- Home
- Karnataka Districts
- ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ಬಿಗ್ ಶಾಕ್: ಅಡ್ವಾನ್ಸ್ ಬುಕಿಂಗ್ ಆರಂಭ, ಮೊದಲ 600 ವಾಹನಗಳಿಗಷ್ಟೇ ಪ್ರವೇಶ!
ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ಬಿಗ್ ಶಾಕ್: ಅಡ್ವಾನ್ಸ್ ಬುಕಿಂಗ್ ಆರಂಭ, ಮೊದಲ 600 ವಾಹನಗಳಿಗಷ್ಟೇ ಪ್ರವೇಶ!
ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ದಿನಕ್ಕೆ 2 ಬಾರಿ ತಲಾ 600 ವಾಹನಗಳಿಗೆ ಮಾತ್ರ ಪ್ರವೇಶ. ಅಡ್ವಾನ್ಸ್ ಬುಕಿಂಗ್ ಕಡ್ಡಾಯ. ಸ್ವಂತ ವಾಹನ ಬಳಕೆಗೆ ಶುಲ್ಕ (ಟಿಟಿ-200, ಕಾರು-100, ಬೈಕ್/ಆಟೋ-50 ರೂ.). ಭೂಕುಸಿತದ ಅಪಾಯ ತಡೆಯಲು ಈ ಕ್ರಮ.

ಚಿಕ್ಕಮಗಳೂರು (ಜು.16): ಕಾಫಿನಾಡು ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ದಂಡು ಹಿನ್ನೆಲೆಯಲ್ಲಿ ಪ್ರವಾಸಿಗರ ನಿಯಂತ್ರಣಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದಾಗಿದೆ. ಬೆಳಿಗ್ಗೆ 600 ಮಧ್ಯಾಹ್ನ 600 ವಾಹನಗಳಿಗೆ ಮಾತ್ರ ಮುಳ್ಳಯ್ಯನಗಿರಿ ಬೆಟ್ಟದ ಪ್ರದೇಶಕ್ಕೆ ಹೋಗಲು ಅವಕಾಶ ನೀಡಲು ತೀರ್ಮಾನ ಕೈಗೊಂಡಿದೆ.
ಈ ಮೂಲಕ ಒಂದು ದಿನಕ್ಕೆ 1200 ವಾಹನಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಿದ್ದು, ಮುಗಿಬೀಳುವ ಪ್ರವಾಸಿಗರಿಗೆ ಕಡಿವಾಣ ಹಾಕಲು ಮುಂದಾಗಿದೆ. ಇನ್ನು ಇಲ್ಲಿಗೆ ಹೋಗುವವರು ಅಡ್ವಾನ್ಸ್ ಬುಕಿಂಗ್ ಮಾಡಿಕೊಂಡು ಹೋಗಬೇಕು.
ಹೌದು, ಇನ್ನು ಮುಂದೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿಗರ ಸ್ವರ್ಗವಾಗಿರುವ ಮುಳ್ಳಯ್ಯನಗಿರಿಗೆ ಹೋಗಲು ಅಡ್ವಾನ್ಸ್ ಬುಕಿಂಗ್ ಮಾಡಬೇಕು. ಬುಕ್ಕಿಂಗ್ ವಾಹನಗಳು ಸೇರಿದಂತೆ ನಿತ್ಯ ಬೆಳಗ್ಗೆ 600, ಮಧ್ಯಾಹ್ನ 600 ವಾಹನಗಳಿಷ್ಟೆ ಅವಕಾಶ ನೀಡಲಾಗುತ್ತದೆ. ಬುಕ್ಕಿಂಗ್ ಮಾಡಿಕೊಂಡು ಬಂದು ಸ್ವಂತ ವಾಹನದಲ್ಲೇ ಹೋಗೋಕೆ ಹಣ ಪಾವತಿಸಬೇಕು.
ಮುಳ್ಳಯ್ಯನಗಿರಿ ಸೇರಿದಂತೆ ದತ್ತಪೀಠ, ಗಾಳಿಕೆರೆಗೆ ಹೋಗುವ ಭಕ್ತರು ಹಣ ಪಾವತಿಸಿಯೇ ಹೋಗಬೇಕು. ಒಂದು ಟಿ.ಟಿ. ವಾಹನಕ್ಕೆ 200, ಕಾರಿಗೆ 100, ಬೈಕು-ಆಟೋಗೆ 50 ರೂಪಾಯಿ ಕೊಡಬೇಕು.
