂದಿದ ಗ್ರಾಮವಾಗುವತ್ತ ಸಾಗಿದೆ. ಇತ್ತೀಚಿನ ಉತ್ಖನನದಲ್ಲಿ 9-10ನೇ ಶತಮಾನದ ರಾಷ್ಟ್ರಕೂಟರ ಕಾಲದ ಅಪರೂಪದ ವೀರಗಲ್ಲು ಕೂಡ ಪತ್ತೆಯಾಗಿದೆ

3000ಕ್ಕೂ ಅಧಿಕ ಪುರಾತನ ಕುರುಹುಗಳು ಪತ್ತೆ
ಕಲೆ ಮತ್ತು ವಾಸ್ತುಶಿಲ್ಪದ ತವರೂರು, ಐತಿಹಾಸಿಕ ಲಕ್ಕುಂಡಿ ಗ್ರಾಮವು ಇದೀಗ ದೇಶದಲ್ಲೇ ಅತಿ ಹೆಚ್ಚು ಪ್ರಾಚ್ಯಾವಶೇಷಗಳನ್ನು ಹೊಂದಿದ ಮೊದಲ ಗ್ರಾಮ ಎಂಬ ಐತಿಹಾಸಿಕ ದಾಖಲೆ ನಿರ್ಮಿಸುವ ಕಾಲ ಸನ್ನಿಹಿತವಾಗಿದೆ. ಈವರೆಗಿನ ಅನ್ವೇಷಣೆ ಹಾಗೂ ಇತ್ತೀಚಿನ ಪ್ರಾಚ್ಯಾವಶೇಷ ಅನ್ವೇಷಣೆ ಮಾಸಾಚರಣೆಯ ಫಲವಾಗಿ ಲಕ್ಕುಂಡಿಯಲ್ಲಿ ಈಗ ಒಟ್ಟು 3000ಕ್ಕೂ ಅಧಿಕ ಪುರಾತನ ಕುರುಹುಗಳು ಪತ್ತೆಯಾಗಿದ್ದು, ಇಡೀ ದೇಶದ ಗಮನ ಸೆಳೆಯುತ್ತಿದೆ.

ವಾರಂಗಲ್ ಹಿಂದಿಕ್ಕಿದ ಲಕ್ಕುಂಡಿ
ಇದುವರೆಗೆ ತೆಲಂಗಾಣದ ವಾರಂಗಲ್ ದೇಶದ ಮೊದಲ ಒಪನ್ ಮ್ಯೂಸಿಯಂ ಎಂಬ ಹೆಗ್ಗಳಿಕೆ ಹೊಂದಿತ್ತು. ಅಲ್ಲಿ ಸುಮಾರು 2 ಸಾವಿರ ಪ್ರಾಚ್ಯಾವಶೇಷಗಳಿದ್ದವು. ಲಕ್ಕುಂಡಿಯಲ್ಲಿಗ ಈ ಸಂಖ್ಯೆ 3 ಸಾವಿರ ದಾಟುವ ಹಂತದಲ್ಲಿದೆ. ಮೊದಲ ಹಂತದಲ್ಲಿ 1500 ಅವಶೇಷಗಳನ್ನು ಗುರುತಿಸಲಾಗಿತ್ತು. ಇತ್ತೀಚಿನ ವಿಶೇಷ ಅನ್ವೇಷಣಾ ಕಾರ್ಯದಲ್ಲಿ ಮತ್ತೆ 1500 ವಸ್ತುಗಳು ಪತ್ತೆಯಾಗಿವೆ. ಈ ಮೂಲಕ ಲಕ್ಕುಂಡಿ ಅಧಿಕೃತವಾಗಿ ದೇಶದ ಪ್ರಾಚ್ಯಾವಶೇಷಗಳ ರಾಜಧಾನಿ ಎಂಬ ಪಟ್ಟಕ್ಕೇರುವ ಸಾಧ್ಯತೆ ನಿಚ್ಚಳವಾಗಿದೆ.
ಅಪರೂಪದ ವೀರಗಲ್ಲು ಅನಾವರಣ
ಇತ್ತೀಚಿನ ಉತ್ಖನನದ ವೇಳೆ ಲಕ್ಕುಂಡಿಯ ಕುಂಬಾರ ಬಾವಿಯ ಬಳಿ 9- 10ನೇ ಶತಮಾನದ ರಾಷ್ಟ್ರಕೂಟರ ಕಾಲದ ಅತ್ಯಂತ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇದು ಕೇವಲ ಕಲ್ಲಲ್ಲ, ಅಂದಿನ ಶೌರ್ಯ ಮತ್ತು ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿವೆ. ಈ ವೀರಗಲ್ಲು ನಾಲ್ಕು ಹಂತದ ಕೆತ್ತನೆಗಳನ್ನು ಹೊಂದಿದೆ. ಕೆಳಗಿನ ಪಟ್ಟಿಕೆಯಲ್ಲಿ ಯುದ್ಧದ ದೃಶ್ಯವಿದ್ದು (ಮಣ್ಣಿನಲ್ಲಿ ಹೂತಿದೆ), ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಮನಮೋಹಕ ದೃಶ್ಯವಿದೆ.
ಸಂಗೀತ ವಾದ್ಯಗಳ ಕೆತ್ತನೆ
ಸಂಗೀತ ವಾದ್ಯಗಳ ಕೆತ್ತನೆ ಅಂದಿನ ವೈಭವವನ್ನು ಸಾರುತ್ತಿದೆ. ಮೂರನೇ ಪಟ್ಟಿಕೆಯಲ್ಲಿ ವೀರನು ಸ್ವರ್ಗದಲ್ಲಿ ಆಸೀನನಾಗಿದ್ದು, ಚಾಮರಧಾರಿಗಳು ಸೇವೆಯಲ್ಲಿ ನಿಂತಿರುವುದು ಕಂಡುಬರುತ್ತದೆ. ಮೇಲ್ಭಾಗದ ಪಟ್ಟಿಕೆಯಲ್ಲಿ ಸೂರ್ಯ- ಚಂದ್ರ ಹಾಗೂ ಶಿವಲಿಂಗಕ್ಕೆ ಯತಿಯೊಬ್ಬರು ಪೂಜೆ ಸಲ್ಲಿಸುತ್ತಿರುವ ಚಿತ್ರಣವಿದ್ದು, ಇದು ಶಾಸನೋಕ್ತವಾದ ವಿಶೇಷ ವೀರಗಲ್ಲಾಗಿದೆ.
ಅವಿರತ ಶ್ರಮ
ಲಕ್ಕುಂಡಿಯ ಈ ಜಾಗತಿಕ ಮಟ್ಟದ ಸಾಧನೆಯ ಹಿಂದೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರ ಅವಿರತ ಶ್ರಮವಿದೆ. ಲಕ್ಕುಂಡಿಯನ್ನು ವಿಶ್ವ ಪರಂಪರೆಯ ತಾಣವನ್ನಾಗಿ ರೂಪಿಸುವ ಅವರ ಕನಸು ಈಗ ನನಸಾಗುತ್ತಿದೆ. ಅವರ ವಿಶೇಷ ಆಸಕ್ತಿಯಿಂದಾಗಿ ಇಲ್ಲಿ ನಿರಂತರ ಅನ್ವೇಷಣೆ, ಮಾರ್ಕಿಂಗ್ ಹಾಗೂ ಸಂರಕ್ಷಣಾ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಿದ್ದಲಿಂಗೇಶ್ವರ ಪಾಟೀಲ ತಿಳಿಸಿದರು.
ಕೈಬೀಸಿ ಕರೆಯುತ್ತಿದೆ ಲಕ್ಕುಂಡಿ
ಒಟ್ಟಾರೆಯಾಗಿ ಲಕ್ಕುಂಡಿಯು ಕೇವಲ ಗದಗ ಜಿಲ್ಲೆಯ ಹೆಮ್ಮೆಯಷ್ಟೇ ಅಲ್ಲದೆ, ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಅಗ್ರಸ್ಥಾನಕ್ಕೇರಿದೆ. ಇಲ್ಲಿನ ಪ್ರತಿಯೊಂದು ಕಲ್ಲು ಈಗ ಇತಿಹಾಸದ ಕಥೆ ಹೇಳುತ್ತಿದ್ದು, ಪ್ರವಾಸಿಗರನ್ನು ಹಾಗೂ ಸಂಶೋಧಕರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಮಣ್ಣಿನ ಹುದುಗಿ ಹೋಗಿರುವ ಇತಿಹಾಸ ಅಗೆದಷ್ಟು ಆಳಕ್ಕಿಳಿಯುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಯುನೆಸ್ಕೋ ಪಟ್ಟಿ
ಲಕ್ಕುಂಡಿಯನ್ನು ನಾವೆಲ್ಲರೂ ಇಲ್ಲಿಯವರೆಗೂ ನೋಡುತ್ತಿದ್ದ ದೃಷ್ಟಿಕೋನವೇ ಬೇರೆ ಇತ್ತು. ಪ್ರಾಚ್ಯಾವಶೇಷಗಳ ಅನ್ವೇಷಣೆಯ ನಂತರ ಜಗತ್ತೇ ಕಣ್ಣರಳಿಸಿ ನೋಡುವಂತಾಗಿದೆ. ದೇಶ ವಿದೇಶದ ಇತಿಹಾಸ ತಜ್ಞರು ಸಂಶೋಧನಾ ದೃಷ್ಟಿಯಿಂದ ಲಕ್ಕುಂಡಿ ಬರುವಂತಾಗಿದೆ. ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಹೊಂದಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಮ್ಯೂಜಿಯಂ ನಿರ್ಮಾಣವಾಗಲಿ
ದೇಶದಲ್ಲಿಯೇ ಅತ್ಯುತ್ಕೃಷ್ಟ, ಪ್ರಾಚ್ಯಾವಶೇಷಗಳು ಲಕ್ಕುಂಡಿಯಲ್ಲಿ ಲಭ್ಯವಾಗಿದ್ದು, ಅವುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಜೋಡಿಸುವ ಕಾರ್ಯವೂ ನಡೆದಿದೆ. ಆದರೆ ಪ್ರಸ್ತುತ ದೇಶದಲ್ಲಿಯೇ ಅತಿ ದೊಡ್ಡದು ಎನ್ನಲಾದ ವಾರಂಗಲ್ಲನಲ್ಲಿರುವ ತೆರೆದ ಮ್ಯೂಜಿಯಂಗಿಂತಲೂ ಉತ್ತಮವಾದ ಸೌಲಭ್ಯ ಹೊಂದಿರುವ ಒಪನ್ ಮ್ಯೂಜಿಯಂ ಲಕ್ಕುಂಡಿಯಲ್ಲಿ ನಿರ್ಮಾಣವಾಗಬೇಕಿದೆ. ಅಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಒಂದು ವಿಶೇಷ ಅನುಭವ ಮತ್ತು ಇತಿಹಾಸ ಕಲ್ಪನೆ ದೊರೆಯುವಂತಹ ಮ್ಯೂಜಿಯಂ ನಿರ್ಮಾಣವಾಗಲಿ ಎನ್ನುವುದು ಬಹುತೇಕರ ಆಸೆಯಾಗಿದೆ.