ಚಿಕ್ಕಮಗಳೂರು ಜಿಲ್ಲಾಡಳಿತವು ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವಾಸಿಗರ ನಿಯಂತ್ರಣಕ್ಕೆ ಮುಂದಾಗಿದೆ. ಮಳೆಯಿಂದ ಗಿರಿ ಪ್ರದೇಶದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಜಿಲ್ಲಾಡಳಿತ ಸಿದ್ಧಪಡಿಸಿರುವ ಅಪಾಯಕಾರಿ ಪ್ರದೇಶಗಳ ಪಟ್ಟಿಯಲ್ಲಿ ಮುಳ್ಳಯ್ಯನಗಿರಿ ರಸ್ತೆಯೂ ಸೇರಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಹೆಚ್ಚಳದಿಂದ ಗಿರಿಯಲ್ಲಿ ಅಪಾಯಕ್ಕೆ ಆಹ್ವಾನವೆಂದು ಪ್ರವಾಸಿಗರ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಚೆಕ್ ಪೋಸ್ಟ್ ಬಳಿಯೇ ಖಾಸಗಿ ವಾಹನ ನಿಲುಗಡೆ:
ಗಿರಿ ಪ್ರವಾಸಕ್ಕೆ ಹೋಗುವವರಿಗೆ ಚೆಕ್ ಪೋಸ್ಟ್ ಬಳಿಯೇ ಪ್ರವಾಸಿಗರ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲಾಗಿದೆ. ಇಲ್ಲಿಂದ ಮುಂದಕ್ಕೆ ಹೋಗಲು ಜಿಲ್ಲಾಡಳಿತದಿಂದ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಆನ್ ಲೈನ್ ಮೂಲಕ ಬುಕ್ ಮಾಡಿ ಸ್ವಂತ ವಾಹನದಲ್ಲಿ ಹೋಗೋಕೆ ಹಣ ಪಾವತಿ ಮಾಡಬೇಕು. ಹಣ ಪಾವತಿ ಮಾಡಲ್ಲ ಎಂದರೆ ಚೆಕ್ ಪೋಸ್ಟ್ ಬಳಿ ಗಾಡಿ ನಿಲ್ಲಿಸಿ ಜಿಲ್ಲಾಡಳಿತದ ವಾಹನದಲ್ಲಿ ಹೋಗಬೇಕು. ಇನ್ನು ಟ್ರಕಿಂಗ್ ಮಾಡುವರಿಗೆ ಮುಕ್ತ ಅವಕಾಶ ನೀಡಲಾಗುತ್ತದೆ. ನಿಗದಿತ ವಾಹನದಲ್ಲೇ ಪ್ರವಾಸಿಗರು ಮುಳ್ಳಯ್ಯನಗಿರಿಗೆ ಹೋಗಬೇಕು.
ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್, ಭೂಕುಸಿತ ತಡೆಯಲು ಕ್ರಮ:
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಹೋಗಲು ಇನ್ನುಮುಂದೆ ಜಿಲ್ಲಾಡಳಿತದ ಅನುಮತಿ ಪಡೆಯುವುದು ಕಡ್ಡಾಯ ಆಗಲಿದೆ. ಇದರಿಂದ ಮುಳ್ಳಯ್ಯನ ಗಿರಿ ಭಾಗದಲ್ಲಿ ಉಂಟಾಗುತ್ತಿದ್ದ ವಾಹನಗಳ ಟ್ರಾಫಿಕ್ ಜಾಮ್, ಭೂ ಕುಸಿತದ ಆತಂಕವನ್ನು ತಡೆಗಟ್ಟಲು ನೆರವಾಗಲಿದೆ. ಮುಳ್ಳಯ್ಯನಗಿರಿಗೆ ನಿತ್ಯ ಸಾವಿರಾರು ವಾಹನಗಳಲ್ಲಿ ಬರುವ ಪ್ರವಾಸಿಗರು ಈ ಜಿಲ್ಲಾಡಳಿತದ ಕ್ರಮವನ್ನು ನೋಡಿಕೊಂಡು ಹೋದರೆ ಅನುಕೂಲಕರ ಆಗಲಿದೆ. ಇಲ್ಲದಿದ್ದರೆ ಚಿಕ್ಕಮಗಳೂರಿನ ಗಿರಿ ಪ್ರದೇಶ ನೋಡಲಾಗದೇ ಸಪ್ಪೆ ಮೋರೆ ಹೊತ್ತು ಸಮಯ ವ್ಯರ್ಥ ಮಾಡಿಕೊಂಡು ವಾಪಸ್ ಬರಬೇಕಾಗುತ್ತದೆ.